Site icon Vistara News

Arecanut Price : ಭೂತಾನ್‌ ಅಡಿಕೆಯಿಂದ ಬೆಳೆಗಾರರು ಹೆದರಬೇಕಿಲ್ಲ; ಆರಗ ಜ್ಞಾನೇಂದ್ರ ಹೇಳಿದ್ದೇನು?

Araga jnanedra and anupriya talking on Bhutan arecanut import issue infront arecanut tree

ಬೆಂಗಳೂರು/ಶಿರಸಿ: ಭೂತಾನ್‌ನಿಂದ ಭಾರತಕ್ಕೆ ವಾರ್ಷಿಕವಾಗಿ 17 ಸಾವಿರ ಟನ್‌ ಹಸಿ ಅಡಿಕೆಯನ್ನು ಆಮದು (Bhutan arecanut import) ಮಾಡಿಕೊಳ್ಳಲಾಗುತ್ತಿದೆ ಎಂಬ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಹೇಳಿಕೆಯು ರಾಜ್ಯದ ಅಡಿಕೆ ಬೆಳೆಗಾರರಲ್ಲಿ (Arecanut growers) ತೀವ್ರ ಆತಂಕವನ್ನು ಹುಟ್ಟುಹಾಕಿತ್ತು. ಅಲ್ಲದೆ, ಇದು ಸ್ಥಳೀಯ ಮಾರುಕಟ್ಟೆ ಮೇಲೆ ಪ್ರಭಾವ ಬೀರಿ ಬೆಲೆಯಲ್ಲಿ ಕುಸಿತ ಆಗಬಹುದು ಎಂಬ ಭಯವೂ ಕಾಡಿತ್ತು. ಇದೇ ಸಂದರ್ಭದಲ್ಲಿ ಉತ್ತರ ಕನ್ನಡ ಮಾರುಕಟ್ಟೆಯಲ್ಲಿ (Uttara Kannada arecanut Market) ಸರಿಸುಮಾರು ಸಾವಿರ ರೂಪಾಯಿ ಆಸುಪಾಸಿನಲ್ಲಿ ಬೆಲೆ (Arecanut Price) ಕುಸಿತ ಕಂಡಿತ್ತು. ಆದರೆ, ಈ ಬಗ್ಗೆ ಮಾಜಿ ಗೃಹ ಸಚಿವ, ರಾಜ್ಯ ಅಡಿಕೆ ಕಾರ್ಯಪಡೆಯ (Arecanut Task Force) ಮಾಜಿ ಅಧ್ಯಕ್ಷ ಆರಗ ಜ್ಞಾನೇಂದ್ರ (Araga Jnanendra) ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ಯಾವುದೇ ಭಯ ಆತಂಕ ಬೇಡ ಎಂದು ಹೇಳಿದ್ದಾರೆ.

ಕೇಂದ್ರ ಸಚಿವೆ ಅನುಪ್ರಿಯಾ ಅವರು ಲೋಕಸಭೆಯಲ್ಲಿ ಕೊಟ್ಟ ಹೇಳಿಕೆಯನ್ನು ಗಮನಿಸಿದ್ದೇನೆ. ಬೆಳೆಗಾರರ ಆತಂಕದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆಯೇ ಭೂತಾನ್‌ನಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರದಿಂದ ಅನುಮತಿಯನ್ನು ನೀಡಲಾಗಿದೆ. ಭೂತಾನ್‌ ನಮ್ಮ ಆಪ್ತ ದೇಶಗಳಲ್ಲಿ ಒಂದಾಗಿದೆ. ಜತೆಗೆ ಚೀನಾದ ಪಕ್ಕವೇ ಇರುವ ಈ ದೇಶದ ಜತೆ ಉತ್ತಮ ಬಾಂಧವ್ಯವನ್ನು ಹೊಂದುವುದು ಸಹ ಅನಿವಾರ್ಯವಾಗಿದೆ. ಇದರ ಭಾಗವಾಗಿ ಅವರೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಫ್ರೀ ಟ್ರೇಡ್‌ ಅಗ್ರಿಮೆಂಟ್‌) ವನ್ನು ಮಾಡಿಕೊಳ್ಳಲಾಗಿದೆ. ಇನ್ನು ಭೂತಾನ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತದೆ. ಅಲ್ಲದೆ, 17 ಸಾವಿರ ಟನ್‌ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಮಾತ್ರವೇ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ಇನ್ನೂ ಬಂದಿಲ್ಲ ಭೂತಾನ್‌ ಅಡಿಕೆ

ಇದರಲ್ಲಿ ಸುಮಾರು ಶೇ. 15ರಷ್ಟು ಮಾತ್ರ ಒಣ ಅಡಿಕೆ ಬರುತ್ತದೆ. ಆದರೆ, ಇನ್ನೊಂದು ಮಹತ್ವದ ಅಂಶವೆಂದರೆ ಭೂತಾನ್‌ನಿಂದ ಇದುವರೆಗೂ ಒಂದೇ ಒಂದು ಅಡಿಕೆಯೂ ಭಾರತಕ್ಕೆ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ಹಸಿ ಅಡಿಕೆಯು ಕೊಳೆತು ಹೋಗುವ ಅಪಾಯ ಇರುವುದು. ಏಕೆಂದರೆ ಈ ಪ್ರಮಾಣದ ಹಸಿ ಅಡಿಕೆಯನ್ನು ಸಮುದ್ರ ಮಾರ್ಗವಾಗಿ ತರಬೇಕು ಎಂದು ಒಪ್ಪಂದದಲ್ಲಿ ನಿಬಂಧನೆಯನ್ನು ಹಾಕಲಾಗಿದೆ. ಹಾಗೆ ಭೂತಾನ್‌ನಿಂದ ಹಸಿ ಅಡಿಕೆಯನ್ನು ಸಮುದ್ರ ಮಾರ್ಗವಾಗಿ ತರಬೇಕೆಂದರೆ ಕನಿಷ್ಠ 15 ದಿನವಾದರೂ ಬೇಕು. ಹೀಗಾಗಿ ಈ ಕಾರಣಕ್ಕಾಗಿ ಭಯ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಭೂತಾನ್‌ ಅಡಿಕೆಗೂ, ಮಾರುಕಟ್ಟೆ ವ್ಯತ್ಯಯಕ್ಕೂ ಇಲ್ಲ ಕಾರಣ

ಇನ್ನು ಕೇಂದ್ರ ಸಚಿವರ ಹೇಳಿಕೆಗೂ ಅಡಿಕೆ ಧಾರಣೆ ಕುಸಿತಕ್ಕೂ ಯಾವುದೇ ಸಂಬಂಧ ಇಲ್ಲ. ಭೂತಾನ್‌ನಿಂದ ಬರುವ ಅಡಿಕೆಯ ಪ್ರಮಾಣವು ನಮ್ಮ ಮಾರುಕಟ್ಟೆ ಮೇಲೆ ಪ್ರಭಾವ ಬೀರುವಷ್ಟು ಇಲ್ಲ. ಈಚೆಗೆ ಇಡಿ ಅಡಿಕೆಗೆ ಕ್ವಿಂಟಾಲ್‌ಗೆ 55 ಸಾವಿರ ರೂಪಾಯಿ ಬೆಲೆ ಬಂದಿತ್ತು. ಇನ್ನು ಕೆಲವು ದಿನದಲ್ಲಿ 60 ಸಾವಿರ ರೂಪಾಯಿ ತಲುಪುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಡಿಮ್ಯಾಂಡ್‌ ಆ್ಯಂಡ್ ಸಪ್ಲೇ ಆಧಾರದ ಮೇಲೆ ವ್ಯಾಪಾರಿಗಳೇ ದರ ಇಳಿಸುತ್ತಿರುವ ಗುಮಾನಿ ಇದೆ. ಈ ಬಗ್ಗೆ ನಾವು ಸಹ ಮಾರುಕಟ್ಟೆ ಅಧ್ಯಯನ ನಡೆಸುತ್ತೇವೆ ಎಂದು ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: DK Shivakumar : ಬಾರ್‌ ಕೌನ್ಸಿಲ್‌ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ಡಿ.ಕೆ ಶಿವಕುಮಾರ್‌ ಹೆಸರು ಡಿಲೀಟ್‌

ಆತಂಕಕ್ಕೆ ಕಾರಣವಾಗಿದ್ದು ಏಕೆ?

ಭೂತಾನ್‌ನಿಂದ ಭಾರತಕ್ಕೆ ವಾರ್ಷಿಕವಾಗಿ 17 ಸಾವಿರ ಟನ್‌ ಹಸಿ ಅಡಿಕೆಯನ್ನು ಆಮದು (Bhutan arecanut import) ಮಾಡಿಕೊಳ್ಳಲಾಗುತ್ತದೆ ಎಂಬ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ನೀಡಿದ್ದ ಹೇಳಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ ಅಡಿಕೆಗೆ ಒಂದು ಸಾವಿರ ರೂಪಾಯಿಯಿಂದ ಎರಡು ಸಾವಿರ ರೂಪಾಯಿವರೆಗೆ ದರದಲ್ಲಿ ಇಳಿಕೆ ಕಂಡಿತ್ತು. ಇದರಿಂದ ಬೆಳೆಗಾರರಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಯಾಗಿತ್ತು.

ರಾಜ್ಯದಲ್ಲಿ ಪರಂಪರಾಗತವಾಗಿ ಅಡಿಕೆ ಬೆಳೆಯುವ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರದೇಶವನ್ನು ದಾಟಿ ಐದು ವರ್ಷಗಳಲ್ಲಿ ವಿವಿಧ ಜಿಲ್ಲೆಗಳಿಗೆ ಅಡಿಕೆ ಬೆಳೆ ವಿಸ್ತರಣೆಯಾಗಿದೆ. ಹೊರ ರಾಜ್ಯಗಳಲ್ಲೂ ಅಡಿಕೆ ಕ್ಷೇತ್ರ ವಿಸ್ತರಣೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೇಡಿಕೆ ಇಲ್ಲದಿದ್ದರೂ ಹೊರ ದೇಶದಿಂದ ಆಮದು ಮಾಡಿಕೊಳ್ಳುವುದು ಇಲ್ಲಿನ ಬೆಳಗಾರರಿಗೆ ನೀಡುವ ಪೆಟ್ಟು ಎಂದು ಬೇಸರವನ್ನು ಹೊರಹಾಕಲಾಗಿತ್ತು. ಆದರೆ, ಮುಕ್ತ ವ್ಯಾಪಾರ ಒಪ್ಪಂದ ನೀತಿಯನ್ನು ಭೂತಾನ್‌ ಸೇರಿದಂತೆ ಹಲವು ದೇಶಗಳ ನಡುವೆ ಈ ಮೊದಲಿನಿಂದಲೂ ಮಾಡಿಕೊಂಡು ಬರಲಾಗಿದೆ. ಅದನ್ನು ಒಂದು ಸರ್ಕಾರ ತೆಗೆದುಹಾಕಲು ಸಾಧ್ಯವಿಲ್ಲ. ಇನ್ನು ಆಮದು ಮಾಡಿಕೊಳ್ಳುವ ಪ್ರಮಾಣ ಸಹ ಕಡಿಮೆಯಾಗಿದೆ. ಅದೂ ಅಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ಈವರೆಗೆ ಭೂತಾನ್‌ನಿಂದ ಒಂದೇ ಒಂದು ಅಡಿಕೆಯೂ ಭಾರತದ ಮಾರುಕಟ್ಟೆಯನ್ನು ಪ್ರವೇಶ ಮಾಡಿಲ್ಲ ಎಂದು ಆರಗ ಜ್ಞಾನೇಂದ್ರ ಸ್ಪಷ್ಟನೆಯನ್ನು ನೀಡಿದ್ದರು.

4.20 ಲಕ್ಷ ಹೆಕ್ಟೇರ್ ಅಡಿಕೆ ಪ್ರದೇಶ

ರಾಜ್ಯದಲ್ಲಿ ಒಟ್ಟಾರೆ 4.20 ಲಕ್ಷ ಹೆಕ್ಟೇರ್ ಅಡಿಕೆ ಪ್ರದೇಶವಿದೆ. ದೇಶದ ಅಡಿಕೆ ಉತ್ಪಾದನೆಯ ಶೇ.35ಕ್ಕೂ ಹೆಚ್ಚು ಅಡಿಕೆಯನ್ನು ಕರ್ನಾಟಕ ರಾಜ್ಯದಿಂದಲೇ ಉತ್ಪಾದಿಸಲಾಗುತ್ತಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅಡಿಕೆ ಉತ್ಪಾದನೆಯು ಶೇ.30ರಷ್ಟು ಹೆಚ್ಚಿದೆ’ ಎಂದು ಮಾರುಕಟ್ಟೆ ತಜ್ಞರು ಮಾಹಿತಿ ನೀಡಿದ್ದಾರೆ.

ಆಮದು ಸಾಧ್ಯವಿದೆಯೇ?

ಭೂತಾನ್‌ ದೇಶದಲ್ಲಿ ಬಂದರುಗಳು ಇಲ್ಲದಿರುವುದರಿಂದ ಅಡಿಕೆಯನ್ನು ಭೂಮಾರ್ಗದಿಂದ ತಂದ ಬಳಿಕ ಪಶ್ಚಿಮ ಬಂಗಾಲದ ಜಯಗಾನ್ ಹಾಗೂ ಚಾಮೂರ್ಚಿ ಬಂದರಿನಿಂದ ಆಮದು ಮಾಡಿಕೊಳ್ಳಬೇಕು. ಇದರಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತದೆ ಅನ್ನುವ ವಾದ ಇದೆ. ತಜ್ಞರ ಪ್ರಕಾರ ಭೂತಾನ್‌ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಅಡಿಕೆ ಬೆಳೆ ಬೆಳೆಯಲು ಪ್ರಾರಂಭಿಸಿದ್ದು ಅಲ್ಲಿನ ಅಡಿಕೆ ಗುಣಮಟ್ಟದಿಂದ ಕೂಡಿಲ್ಲ. ಒಂದು ಕ್ವಿಂಟಾಲ್‌ ಹಸಿ ಅಡಿಕೆಯಲ್ಲಿ ಕಾಲು ಭಾಗಕ್ಕಿಂತಲೂ ಕಡಿಮೆ ಒಣ ಅಡಿಕೆ ಸಿಗುವುದರಿಂದ ಮಾರುಕಟ್ಟೆಯಲ್ಲಿ ಪರಿಣಾಮ ಬೀರಲಾರದು ಎನ್ನುವ ಅಭಿಪ್ರಾಯವೂ ಇದೆ.

ಬೆಳಗಾರರಿಗೆ ತೊಂದರೆ
ವಿದೇಶದಿಂದ ಅಡಿಕೆ ಆಮದಿಗೆ ನಮ್ಮ ತಕರಾರಿಲ್ಲ. ಆದರೆ, ಆಮದಾಗುವ ಅಡಿಕೆಗೆ ಸೂಕ್ತ ತೆರಿಗೆ ವಿಧಿಸಬೇಕಾಗುತ್ತದೆ. ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಅಡಿಕೆ ಬೆಳೆಗಾರರು ಇದ್ದಾರೆ. ನಮ್ಮಲ್ಲಿ ಅಡಿಕೆಗೆ ಏನು ಕೊರತೆಯಿಲ್ಲ. ಕೊರತೆ ಇದ್ದರೆ ವಿದೇಶದಿಂದ ಆಮದು ಮಾಡಿಕೊಳ್ಳುದರಲ್ಲಿ ಅರ್ಥವಿದೆ. ಆದರೆ ಈ ನಿಲುವು ಸಂಪೂರ್ಣ ದೊಡ್ಡ ಲಾಭಿಯಿಂದ ಕೂಡಿದೆ. ಭೂತಾನ್‌ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಕಂಟೇನರ್‌ನಲ್ಲಿ ತುಂಬಿದ ಅಡಿಕೆ ನಮ್ಮಲ್ಲಿ ಬರಲು 18 ದಿನಗಳಾದರೂ ಬೇಕು. ಅಷ್ಟರಲ್ಲಿ ಅಡಿಕೆ ಕೊಳೆತು ಹೋಗುತ್ತದೆ. ಉತ್ತಮ ಗುಣಮಟ್ಟದ ಅಡಿಕೆ ನಮಗೆ ದೊರೆಯುವುದು ಕಷ್ಟ ಸಾಧ್ಯವಾಗಿದೆ. ಅದೇನೇ ಇದ್ದರೂ ಅಡಿಕೆ ಆಮದು ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧಾರ ಕೈಗೊಳ್ಳಲಾಗಿದೆ. ಭೂತಾನ್ ಅಡಿಕೆ ಆಮದಿನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಬೆಳೆಗಾರರು ಇನ್ನಷ್ಟು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ.
| ಎಂ.ಆರ್. ಹೆಗಡೆ, ಅಧ್ಯಕ್ಷ, ಮಲೆನಾಡು ಕೃಷಿ ಅಭಿವೃದ್ಧಿ ಸೊಸೈಟಿ, ಯಲ್ಲಾಪುರ

ಇದನ್ನೂ ಓದಿ: Weather Report : ಇಂದಿನಿಂದ ಅರ್ಧ ಕರ್ನಾಟಕದಲ್ಲಿ ವರ್ಷಧಾರೆ; ಬೆಂಗಳೂರು ಸ್ವಲ್ಪ ಕೂಲ್!

ಎಲ್ಲೆಲ್ಲಿ ಎಷ್ಟೆಷ್ಟು ಪ್ರದೇಶದಲ್ಲಿ ಬೆಳೆ?

ಶಿವಮೊಗ್ಗ ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟೇರ್‌, ಉತ್ತರ ಕನ್ನಡ 33,365 ಹೆಕ್ಟೇರ್‌, ದಕ್ಷಿಣ ಕನ್ನಡ 30,450 ಹೆಕ್ಟೇರ್‌ನಷ್ಟು ಅಡಿಕೆ ಪ್ರದೇಶವಿದೆ. ಇದರ ಜೊತೆ ಅಸಾಂಪ್ರದಾಯಿಕವಾಗಿ ವಿಸ್ತರಣೆಯಾದ ಅಡಿಕೆಯು ತುಮಕೂರು ಜಿಲ್ಲೆಯಲ್ಲಿ 35,839 ಹೆಕ್ಟೇರ್‌, ಚಿತ್ರದುರ್ಗ 25,061 ಹೆಕ್ಟೇರ್‌, ದಾವಣಗೆರೆ 30,811 ಹೆಕ್ಟೇರ್‌, ಹಾವೇರಿ 6,901 ಹೆಕ್ಟೇರ್‌, ಚಿಕ್ಕಮಗಳೂರು 29,214 ಹೆಕ್ಟೇರ್‌ ಪ್ರದೇಶದಲ್ಲಿ ಫಲ ನೀಡುತ್ತಿದೆ.

Exit mobile version