ಹಾವೇರಿ: ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Sahitya Sammelana) ಸಂಬಂಧಪಟ್ಟಂತೆ ಎಲ್ಲ ರೀತಿಯ ಪೂರ್ವಭಾವಿ ತಯಾರಿ ನಡೆಯುತ್ತಿದೆ. ನವೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಸಮ್ಮೇಳನವನ್ನು ಆಚರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮಯ ಸಾಲುತ್ತಿಲ್ಲ ಎಂದು ಪ್ರತಿ ಬಾರಿಯೂ ಹೇಳಲಾಗುತ್ತದೆ. ಆದರೆ, ಈ ಬಾರಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ನವೆಂಬರ್‌ನಲ್ಲಿ ನಾವು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡಿಯೇ ಮಾಡುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಖಾತೆಗೆ ಬರಲಿಲ್ಲ ೨೦ ಕೋಟಿ ರೂ.
ನವೆಂಬರ್ ೧೧ರಿಂದ ಮೂರು ದಿನಗಳ ಕಾಲ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿತ್ತು. ಅಲ್ಲದೆ, ಕನ್ನಡ ಸಂಸ್ಕೃತಿ ಇಲಾಖೆಯಿಂದ ೧೫ ಕೋಟಿ ರೂಪಾಯಿ, ಪರಿಷತ್‌ಗೆ ನೀಡಲಾಗಿರುವ ಅನುದಾನದಲ್ಲಿ ೫ ಕೋಟಿ ರೂಪಾಯಿ ಬಳಕೆಗೆ ಅನುಮತಿ ನೀಡಿ ಆದೇಶ ಹೊರಡಿಸಲಾಗಿತ್ತು. ಆದರೆ, ಸಮ್ಮೇಳನಕ್ಕೆ ಸರಿಸುಮಾರು ೪೨ ದಿನಗಳಷ್ಟೇ ಬಾಕಿ ಇದ್ದರೂ ಯಾವುದೇ ರೀತಿಯ ಕಾರ್ಯ ಆಗದೇ ಇರುವುದು, ಸ್ವಾಗತ ಸಮಿತಿ ಖಾತೆಗೆ ಹಣ ಹಾಕದೇ ಇರುವುದು ಸಾರಸ್ವತ ಲೋಕದ ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ಈ ಬಗ್ಗೆ ಸಿಎಂ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದ್ದು, ಅದ್ಧೂರಿ ಆಚರಣೆ ಮಾಡುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕ ಶೀಘ್ರ ಸೇರ್ಪಡೆ: ಸಿಎಂ ಬೊಮ್ಮಾಯಿ
ಬಜೆಟ್‌ನಲ್ಲಿ ಹೇಳಿರುವಂತೆ ಕಾರ್ಯಗತ
ಕೆಎಂಎಫ್ ಯೂನಿಯನ್ ಕಚೇರಿ ಉದ್ಘಾಟನೆಗಾಗಿ ನಾನು ಹಾವೇರಿಗೆ ಬಂದಿದ್ದೇನೆ. ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದೆ. ಇದರಿಂದ ನಮ್ಮ ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ. ಇಂಡಸ್ಟ್ರಿಯಲ್ ಪಾರ್ಕ್ ಇರಬಹುದು, ನೀರಾವರಿ ಯೋಜನೆಗಳಿರಬಹುದು ಎಲ್ಲವನ್ನೂ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೇಳಿದಂತೆ ಹಂತ ಹಂತವಾಗಿ ಕಾರ್ಯಗತ ಮಾಡುತ್ತಿದ್ದೇನೆ ಎಂದು ಸಿಎಂ ತಿಳಿಸಿದರು.
ಪಿಎಫ್‌ಐ ಈಗಾಗಲೇ ಬ್ಯಾನ್ ಆಗಿದೆ. ಇದು ಹಲವು ರೂಪಾಂತರ ಪಡೆದುಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಮೊದಲು ಸಿಮಿ ಇತ್ತು, ಸಿಮಿಯಿಂದ ಕೆಎಫ್‌ಡಿ ಆಯ್ತು. ನಂತರ ಪಿಎಫ್‌ಐ ಆಯ್ತು. ಎಸ್‌ಡಿಪಿಐ ಚುನಾವಣಾ ಆಯೋಗದಿಂದ ನೋಂದಣಿಯಾಗಿರುವ ರಾಜಕೀಯ ಪಕ್ಷವಾಗಿದೆ. ಅದರ ಬಗ್ಗೆ ಬೇರೆ ರೀತಿಯದ್ದೇ ಕಾನೂನುಗಳಿವೆ. ಆ ಕುರಿತು ಕೇಂದ್ರ ಸರ್ಕಾರ ಅದರದ್ದೇ ಆದ ಕ್ರಮ ಜರುಗಿಸಲಿದೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗುಂಡ್ಲುಪೇಟೆಯಲ್ಲಿ ಜೋಡೋ ಯಾತ್ರೆ ಫ್ಲೆಕ್ಸ್ ಹರಿದು ಹಾಕಿರುವ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಯವರು ಎಲ್ಲಿಯೂ ಫ್ಲೆಕ್ಸ್ ಹಾಕಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಬಗ್ಗೆ ಮಾಧ್ಯಮದವರು ಸಿಎಂ ಪ್ರಶ್ನಿಸಿದಾಗ, “ಡಿ.ಕೆ.ಶಿವಕುಮಾರ್ ಇರಲಿ, ಯಾರೇ ಇರಲಿ ಫ್ಲೆಕ್ಸ್ ಹಾಕಬೇಕಾದರೆ ಅದಕ್ಕೆ ಅನುಮತಿ ಪಡೆಯಬೇಕು. ಯಾವುದೇ ರಾಜಕೀಯ ಪಕ್ಷದ ಫ್ಲೆಕ್ಸ್ ಹರಿಯುವ ಅಗತ್ಯವಿಲ್ಲ. ಜನರಿಗೆ ಗೊತ್ತಿದೆ. ದೇಶವನ್ನು ಯಾರು ಜೋಡೋ ಮಾಡಿದ್ದಾರೆ? ಯಾರು ತೋಡೋ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಿಎಫ್‌ಐ ಬ್ಯಾನ್ ಎಲೆಕ್ಷನ್ ಗಿಮಿಕ್ ಎಂಬ ಬಿ.ಕೆ.ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅವರು ಬೇರೆ ಏನನ್ನೂ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ಇಷ್ಟು ವರ್ಷ ವಿದ್ವಂಸಕ ಕೃತ್ಯ ನಮ್ಮೆದುರಲ್ಲೇ ನಡೆದಿದೆ. ಕೊಲೆ, ಭಯೋತ್ಪಾದಕ ಚಟುವಟಿಕೆ ನಡೆದಿವೆ. ಇದೇ ಕಾಂಗ್ರೆಸ್ ವಿಧಾನಸಭೆ ಒಳಗಡೆ ಹೊರಗಡೆ ಪಿಎಫ್‌ಐ ಬ್ಯಾನ್ ಮಾಡಿ ಎಂದು ಕೂಗಿಕೊಂಡಿತ್ತು. ಈಗ ಬ್ಯಾನ್ ಮಾಡಿದಾಗ ಹೀಗೆ ಮಾತನಾಡಿದರೆ ಏನು? ಇದಕ್ಕೆ ಯಾವುದೇ ಅರ್ಥವಿಲ್ಲ ಎಂದು ಸಿಎಂ ಹೇಳಿದರು.
ಕಾಂಗ್ರೆಸ್‌ನ ಭಾರತ್ ಜೋಡೋ ಅಭಿಯಾನಕ್ಕೆ ಕರ್ನಾಟಕದಲ್ಲಿ ಸಾಹಿತಿಗಳು ಬೆಂಬಲ ಕೊಡುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ, ನಮ್ಮ ನಾಡಿನಲ್ಲಿ ಹಲವಾರು ಸಾಹಿತಿಗಳು ಇದ್ದಾರೆ. ಹೀಗೆ ಪರ-ವಿರೋಧ ಇರುವುದು ಸಾಮಾನ್ಯ. ಒಂದಷ್ಟು ಸಾಹಿತಿಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿದರೆ, ಮತ್ತಷ್ಟು ಜನ ನಮ್ಮ ಬಿಜೆಪಿಗೆ ಸಾಥ್ ನೀಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಉತ್ತರಿಸಿದರು. ಹಾವೇರಿ ಭೇಟಿ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಇದನ್ನೂ ಓದಿ | PFI banned | ಪಿಎಫ್‌ಐ ಆಯ್ತು, ಈಗ ಎಸ್‌ಡಿಪಿಐ ಮೇಲೆ ಚುನಾವಣಾ ಆಯೋಗ ಕಣ್ಣು?