Site icon Vistara News

Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

Grihalakshmi Scheme eligibility and Laxmi Hebbalkar

ಬೆಂಗಳೂರು:‌ ಗಂಡ ತೆರಿಗೆ ಕಟ್ಟುತ್ತಿದ್ದರೆ ಮಾತ್ರವಲ್ಲ ಮಗ ತೆರಿಗೆ ಕಟ್ಟುತ್ತಿದ್ದರೂ ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಯೋಜನೆಯಾಗಿರುವ “ಗೃಹಲಕ್ಷ್ಮಿ”ಗೆ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಒಂದೇ ದಿನಕ್ಕೆ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಈ ಯೋಜನೆಗೆ ಗಂಡ ತೆರಿಗೆ ಕಟ್ಟುವುದು ಮಾತ್ರ ಒಳಪಡುತ್ತದೆ. ಮಗ ತೆರಿಗೆ ಕಟ್ಟುತ್ತಿದ್ದರೆ, ಜಿಎಸ್‌ಟಿ ರಿಟರ್ನ್ಸ್‌‌ ಸಲ್ಲಿಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲ. ಅದಕ್ಕೂ ಇದಕ್ಕೂ ಸಂಬಂಧ ಕಲ್ಪಿಸುವುದಿಲ್ಲ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈಗ ಸೋಷಿಯಲ್‌ ಮೀಡಿಯಾ ಸೇರಿದಂತೆ ಹೊರಗಡೆ ಚಾಲ್ತಿಯಲ್ಲಿರುವ ಗೃಹಲಕ್ಷ್ಮಿ ಫಾರ್ಮ್ ಅಸಲಿಯಾಗಿದೆ. ಕೆಲವೊಂದು ಬದಲಾವಣೆ ಮಾಡಲಿದ್ದೇವೆ. ಬ್ಯಾಂಕ್ ಪಾಸ್‌ಬುಕ್‌ ಅನ್ನು ಸೇರಿಸಲಾಗುವುದು. ಜಾತಿ ಬದಲು ವರ್ಗ ಅಂತ ಹಾಕುತ್ತೇವೆ. ಸಂದೇಶ ತಪ್ಪಾಗಿ ಹೋಗಬಾರದು ಎಂದು ಹೇಳಿದರು.

ಶೇಕಡಾ 90ರಷ್ಟು ಬಿಪಿಎಲ್ ಕಾರ್ಡ್‌ ಮಹಿಳೆಯರು ಅರ್ಹರಿದ್ದಾರೆ. ಯಾರಿಗೆಲ್ಲ ಫಲ ಸಿಗಬೇಕೋ ಅವರನ್ನೆಲ್ಲ ಸೇರ್ಪಡೆ ಮಾಡಲಾಗುತ್ತದೆ. ಈಗ ಬಂದಿರುವ ಅರ್ಜಿ ಡ್ರಾಫ್ಟ್ ಮಾತ್ರ. ಆಗಸ್ಟ್ 17 ಅಥವಾ 18ರಂದು ಬೆಳಗಾವಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು.

ಇದನ್ನೂ ಓದಿ: Dinesh Gundu Rao: ಬಿಜೆಪಿ ಅವಧಿಯ 108 ಆಂಬ್ಯುಲೆನ್ಸ್‌, ಡಯಾಲಿಸಿಸ್‌ ಟೆಂಡರ್‌ ರದ್ದು; ಆರೋಗ್ಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ

ಗೃಹ ಲಕ್ಷ್ಮಿ ಯೋಜನೆ ಮಾರ್ಗಸೂಚಿ

  1. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
  2. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ, ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.
  3. ಈ ಯೋಜನೆಯ ಫಲಾನುಭವಿಗಳು 2023ರ ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬೇಕು. ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
  4. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕವಾಗಲೀ ಅಥವಾ ಭೌತಿಕವಾಗಿಯಾಗಲೀ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  5. ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯಂ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡುವುದು. ಅರ್ಜಿಯಲ್ಲಿನ ಅಂಶಗಳ ಬಗ್ಗೆ, ತದನಂತರ ಪರಿಶೀಲನೆ ಮಾಡುವುದು. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡುವುದು ಮತ್ತು ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು.
  6. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಣೆ ಮಾಡುವುದು.
  7. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಹಾಗೂ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸುತ್ತಿದ್ದರೆ ಯೋಜನೆಗೆ ಅರ್ಹರಲ್ಲ.
Exit mobile version