ಉಡುಪಿ: ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿ ಸಮೀಪದ ಆತ್ರಾಡಿಯಲ್ಲಿ ನಡೆದಿದೆ.
ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಲು ಮುಂದಾದಾಗ ಮಹಿಳೆ ಮತ್ತು ಆಕೆಯ ಮಗಳ ತಡೆಯೊಡ್ಡಿದ್ದರು ಎನ್ನುವ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಆತ್ರಾಡಿ ಪರೀಕದ ಪಡುಮನೆ ನಾಗಬನ ನಿವಾಸಿ ಆರತಿ (45) ಹಲ್ಲೆಗೊಳಗಾದ ಮಹಿಳೆ.
ಆರತಿ ಅವರಿಗೆ ಸೇರಿದ ಪಟ್ಟಾ ಜಾಗದಲ್ಲಿ ಆತ್ರಾಡಿ ಗ್ರಾಮ ಪಂಚಾಯತ್ ವಿರೋಧದ ನಡುವೆಯೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರಿ ಮಾಡಿದ್ದರು. ಆಕ್ಷೇಪದ ನಡುವೆಯೇ ರಸ್ತೆ ನಿರ್ಮಾಣಕ್ಕೆ ಮುಂದಾದ ಕುರಿತು ಆರತಿ ಪ್ರಶ್ನಿಸಿದ್ದಾರೆ.
ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಪಂಚಾಯತ್ ಸದಸ್ಯ ರತ್ನಾಕರ್ ಶೆಟ್ಟಿ ಈಶ್ವರ ನಗರ ಮತ್ತು ಮನೆ ಪಕ್ಕದ ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿ ಅವರು ಸೇರಿಕೊಂಡು ಆರತಿಯವರಿಗೆ ಹಲ್ಲೆ ನಡೆಸಿದ್ದಾರೆ.
ಈ ಗಲಾಟೆಯ ವೇಳೆ ರತ್ನಾಕರ್ ಶೆಟ್ಟಿ, ಆರತಿಯವರನ್ನು ತಳ್ಳಿದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತಡೆಯಲು ಬಂದ ಆರತಿ ಅವರ ಮಗಳ ಮೇಲೂ ಹಲ್ಲೆ ಮಾಡಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡ ಆರತಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ಪಂಚಾಯಿತಿ ವತಿಯಿಂದ ರಸ್ತೆ ನಿರ್ಮಾಣ ಕಾರ್ಯ ಆಗುತ್ತಿದ್ದು, ಆರತಿ ಅವರ ಮನೆ ಮುಂದೆ ಕಾಂಕ್ರೀಟ್ ಹಾಕುವ ವಿಚಾರದಲ್ಲಿ ಜಗಳ ಆರಂಭವಾಗಿದೆ. ಕಾಂಕ್ರೀಟ್ ಹಾಕಬೇಕಾಗಿರುವ ಜಾಗ ತಮ್ಮದು ಎನ್ನುವುದು ಆರತಿ ಅವರ ವಾದವಾಗಿತ್ತು. ಆದರೆ, ಇದನ್ನು ನೀವು ಜಂಟಿ ಸರ್ವೇಗೆ ಅರ್ಜಿ ಹಾಕಿ ಎಂದು ಪಂಚಾಯತ್ ಸದಸ್ಯ ಹೇಳುತ್ತಾನೆ. ಬಳಿಕ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಯುತ್ತದೆ.