Site icon Vistara News

Power Point with HPK : ಕಾಂಗ್ರೆಸ್‌ನಲ್ಲೂ ಗುಂಪಿದೆ, ನನ್ನ ಜತೆ ಶಾಸಕರು ಮುಂದೂ ಇರುತ್ತಾರೆ; ಟಿಫನ್‌ ಪಾಲಿಟಿಕ್ಸ್‌ ಬಗ್ಗೆ ಸತೀಶ್‌ ಉತ್ತರ

satish jarkiholi in Power Point with HPK

ಬೆಂಗಳೂರು: ನಮ್ಮ ಮನೆಯಲ್ಲಿ ಉಪಾಹಾರ ಸೇವನೆ ಮಾಡಿರುವುದರ ಹಿಂದೆ ಯಾರಿಗೂ ಎಚ್ಚರಿಕೆ ನೀಡುವ ಇಲ್ಲವೇ ಸಂದೇಶ ರವಾನೆ ಮಾಡುವಂತಹ ಅಥವಾ ಯಾವುದೇ ಸಂದೇಶ ರವಾನೆ ಮಾಡುವಂತಹ ಉದ್ದೇಶ ಇಲ್ಲ. ಶಾಸಕರ ಗುಂಪು ಈ ಹಿಂದೆಯೂ ಸಹ ಅಂದರೆ ಚುನಾವಣೆ ಪೂರ್ವದಲ್ಲಿಯೂ ನನ್ನ ಜತೆ ಇತ್ತು. ಈಗಲೂ ಶಾಸಕರು ನನ್ನ ಜತೆ ಇದ್ದಾರೆ. ಇನ್ನು ಮುಂದೆಯೂ ಇರುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ (PwD Minister Satish Jarkiholi) ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಇದೊಂದು ಸಮಾನ ಮನಸ್ಕರ ಗುಂಪೇ ಹೊರತೂ ಅದು ಭಿನ್ನಮತವಾಗಲೀ, ಪಕ್ಷ ವಿರೋಧಿ ಚಟುವಟಿಕೆಯಾಗಲೀ ಯಾವುದೂ ಅಲ್ಲ ಎಂದು ಸ್ಪಷ್ಟನೆ ನೀಡಿದರು.

ಎಲ್ಲ ಪಕ್ಷದಲ್ಲಿಯೂ ಗುಂಪು ಇದೆ

ಕಾಂಗ್ರೆಸ್‌ ಪಕ್ಷ ಅಂತ ಅಲ್ಲ. ಯಾವುದೇ ಪಕ್ಷದಲ್ಲಿ ಗುಂಪು ಎಂಬುದು ಇದ್ದೇ ಇರುತ್ತದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಕೂಡಾ ಬಣ ರಾಜಕೀಯ ಇದೆ. ಅದೇ ರೀತಿಯಲ್ಲಿ ನಮ್ಮಲ್ಲಿ ಗುಂಪು ಸಹ ಇದೆ. ಆದರೆ, ಚುನಾವಣೆ ಬಂದ ಮೇಲೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ರಾಜಕೀಯದಲ್ಲಿ ಎಲ್ಲರೂ ಪ್ರಯತ್ನ ಮಾಡುತ್ತಾರೆ. ಶಾಸಕರಾದವರು ಮಂತ್ರಿ ಆಗಬೇಕು ಎಂದು ಬಯಸುತ್ತಾರೆ. ಮಂತ್ರಿಯಾದವರು ಇನ್ನೂ ಮೇಲೆ ಹೋಗಬೇಕು ಎಂದು ಆಸೆ ಆಕಾಂಕ್ಷೆಗಳು ಇದ್ದೇ ಇರುತ್ತದೆ. ಇದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಜನರು ನಮ್ಮ ಜತೆಗೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಮ್ಮನ್ನು ಗುರುತಿಸಲಾಗುತ್ತದೆ. ಆಗ ಪಕ್ಷ ಕೂಡಾ ಗುರುತಿಸುತ್ತದೆ. ಜನರು ನಮ್ಮಿಂದ ಯಾವಾಗ ದೂರ ಆಗುತ್ತಾರೋ ಆಗ ನಾವು ನಮ್ಮ ಮುಖಂಡತ್ವವನ್ನು ಕಳೆದುಕೊಳ್ಳುತ್ತೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿ ಸಿದ್ದರಾಮಯ್ಯ ಎಂಬುದು ಊಹೆ ಅಷ್ಟೇ

ರಾಜ್ಯ ಕಾಂಗ್ರೆಸ್‌ ಬೆಳವಣಿಗೆಯಲ್ಲಿ ಸತೀಶ್‌ ಜಾರಕಿಹೊಳಿ ಪಾತ್ರಧಾರಿ ಮಾತ್ರ, ಸೂತ್ರಧಾರಿ ಸಿದ್ದರಾಮಯ್ಯ ಅಂತ ನಡೆಯುತ್ತಿರುವ ಚರ್ಚೆ ಊಹೆಯಷ್ಟೇ. ಏನೇ ಇದ್ದರೂ ಅದು ಸಿದ್ದರಾಮಯ್ಯ ಅವರ ತಲೆ ಮೇಲೆ ಬರುತ್ತದೆ. ಅವರು ಹೇಳಿರಬಹುದು, ಮಾಡಿರಬಹುದು ಎಂಬ ಊಹೆ ಇದ್ದೇ ಇರುತ್ತದೆ ಎಂದು ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: Power Point with HPK : ಜನ ಇರೋವರೆಗೂ ನಮ್ಮ ಕಂಟ್ರೋಲ್‌ನಲ್ಲೇ ಇರುತ್ತೆ ಬೆಳಗಾವಿ: ಸತೀಶ್‌ ಜಾರಕಿಹೊಳಿ

ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ

ನಾಯಕನಾಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ಪಕ್ಷ ಹಾಗೂ ಜನರು ಇದನ್ನು ತೀರ್ಮಾನಿಸಬೇಕಾಗುತ್ತದೆ. ನಮ್ಮ ನಾಯಕತ್ವವನ್ನು ಜನರೂ ಒಪ್ಪಿಕೊಳ್ಳಬೇಕಾಗುತ್ತದೆ. ಜತೆಗೆ ಪಕ್ಷ ಗುರುತಿಸಬೇಕು. ಅಲ್ಲಿಯವರೆಗೆ ನಾವು ಕಾಯಬೇಕು. ಈಗಂತೂ ನಾನು ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ. ಆದರೆ, ಮುಂದಿನ ಬಾರಿ ಖಂಡಿತವಾಗಿಯೂ ನನಗೆ ಆಸೆ ಇದೆ ಎಂಬುದನ್ನು ಈಗಾಗಲೇ ಹೇಳಿದ್ದೇನೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

Exit mobile version