ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಗೆ (Gruha lakshmi scheme) ಆಗಸ್ಟ್ 30ರಂದು ಮೈಸೂರಿನಲ್ಲಿ ಭರ್ಜರಿಯಾಗಿ ಚಾಲನೆ (Gruha lakshmi inauguration tomorrow) ನೀಡಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ (Rahul Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ನೇತೃತ್ವದಲ್ಲಿ ಈ ಯೋಜನೆ ಚಾಲನೆ ಪಡೆಯಲಿದ್ದು ಗೃಹಲಕ್ಷ್ಮಿಯರ ಖಾತೆಗೆ 2000 ರೂ. ಹಣ ಬಂದು ಬೀಳಲಿದೆ.
ರಾಜ್ಯದಲ್ಲಿ 1.28 ಕೋಟಿ ಗೃಹಿಣಿಯರಿಗೆ ತಿಂಗಳಿಗೆ 2000 ರೂ. ಪಡೆಯುವ ಅವಕಾಶವಿದೆ. ಇವರ ಪೈಕಿ 1.11 ಕೋಟಿ ಜನರು ಈಗಾಗಲೇ ನೋಂದಾವಣೆ ಮಾಡಿಕೊಂಡಿದ್ದಾರೆ. ಇನ್ನೂ 16 ಲಕ್ಷದಷ್ಟು ಮಂದಿಗೆ ನೋಂದಣಿಗೆ ಬಾಕಿ ಇದೆ. ಕೆಲವರಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆಯಾದರೂ ಉಳಿದವರು ಇನ್ನೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದು ವೇಳೆ ನೀವು ಇನ್ನೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವಾದರೆ ಈಗಲೂ ಅವಕಾಶವಿದೆ. ಏನು ಮಾಡಬೇಕು ಎಂದು ಇಲ್ಲಿ ತಿಳಿಯೋಣ.
ಅರ್ಜಿ ಸಲ್ಲಿಸಲು NO TIME LIMIT
ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಲು ಯಾವುದೇ ಕಾಲ ಮಿತಿಯನ್ನು (No Time limit) ನಿಗಡಿ ಮಾಡಲಾಗಿಲ್ಲ. ಯಾವಾಗ ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆದರೆ, ನೋಂದಣಿ ವಿಳಂಬ ಆದಷ್ಟು ನಿಮಗೆ ಹಣ ಬರುವುದು ಸಹ ವಿಳಂಬವಾಗುತ್ತಾ ಹೋಗುತ್ತದೆ. ಹೀಗಾಗಿ ಆದಷ್ಟು ಬೇಗನೆ ನೋಂದಣಿ ಮಾಡಿಸಿದರೆ ಒಳ್ಳೆಯದು.
ಎಲ್ಲಿ ನೋಂದಣಿ ಮಾಡಲಾಗುತ್ತದೆ?
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದಾದರೆ ನೀವು ಸಮೀಪದ ಗ್ರಾಮ ಒನ್ (Grama One Centre), ಬಾಪೂಜಿ ಕೇಂದ್ರ (Bapuji Centre), ಬೆಂಗಳೂರು ಒನ್ (Bangalore One), ಕರ್ನಾಟಕ ಒನ್ (Karnataka One) ಈ ಕೇಂದ್ರಗಳಿಗೆ ಹೋಗಬೇಕು. ನೋಂದಣಿಯನ್ನು ಈಗ ತುಂಬ ಸರಳಗೊಳಿಸಲಾಗಿದ್ದು, ನೇರವಾಗಿ ಸಂಬಂಧಿತ ದಾಖಲೆಗಳನ್ನು ಹಿಡಿದುಕೊಂಡು ಅಲ್ಲಿಗೆ ಹೋದರೆ ಸಾಕು. ಅಲ್ಲಿರುವ ಸಿಬ್ಬಂದಿಯೇ ಎಲ್ಲ ಕೆಲಸವನ್ನು ಮಾಡಿಕೊಡುತ್ತಾರೆ.
ಬೇಕಾಗಿರುವ ದಾಖಲೆಗಳು ಯಾವುದು?
ಮಹಿಳೆಯರು ತಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್, ಆಧಾರ್ ಕಾರ್ಡ್ ಅನ್ನು ಹಿಡಿದುಕೊಂಡು ನೇರವಾಗಿ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಬಹುದು. ಅಲ್ಲಿ ಯಾವುದೇ ಒತ್ತಡಕ್ಕೆ ಅವಕಾಶವಿಲ್ಲದಂತೆ ನೋಂದಣಿ ಮಾಡಿಕೊಳ್ಳಬಹುದು.
ಪಡಿತರ ಕಾರ್ಡ್‌ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗದಿದ್ದರೆ?
ಸೌಲಭ್ಯ ಪಡೆಯುವವರಿಗೆ ಪಡಿತರ ಕಾರ್ಡ್‌ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರುವುದು ಮುಖ್ಯ. ಹೀಗಿದ್ದರೆ ನಿಮ್ಮ ಲಿಂಕ್ ಆದ ಖಾತೆಗೆ ಹಣ ಬರುತ್ತದೆ. ಒಂದೊಮ್ಮೆ ಲಿಂಕ್ ಆಗದೆ ಇದ್ದರೂ ತೊಂದರೆ ಇಲ್ಲ. ಯಾವ ಖಾತೆಗೆ ಹಣ ಪಾವತಿ ಆಗಬೇಕು ಎಂದು ಸೂಚಿಸಲು ಆ ಬ್ಯಾಂಕ್‌ನ ಪಾಸ್ ಬುಕ್ ದಾಖಲೆಯನ್ನು ತೆಗೆದುಕೊಂಡು ಹೋದರೆ ಸಾಕು. ಅಲ್ಲಿ ನಿಮ್ಮ ಖಾತೆಗೆ ಲಿಂಕ್ ಮಾಡಿ ನೋಂದಣಿ ಮಾಡಿ ಕೊಡಲಾಗುತ್ತದೆ.
ಡೋಂಟ್ ವರಿ.. ಪ್ರಜಾಪ್ರತಿನಿಧಿಗಳು ಸಹ ಇದ್ದಾರೆ
ಒಂದು ವೇಳೆ ಈ ಯಾವ ಕೇಂದ್ರಕ್ಕೂ ಹೋಗಲು ಸಾಧ್ಯವಾಗದೆ ಇದ್ದರೆ ನಿಮ್ಮ ಮನೆಗೇ ಬಂದು ನೋಂದಣಿಗೆ ಸಹಕಾರ ನೀಡಲು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಸಾವಿರ ಜನಸಂಖ್ಯೆಗೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ನಿಮ್ಮ ಭಾಗದ ಜನಪ್ರತಿನಿಧಿಗಳು ಯಾರು ಎಂಬುದನ್ನು ತಿಳಿದು ಅವರನ್ನು ಮನೆಗೆ ಕರೆಸಿ ಯಾವುದೇ ಶುಲ್ಕ ನೀಡದೆಯೇ ನೋಂದಣಿ ಮಾಡಿಕೊಳ್ಳಬಹುದು.
ಇದನ್ನೂ ಓದಿ : Gruha Lakshmi Scheme: ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಕೌಂಟ್‌ಡೌನ್ ಸ್ಟಾರ್ಟ್; ನಾಳೆಯೇ ಸಿಗಲಿದೆ 2000 ರೂ.
ಏನೇ ಸಮಸ್ಯೆ, ಗೊಂದಲವಿದ್ದರೂ 1902 ಗೆ ಕರೆ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ನಿಮಗೆ ಯಾವುದೇ ಗೊಂದಲವಿದ್ದರೂ ಪರಿಹರಿಸಲು 1902 ಸಹಾಯವಾಣಿ ಸಂಖ್ಯೆ ಇದೆ. ಯಾವುದೇ ದೂರುಗಳಿದ್ದರೂ ಇದೇ ನಂಬರ್‌ಗೆ ಕರೆ ಮಾಡಿ ತಿಳಿಸಬಹುದು.
ಗಂಡ ಅಥವಾ ನೀವು ಆದಾಯ ತೆರಿಗೆ ಇಲ್ಲವೇ ಜಿಎಸ್‌ಟಿ ತೆರಿಗೆ ಪಾವತಿ ಮಾಡುವವರಾಗಿದ್ದರೆ ಮಾತ್ರ ಈ ಯೋಜನೆಯ ಲಾಭ ಸಿಗುವುದಿಲ್ಲ. ಉಳಿದ ಎಲ್ಲರಿಗೂ ಇದು ಲಭ್ಯವಾಗುತ್ತದೆ.