Site icon Vistara News

Gruha Lakshmi : ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಗೆ ಟಾಸ್ಕ್‌; ತಲಾ 2000 ಮಹಿಳೆಯರನ್ನು ಕರೆತರಲು ಆದೇಶ

Gruhalakshmi scheme

ಬೆಂಗಳೂರು: ಕಾಂಗ್ರೆಸ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಮಿತ್ರ ಪಕ್ಷಗಳ ಒಕ್ಕೂಟದ (Opposition Parties meet) ಸಭೆಗೆ ರಾಜಕಾರಣಿಗಳನ್ನು ಸ್ವಾಗತಿಸಿ ಆತಿಥ್ಯ (Hospitality) ನೀಡುವ ಕೆಲಸಕ್ಕೆ ಐಎಎಸ್‌ ಅಧಿಕಾರಿಗಳನ್ನು (IAS officer) ಬಳಸಿಕೊಂಡಿದ್ದ ಸರ್ಕಾರ, ಇದೀಗ ಮತ್ತೊಂದು ಎಡವಟ್ಟು ಮಾಡಲು ಹೊರಟಿದೆ. ಸರ್ಕಾರದ ಆ ಒಂದು ಆದೇಶವನ್ನು ಗಮನಿಸಿದರೆ ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ (Goverments work is Gods work) ಅನ್ನೋ ಮಾತಿನ ಬದಲು ಸರ್ಕಾರಿ ಕೆಲಸ ಅಂದರೆ ಸರ್ಕಾರ ಹೇಳಿದ ಕೆಲಸ ಮಾಡಬೇಕು ಅನ್ನುವ ಹಾಗಾಗಿದೆ. ಇದೀಗ ಬೆಳಗಾವಿಯಲ್ಲಿ ನಡೆಯಲಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಉದ್ಘಾಟನಾ ಕಾರ್ಯಕ್ರಮದ ದಿನ ವಾರ್ಡ್‌ವಾರು ಮಹಿಳಾ ಸಮಾವೇಶ (womens meet ನಡೆಸುವ ಟಾಸ್ಕ್‌ನ್ನು ಅಧಿಕಾರಿಗಳಿಗೆ ವಹಿಸಲಾಗಿದೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಅದ್ಧೂರಿ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಸರ್ಕಾರ ಅದನ್ನು ಯಶಸ್ವಿಗೊಳಿಸುವ ಸಲುವಾಗಿ ಸಲುವಾಗಿ ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಿದೆ. ಅದೇನೆಂದರೆ ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಆರ್‌ಓ ಹಾಗೂ ಎಆರ್‌ಓಗಳು ಒಂದೊಂದು ವಾರ್ಡ್‌ನಲ್ಲಿ ತಲಾ 2 ಸಾವಿರ ಮಹಿಳೆಯರನ್ನು ಸೇರಿಸಿ ಕಾರ್ಯಕ್ರಮ ನಡೆಸಲು ಸೂಚನಿಸಲಾಗಿದೆ. ಅಲ್ಲಿಗೆ ಬರುವ ಮಹಿಳೆಯರ ಊಟ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಅಧಿಕಾರಿಗಳೇ ನೋಡಿಕೊಳ್ಳಬೇಕು ಎನ್ನುವ ಸೂಚನೆಯನ್ನು ಕೂಡಾ ನೀಡಲಾಗಿದೆ.

ಬಿಬಿಎಂಪಿಯ 8 ವಲಯಗಳಲ್ಲಿ ಆಗಸ್ಟ್ 3ರಂದು ನಡೆದ ಹಿರಿಯ ಅಧಿಕಾರಿಗಳ ನೇತೃತ್ವದ ಸಭೆಯಲ್ಲಿ ಈ ಸೂಚನೆ ಕೊಡಲಾಗಿತ್ತು. ಇದೀಗ ಪಾಲಿಕೆ ಮೂಲಕವೇ ಸರ್ಕಾರ ಆದೇಶ ಹೊರಡಿಸಿದೆ.

ಆದೇಶದಲ್ಲೇನಿದೆ?

  1. ಪ್ರತಿಯೊಂದು ವಾರ್ಡಿನಲ್ಲಿ ಕನಿಷ್ಠ ಎರಡು ಸ್ಥಳಗಳಲ್ಲಿ 1000 ರಿಂದ 2000 ಮಹಿಳಾ ಫಲಾನುಭವಿಗಳು ಭಾಗವಹಿಸುವಂತೆ ವ್ಯವಸ್ಥೆ ಮಾಡುವುದು.
  2. ಈ ಕಾರ್ಯಕ್ರಮವನ್ನು ಸಮುದಾಯ ಭವನಗಳಲ್ಲಿ ಅಥವಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳುವುದು.
  3. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಿಷ್ಟಾಚಾರದಂತೆ ಸ್ಥಳೀಯ ಮುಖಂಡರುಗಳು ಹಾಗೂ ಗಣ್ಯವ್ಯಕ್ತಿಗಳನ್ನು ಆಹ್ವಾನಿಸುವುದು.
  4. ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಫಲಾನುಭವಿ ಕಾರ್ಡ್ ವಿತರಿಸಲು ಕ್ರಮ ವಹಿಸುವುದು.
  5. ಬೆಳಗಾವಿಯಲ್ಲಿ ನಡೆಯಲಿರುವ ಮುಖ್ಯ ಕಾರ್ಯಕ್ರಮವನ್ನು ಒಂದು ಟಿ.ವಿ ಪರದೆ ಮೇಲೆ ಸತತವಾಗಿ ಪಸರಿಸಲು ಹಾಗೂ ಮತ್ತೊಂದು ಟಿ.ವಿ ಪರದೆ ಮೇಲೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯ ಮಂತ್ರಿಗಳು interaction ಮಾಡಲು ಎರಡು ಟಿ.ವಿ ಪರದೆ ವ್ಯವಸ್ಥೆ ಮಾಡುವುದು.
  6. ಈ ಸ್ಥಳೀಯ ಕಾರ್ಯಕ್ರಮಕ್ಕೆ ಪ್ರತಿ ವಾರ್ಡಿನ ಒಂದು ಸ್ಥಳಕ್ಕೆ ರೂ. 10,000/-ಗಳನ್ನು ವೆಚ್ಚಮಾಡುವುದು.

ವ್ಯಾಪಕ ವಿರೋಧ ವ್ಯಕ್ತ, ದೂರು ನೀಡಿದ ಎನ್‌.ಆರ್‌. ರಮೇಶ್‌

ಸರ್ಕಾರದ ಈ ಆದೇಶಕ್ಕೆ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಗಮನಕ್ಕೂ ತಂದಿರೋ ಎನ್‌.ಆರ್‌.ರಮೇಶ್‌, ಸರ್ಕಾರ ಅಧಿಕಾರಿಗಳನ್ನು ಪಕ್ಷದ ಕಾರ್ಯಕ್ರಮಗಳಿಗೆ ಬಳಸೋದು ತಪ್ಪು, ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: CM Siddaramaiah : ಆ. 24ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ, ಡಿಸೆಂಬರ್‌ನಲ್ಲಿ ಯುವನಿಧಿ; ಸಿದ್ದರಾಮಯ್ಯ ಘೋಷಣೆ

ಗೃಹಲಕ್ಷ್ಮಿ ಉದ್ಘಾಟನೆ ಪಕ್ಷದ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ

ಗೃಹಲಕ್ಷ್ಮಿ ಯೋಜನೆ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮವಾಗಿದೆ ಎಂದು ಸರ್ಕಾರ ಹೇಳಿದೆ. ಇದರ ಫಲಾನುಭವಿಗಳನ್ನು ಸೇರಿಸಿ ಎಲ್ಲಾ ಜಿಲ್ಲಾ ಮಟ್ಟದಲ್ಲೂ ಕಾರ್ಯಕ್ರಮಗಳು ನಡೆಯಲಿವೆ. ಅದರ ಭಾಗವಾಗಿ ಬೆಂಗಳೂರಿನಲ್ಲೂ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Exit mobile version