ಮೈಸೂರು: ಸರ್ಕಾರದ ವಿವಿಧ ಸವಲತ್ತುಗಳನ್ನು ಜನರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಭಾಗವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು, ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಭೀಮನಕೊಲ್ಲಿಯ ಕೆಂಚನಹಳ್ಳಿಯಲ್ಲಿ ಶನಿವಾರ ಗ್ರಾಮ ವಾಸ್ತವ್ಯ (Grama Vastavya) ಹೂಡಿದ್ದು, ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನಾ ಗ್ರಾಮಕ್ಕೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ 101 ಕಳಸ ಹೊತ್ತ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಬಳಿಕ ಎತ್ತಿನಗಾಡಿಯಲ್ಲಿ ಸಚಿವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆದೊಯ್ಯಲಾಯಿತು. ಮೆರವಣಿಗೆಗೆ ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿ ವಿವಿಧ ಕಲಾತಂಡಗಳು ಮೆರಗು ನೀಡಿದವು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ಶಾಸಕ ಅನಿಲ್ ಚಿಕ್ಕಮಾದು, ಜಿ.ಪಂ ಸಿಇಒ ಆರ್.ಪೂರ್ಣಿಮಾ, ಎಸ್‌ಪಿ ಆರ್.ಚೇತನ್, ಎಚ್.ಡಿ.ಕೋಟೆ ತಹಸೀಲ್ದಾರ್ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | CM Basavaraja Bommai | ಬೆಂಗಳೂರಿನಲ್ಲಿ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ: ಸಿಎಂ ಘೋಷಣೆ
ನಂತರ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಒಂದು ಲಕ್ಷ ಗಿರಿಜನರಿಗೆ ಹಕ್ಕು ಪತ್ರ ಕೊಡುವ ಕೆಲಸವಾಗುತ್ತಿದೆ. ಇದಕ್ಕಾಗಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ಸಮಯ ನಿಗದಿ ಮಾಡಿ ಮಾಡಲಾಗಿದೆ. ಕಂದಾಯ ಗ್ರಾಮಗಳಿಗೆ ಗಿರಿಜನರು, ಲಂಬಾಣಿ ತಾಂಡಾಗಳು ಸೂಚಿಸಿದ ಹೆಸರನ್ನೇ ಗೆಜೆಟ್‌ಗೆ ತಂದು ಕಾಯಂ ಆಗಿ ಉಳಿಯುವಂತೆ ಮಾಡಲಾಗುತ್ತದೆ. ಪೌತಿ ಖಾತೆ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದ್ದು, ಗ್ರಾಮ ವಾಸ್ತವ್ಯದ ವೇಳೆ ಸ್ಥಳದಲ್ಲೇ ಪೌತಿ ಖಾತೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಉಳುಮೆ ಮಾಡುವ ರೈತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸದಂತೆ ಸೂಚನೆ ಕೊಟ್ಟಿದ್ದೇನೆ. ಕೋಳಿ ಫಾರ್ಮ್ ಸ್ಥಾಪನೆಗೆ ಅನ್ಯಕ್ರಾಂತ ಮಾಡಿಸುವ ಅವಶ್ಯಕತೆ ಇನ್ಮುಂದೆ ಇರಲ್ಲ. 30 ದಿನಗಳ ಕಾಲಾವಕಾಶವಿದ್ದ ಖಾತೆ ಸಮಯವನ್ನು 7 ದಿನಗಳಿಗೆ ಇಳಿಸಿದ್ದೇವೆ. ಎಸ್‌ಸಿ, ಎಸ್‌ಟಿ ಜನಾಂಗ ಸರ್ಕಾರದಿಂದ ಪಡೆದ ಭೂಮಿಗೆ ಮನೆ ಕಟ್ಟಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಸಮ್ಮುಖದಲ್ಲೇ ಅನ್ಯಕ್ರಾಂತಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಹಲೋ ಕಂದಾಯ ಸಚಿವರೇ ಕಾರ್ಯಕ್ರಮದ ಮೂಲಕ ವೃದ್ಧರಿಗೆ ಅರ್ಜಿ ಬಂದ 72 ಗಂಟೆಯಲ್ಲಿ ಮಾಸಾಶನ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಮಳೆ ಹಾನಿಯಿಂದ ಜಿಲ್ಲೆಯಲ್ಲಿ ಬೆಳೆ ಕಳೆದುಕೊಂಡ 3500 ರೈತರಿಗೆ ಬೆಳೆ ಪರಿಹಾರ, ಮನೆ ಕಳೆದುಕೊಂಡವರಿಗೆ 45 ಕೋಟಿ ರೂಪಾಯಿ, ಕೋವಿಡ್‌ನಿಂದ ಮೃತಪಟ್ಟವರಿಗೆ 27 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮ ವಾಸ್ತವ್ಯಕ್ಕಾಗಿ ಭೀಮನಕೊಲ್ಲಿಗೆ ಬಂದಿದ್ದೇನೆ. ಇಲ್ಲಿಯವರೆಗೂ ಕಾಡಿಗೆ ಕಂದಾಯ ಸಚಿವರು, ಜಿಲ್ಲಾಧಿಕಾರಿಗಳು ಬಂದಿರಲಿಲ್ಲ. ಈಗ ನಾನು ಬಂದಿದ್ದೇನೆ. ಡಿಸಿಯವರು, ಕಂದಾಯ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಸಸ್ಯಕಾಶಿ, ಪ್ರಕೃತಿ, ಸಂಘರ್ಷದ ಮಧ್ಯೆ ನೀವೆಲ್ಲ ಬದುಕುತ್ತಿದ್ದೀರಿ. ಇಲ್ಲಿಗೆ ಬಂದಾಗ ನಿಮ್ಮ ಕಷ್ಟ ಏನು, ಸಮಸ್ಯೆ ಏನು ಎಂಬುವುದು ತಿಳಿಯುತ್ತದೆ. ನಿಮ್ಮ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕೊಡಲು ಯತ್ನಿಸುತ್ತೇವೆ ಎಂದರು.
ಅಂಗವಿಕಲನಿಗೆ ಕೃತಕ ಕಾಲು ಜೋಡಣೆ
ಸರ್ಕಾರದ ಸವಲತ್ತು ಜನರಿಗೆ ನೀಡಲು ಭೀಮನಕೊಲ್ಲಿಗೆ ಆಗಮಿಸಿದ್ದ ಕಂದಾಯ ಸಚಿವ ಸಚಿವ ಆರ್.ಅಶೋಕ್ ಅವರು, ಅಂಗವಿಕಲ ವ್ಯಕ್ತಿಗೆ ಕೃತಕ ಕಾಲು ಜೋಡಣೆ ಮಾಡಿದರು. ಅಮಾವಾಸ್ಯೆ ಎಂಬುವವರಿಗೆ ಸಚಿವರು ಕೃತಕ ಕಾಲು ಜೋಡಣೆ ಮಾಡಿ, ಕೈ ಹಿಡಿದು ನಡೆಸಿದರು. ಇದಕ್ಕೂ ಮುನ್ನ ವಿಕಲಚೇತನ ಅಮಾವಾಸ್ಯೆ ಎಂಬುವವರ ಕೈಯಲ್ಲೇ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಆರ್.ಅಶೋಕ್ ಉದ್ಘಾಟಿಸಿದರು.
ಸಾಗುವಳಿ ಚೀಟಿ ನೀಡಲು ಕ್ರಮ
ಕಂದಾಯ ಸಚಿವರೊಬ್ಬರು ಮೊದಲ ಬಾರಿಗೆ ಹಾಡಿಯಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಅದು ನಾನೇ ಆಗಿರುವುದು ಸಂತಸವಾಗಿದೆ. ಗ್ರಾಮ ವಾಸ್ತವ್ಯದಿಂದ ಜನರ ಸಾಕಷ್ಟು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅನುಕೂಲವಾಗಿದೆ.
ಎಚ್.ಡಿ.ಕೋಟೆಯ ಗಿರಿಜನರ ವಾಸ್ತವ್ಯ ಇರುವ ಭಾಗದಲ್ಲಿ ಇಂದಿನ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. 27 ಗಂಟೆಗಳ ಕಾಲ ಕೆಂಚನಹಳ್ಳಿ ಗ್ರಾಮದಲ್ಲಿ ಇರುತ್ತೇನೆ. 7 ಸಾವಿರ ಜನರಿಗೆ ಸರ್ಕಾರಿ ಸವಲತ್ತುಗಳನ್ನು ಇಂದೇ ನೀಡಲಾಗುವುದು.
52 ವರ್ಷಗಳಿಂದ ಈ ಭಾಗದ ಜನರು ಸಾಗುವಳಿ ಚೀಟಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅದರ ಪರಿಹಾರಕ್ಕೂ ಕ್ರಮ ವಹಿಸಲಾಗುವುದು ಎಂದು ಆರ್.ಅಶೋಕ್ ತಿಳಿಸಿದರು.
ಕಾಡುಪ್ರಾಣಿಗಳು- ಮಾನವ ಸಂಘರ್ಷ, ಮುಳುಗಡೆ ಭೂಮಿಗೆ ಬದಲಿ ಜಮೀನು, ಗಿರಿಜನರು ಆದಿವಾಸಿಗಳ ಸವಲತ್ತು ಬಗ್ಗೆ ಗ್ರಾಮ ವಾಸ್ತವ್ಯದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ಇದೇ ರೀತಿ ರಾಜ್ಯದ 200 ಕಡೆ ಗ್ರಾಮ ವಾಸ್ತವ್ಯ ನಡೆಸುವ ಯೋಜನೆ ಇದೆ. ಗ್ರಾಮ ವಾಸ್ತವ್ಯದಿಂದ 6 ಲಕ್ಷ ಹೆಕ್ಟೇರ್ ಸರ್ಕಾರಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಜನರ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ತೆರಳಿ ಮನಗಂಡು ಪರಿಹರಿಸಲು ಗ್ರಾಮ ವಾಸ್ತವ್ಯ ಅನುಕೂಲವಾಗಿದೆ ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಕಂದಾಯ ಸಚಿವರು ಗ್ರಾಮ ವಾಸ್ತವ್ಯಕ್ಕೆ ಎಚ್.ಡಿ.ಕೋಟೆ ತಾಲೂಕು ಆಯ್ಕೆಮಾಡಿಕೊಂಡಿರುವುದು ಖುಷಿ ತಂದಿದೆ. ಸದನದಲ್ಲಿ 75 ಎಂಎಲ್ಎಗಳು ಹೊಸಬರಿದ್ದೀವಿ. ಅವರೆಲ್ಲರಿಗೂ ಅಶೋಕ್ ಅವರು ಮಾರ್ಗದರ್ಶನ ಕೊಡುತ್ತಾರೆ. ಅವರಿಗೆ ಯಾವ ಖಾತೆ ಕೊಟ್ಟರೂ ಅದನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂದು ಹೇಳಿದರು.
ಕಂದಾಯ ಗ್ರಾಮಗಳಾಗಿ ಘೋಷಿಸಲು ಮನವಿ
ದೇವರಾಜ ಅರಸು ಕಾಲದಲ್ಲಿ ಉಳುವವನೇ ಭೂಮಿ ಒಡೆಯ ಯೋಜನೆ ಜಾರಿಗೆ ತರಲಾಗಿತ್ತು. ಕಳೆದ 50 ವರ್ಷಗಳಿಂದ ಎಚ್.ಡಿ.ಕೋಟೆ ಭಾಗದ ಜನರು ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಅಂತಹ ರೈತರಿಗೆ ಹಕ್ಕುಪತ್ರ ಒದಗಿಸುವ ಕೆಲಸ ಕಂದಾಯ ಸಚಿವರಿಂದ ಆಗುತ್ತಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದಲ್ಲೂ ಸಚಿವರ ಪಾತ್ರ ದೊಡ್ಡದಿದೆ. ಉತ್ತಮ ಸೇವೆ ಸಲ್ಲಿಸುವ ಇಂತಹವರು ಸದನದಲ್ಲಿ ಇರಬೇಕು ಎಂದ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು, ಎಚ್.ಡಿ. ತಾಲೂಕಿನ 48 ಪುನರ್ವಸತಿ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಸಸ್ಯಾಹಾರಿ ಊಟ ಸೇವನೆ
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಸಚಿವ ಆರ್.ಅಶೋಕ್ ಅವರು ಸಸ್ಯಾಹಾರಿ ಊಟ ಸವಿದರು. ಭೀಮನಕೊಲ್ಲಿಯ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಚಪಾತಿ, ಪಲ್ಯ, ಗೊಜ್ಜು, ಅನ್ನ, ಸೌತೆಕಾಯಿ ಸಾಂಬಾರ್, ತಿಳಿ ಸಾಂಬಾರ್, ಮಜ್ಜಿಗೆ, ಬರ್ಫಿ, ನಂಜನಗೂಡು ರಸ ಬಾಳೆ ಊಟವನ್ನು ಗಣ್ಯರೊಂದಿಗೆ ಸಾಲಿನಲ್ಲಿ ಕುಳಿತು ಸೇವಿಸಿದರು. ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಜನರ ಅಹವಾಲು ಆಲಿಸಿದ ಬಳಿಕ ಸಚಿವರು, ಹಾಡಿಯ ವಿವೇಕಾನಂದ ಆಶ್ರಮ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
ಇದನ್ನೂ ಓದಿ | Karnataka Politics | ಕುಮಾರಸ್ವಾಮಿ ನಿತ್ಯ ನನ್ನ ಜತೆ ಸಂಪರ್ಕದಲ್ಲಿದ್ದಾರೆ, ನಾನು ಬಿಜೆಪಿ ಬಿಡಲ್ಲ: ರಮೇಶ್ ಜಾರಕಿಹೊಳಿ