Site icon Vistara News

Grama Vastavya: ಗ್ರಾಮ ವಾಸ್ತವ್ಯಗಳು ನನಗೆ ಪಾಠ ಶಾಲೆ ಇದ್ದಂತೆ, ಕಾಡಿನ ಜನರ ಜೀವನ ನೋಡಿದರೆ ಕಣ್ಣೀರು ಬರುತ್ತೆ: ಆರ್.‌ ಅಶೋಕ್‌

Grama Vastavya are like a school for me says R Ashok

ಬಾಗಲಕೋಟೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಫೆಬ್ರವರಿ 25ರಂದು ಗ್ರಾಮ ವಾಸ್ತವ್ಯಕ್ಕಾಗಿ (Grama Vastavya) ಬಾಗಲಕೋಟೆ ತಾಲೂಕಿನ ಬೀಳಗಿ ವಿಧಾನಸಭಾ ಕ್ಷೇತ್ರದ ಕಲಾದಗಿ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ವೇಳೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ಈ ವೇಳೆ ಮಾತನಾಡಿದ ಅಶೋಕ್‌, ಎಲ್ಲ ಗ್ರಾಮ ವಾಸ್ತವ್ಯಗಳು ನನಗೆ ಪಾಠ ಶಾಲೆ ಇದ್ದಂತೆ, ಬಹಳಷ್ಟು ವಿಷಯಗಳನ್ನು ಇದು ನನಗೆ ಕಲಿಸಿದೆ. ಕಾಡಿನ ಜನರ ಜೀವನ ನೋಡಿದರೆ ಕಣ್ಣೀರು ಬರುತ್ತದೆ. ಅಲ್ಲದೆ, ನನ್ನ ಹೆಚ್ಚಿನ ಗ್ರಾಮ ವಾಸ್ತವ್ಯ ಆಗಿರುವುದು ಉತ್ತರ ಕರ್ನಾಟಕದಲ್ಲಿಯೇ ಎಂದು ಹೇಳಿದರು.

ಮೊದಲಿಗೆ ಅಶೋಕ್‌ ತುಳಸಿಗೇರಿ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಎಂಎಲ್‌ಸಿ ಪಿ.ಎಚ್. ಪೂಜಾರ ಸಾಥ್ ನೀಡಿದರು.

ನನಗೆ ಗ್ರಾಮ ವಾಸ್ತವ್ಯ ಪಾಠ ಶಾಲೆ: ಅಶೋಕ್

ಎಲ್ಲ ಗ್ರಾಮ ವಾಸ್ತವ್ಯಗಳು ನನಗೆ ಪಾಠ ಶಾಲೆಯಾಗಿವೆ. ಕಾಡಿನ ಜನರ ಜೀವನ ನೋಡಿದಾಗ ಕಣ್ಣೀರು ಬರುತ್ತದೆ. ಎಲ್ಲ ಗ್ರಾಮ ವಾಸ್ತವ್ಯವೂ ನನಗೆ ತೃಪ್ತಿ ಕೊಟ್ಟಿದೆ. ನಾನು ಕಾಡಿನ ಅಂಚಿನಲ್ಲೂ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಅದೇ ರೀತಿ ಉತ್ತರ ಕರ್ನಾಟಕದಲ್ಲೂ ವಾಸ್ತವ್ಯ ಹೂಡಿದ್ದೇನೆ. ನನ್ನ ಗ್ರಾಮ ವಾಸ್ತವ್ಯಗಳ ಪೈಕಿ ಹೆಚ್ಚಿನ ವಾಸ್ತವ್ಯ ಉತ್ತರ ಕರ್ನಾಟಕದಲ್ಲಿಯೇ ಆಗಿದೆ. ಹಳೇ ಮೈಸೂರು ಭಾಗದಲ್ಲಿ ಮೂರ್ನಾಲ್ಕು ವಾಸ್ತವ್ಯ ಆಗಿರಬಹುದು. ಉತ್ತರ ಕರ್ನಾಟಕದ ಜನ ನನಗೆ ಸಾಕಷ್ಟು ಪ್ರೀತಿ ತೋರಿಸಿದ್ದಾರೆ, ನನಗೆ ಆಶೀರ್ವಾದ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ಗ್ರಾಮ ವಾಸ್ತವ್ಯಗಳು ನನಗೆ ಪಾಠ ಶಾಲೆ ಇದ್ದಂತೆ ಎಂದು ಕಲಾದಗಿ ಗ್ರಾಮದಲ್ಲಿ ಸಚಿವ ಆರ್.ಅಶೋಕ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಇದನ್ನೂ ಓದಿ: Old Pension: ಹಳೇ ಪಿಂಚಣಿಗಾಗಿ ನಿವೃತ್ತ ಶಿಕ್ಷಕ ಆತ್ಮಹತ್ಯೆ, ಬಾದಾಮಿಯಲ್ಲಿ ಶವವಿಟ್ಟು ಪ್ರತಿಭಟನೆ; ಸರ್ಕಾರಿ ಕೊಲೆ ಎಂದ ಸಿದ್ದರಾಮಯ್ಯ

ಕಾಡು ಪ್ರದೇಶದಲ್ಲಿ ವಾಸ್ತವ್ಯ ಮಾಡಿದ್ದೇನೆ. ಅಲ್ಲಿನ ಜನರು ಮತ್ತು ಅವರ ಬದುಕನ್ನು ನೋಡಿದಾಗ ಕಣ್ಣೀರು ಬರುತ್ತದೆ. ನಾವೆಲ್ಲ ಇಡ್ಲಿ, ವಡೆ, ಸಾಂಬಾರು, ದೋಸೆ ಎಂದು ಬಗೆ ಬಗೆಯ ತಿಂಡಿಗಳನ್ನು ತಿನ್ನುತ್ತಿರುತ್ತೇವೆ. ಪಾಪ ಅವರು ಗೆಡ್ಡೆ, ಗೆಣಸು ತಿಂದು ಜೀವನ ಸಾಗಿಸುತ್ತಾರೆ. ನಾವು ೨೧ನೇ ಶತಮಾನ ದಾಟಿದ್ದೇವೆ. ಆದರೂ ಅವರ ಕಡೆ ಗಮನ ಹರಿಸಿರಲಿಲ್ಲ. ನಾನು ಆ ಕಡೆ ಭೇಟಿ ಮಾಡಿ, ಅವರಿಗೆ ನ್ಯಾಯ ಕೊಡಿಸಬೇಕು. ಅವರ ಉಳುಮೆ ಮಾಡುವ ಜಮೀನು ಅವರಿಗೆ ಸಿಗಬೇಕು. ಜತೆಗೆ ಎಲ್ಲ ಸರ್ಕಾರಿ ಸವಲತ್ತುಗಳು ಅವರಿಗೆ ಸಿಗಬೇಕು ಎಂದು ಆದೇಶ ಮಾಡಿದ್ದೇನೆ. ಈ ಎಲ್ಲ ಆದೇಶ ಆಗಲು ಕಾರಣ ನನ್ನ ಗ್ರಾಮ ವಾಸ್ತವ್ಯ ಎಂದು ಅಶೋಕ್‌ ಹೇಳಿದರು.

ನಾನೂ ಸೈನ್‌ ಹಾಕಿ ಬರುತ್ತಿದ್ದೆ

ಈ ಗ್ರಾಮ ವಾಸ್ತವ್ಯವನ್ನು ನಾನು ಕೈಗೊಳ್ಳದೇ ಇದ್ದರೆ, ನಾನೂ ಎಲ್ಲರಂತೆ ವಿಧಾನಸೌಧದಲ್ಲೇ ಕುಳಿತು ಬೆಳಗ್ಗೆ ಬಂದು ಸೈನ್ ಹಾಕಿ ಮನೆಗೆ ಹೋಗುತ್ತಿದ್ದೆ. ಆದರೆ, ಹಳ್ಳಿಗೆ ಬಂದಿದ್ದರಿಂದ ನಿಜಕ್ಕೂ ಬಡವರ ಕಷ್ಟ ಏನಿದೆ ಎಂಬುದನ್ನು ಬರೆದುಕೊಂಡು. ಕೆಲಸ ಮಾಡೋಕೆ ಒಂದು ಅವಕಾಶ ಸಿಕ್ಕಿದ್ದು, ನಾನದನ್ನು ಉಪಯೋಗಿಸಿಕೊಂಡು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಕಂದಾಯ ಇಲಾಖೆಯು ಇಂದು ಮಾದರಿ ಇಲಾಖೆಯಾಗಿದೆ ಎಂದು ಅಶೋಕ್‌ ಹೇಳಿದರು.

ಸ್ವಾತಂತ್ರ್ಯ ಬಂದು ೭೫ ವರ್ಷ ಕಳೆದರೂ ಕಲಬುರಗಿಯಲ್ಲಿ ಲಂಬಾನಿ ತಾಂಡಾಗಳ ಜೀವನ ಹೇಗಿದೆ? ಇದ್ದಂತಹ ಜಮೀನು ಅವರದ್ದಲ್ಲ. ಅವರಿರುವ ಹಳ್ಳಿಗೆ ಹೆಸರೇ ಇಲ್ಲ.‌ ತಾಂಡಾ ಎಂದಷ್ಟೇ ಕರೆಯಲಾಗುತ್ತಿತ್ತು. ಇಂದು ನಾನು ಆ ಹಳ್ಳಿಗೆ ಹೆಸರು ಕೊಡುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಅಲ್ಲಿನ ೫೦ ಸಾವಿರ ಕುಟುಂಬಗಳಿಗೆ ವಾಸ ಮಾಡಲು ಸರ್ಕಾರಿ ಜಾಗವನ್ನು ಕೊಡಲಾಗುತ್ತಿದೆ ಎಂದು ಅಶೋಕ್‌ ತಿಳಿಸಿದರು.

ಎಲ್ಲ ಕಚೇರಿಗಳಿಗೆ ಜನರು ಅಲೆಯಬಾರದು ಎಂದು ಗ್ರಾಮ ವಾಸ್ತವ್ಯವನ್ನು ಮಾಡಲಾಗುತ್ತಿದೆ. ಸ್ಥಳದಲ್ಲಿಯೇ ಸರ್ಕಾರದ ಸವಲತ್ತು ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಜನರ ಮನೆ ಬಾಗಿಲಿಗೆ ಬಂದಿದ್ದೇವೆ. ೩೦ ಗಂಟೆ ಕಾಲ ಇಲ್ಲೇ ಕಳೆಯುತ್ತೇವೆ. ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತೇವೆ. ಇದುವರೆಗೂ ೪.೫೦ ಲಕ್ಷ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಈ ಪದ್ಧತಿಯು ಮೊದಲು ಇರಲಿಲ್ಲ. ಪ್ರತಿಯೊಂದಕ್ಕೂ ಕಚೇರಿಗಳಿಗೆ ಅಲೆಯಬೇಕಿತ್ತು ಎಂದು ಅಶೋಕ್‌ ತಿಳಿಸಿದರು.

ಇದನ್ನೂ ಓದಿ: Karnataka Election : ಪೂಜೆ ಮಾಡುವಾಗ ಮೋದಿ ಒಳ್ಳೆದಾಗಲಿ ಎಂದು ಪ್ರಾರ್ಥಿಸಿ; ಮಹಿಳೆಯರಿಗೆ ವಿಜಯೇಂದ್ರ ಮನವಿ

ಈ ಅವಧಿಯ ಕೊನೆಯ ಹಂತಕ್ಕೆ ಬಂದಿದ್ದು, ಇದೇ ಕೊನೆಯ ವಾಸ್ತವ್ಯವಾಗಿದೆ. ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಇದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಈ ವಿಶ್ವಾಸ ಎಲ್ಲರಿಗೂ ಇದೆ ಎಂದು ತಿಳಿಸಿದರು.

Exit mobile version