Site icon Vistara News

Gruha Lakshmi Scheme: ಗೃಹಲಕ್ಷ್ಮಿ ಕಾರ್ಯಕ್ರಮ, ಪ್ರಧಾನಿ ಮೋದಿಯೂ ಒಪ್ಪಬಹುದಾದ ಗ್ಯಾರಂಟಿ ಎಂದ ಖರ್ಗೆ

AICC president Mallikarjun Kharge

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಗ್ಯಾರಂಟಿಗಳ ಅನುಷ್ಠಾನ ಸಾಧ್ಯವಾಗಲ್ಲ ಎಂದು ಹೇಳಿದ್ದರು. ಬಹುಶಃ ಈ ಗೃಹಲಕ್ಷ್ಮಿ ಕಾರ್ಯಕ್ರಮವನ್ನು (Gruha Lakshmi Scheme) ಮೋದಿ ಅವರು ನೋಡಿದ್ದರೆ ಇಂತಹ ಕಾರ್ಯಕ್ರಮ ಕೂಡ ಜಾರಿ ಮಾಡಲು ಸಾಧ್ಯವಿದೆ ಎಂಬುವುದನ್ನು ಎಂದು ತಿಳಿಯಬಹುದು. ಆದರೆ, ಅವರು ಒಪ್ಪಲ್ಲ, ಅವರು ಹೇಳಿದ್ದನ್ನೇ ಬೇರೆಯವರು ಕೇಳಬೇಕು. ಬೇರೆಯವರು ಹೇಳಿದ್ದನ್ನು ಅವರು ಕೇಳಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದಿಂದ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದು ರಾಹುಲ್ ಗಾಂಧಿ ಅವರು ಸ್ಪಷ್ಟವಾಗಿ ತಮ್ಮ ಅನಿಸಿಕೆಗಳನ್ನು ನಿಮ್ಮ ಮುಂದೆ ಇಟ್ಟಿದ್ದಾರೆ. ನಾನು ಸಹ ಅದೇ ಮಾತನ್ನು ಹೇಳುತ್ತೇನೆ. ಕಾಂಗ್ರೆಸ್‌ ಸರ್ಕಾರ ಭರವಸೆ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಜಾರಿ ಮಾಡಿದ್ದೇವೆ. ಇಲ್ಲಿ ಕೊಟ್ಟಂತಹ ಗ್ಯಾರಂಟಿಗಳನ್ನು ದೇಶದ ಯಾವ ರಾಜ್ಯದಲ್ಲೂ ಜಾರಿ ಮಾಡಿಲ್ಲ. ಗ್ಯಾರಂಟಿ ಅನುಷ್ಠಾನ ಇಡೀ ದೇಶದ ಗಮನ ಸೆಳೆದಿದೆ ಎಂದು ತಿಳಿಸಿದರು.

ಇದನ್ನೂ ಓದಿ | I.N.D.I.A Meeting: ನಾಳೆ ಇಂಡಿಯಾ ಒಕ್ಕೂಟದ ಸಭೆ; ಸೀಟು ಹಂಚಿಕೆ, ಹೊಸ ಲೋಗೊ; ಪ್ರಧಾನಿ ಅಭ್ಯರ್ಥಿ ಘೋಷಣೆ?

53 ವರ್ಷದಲ್ಲಿ ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಕೇಳುತ್ತಾರೆ. ಆದರೆ, ಅನೇಕ ಕೆಲಸ ಮಾಡಿದ್ದೇವೆ ಎಂದು ಹೇಳಬಹುದು. ನಾವು ಮಾಡಿದ ಕೆಲಸಕ್ಕೆ ಸುಣ್ಣ ಬಣ್ಣ ಹಚ್ಚಿ ಬಿಜೆಪಿಯವರು ಉದ್ಘಾಟನೆ ಮಾಡುತ್ತಾರೆ. ಕಾಂಗ್ರೆಸ್ ಏನು‌ ಮಾಡಿದೆ ಎಂದು ರಿಪೋರ್ಟ್ ಕೊಡುತ್ತೇವೆ. ನೆಹರು, ಸರ್ದಾರ್‌ ವಲ್ಲಭಭಾಯಿ ಪಟೇಲ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಏನು‌ ಮಾಡಿದರು ಎಂಬ ಬಗ್ಗೆ ರಿಪೋರ್ಟ್ ಕಾರ್ಡ್ ಕೊಡುತ್ತೇವೆ. ಅವರು (ಬಿಜೆಪಿ) ಏನು ಮಾಡಿದರು ಎಂದು ಕಾರ್ಡ್ ಕೊಡಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ನಾವು ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದೇವೆ. ಮತದಾನ ವಯಸ್ಸು 21ರಿಂದ 18ಕ್ಕಿಳಿಸಿದ್ದು ಕಾಂಗ್ರೆಸ್. ನಮ್ಮ ಕಾಲದಲ್ಲಿ ದೊಡ್ಡ ಕಾಮಗಾರಿಗಳು ಆಗಿವೆ, ಎಲ್ಲ ಸಂಸ್ಥೆಗಳನ್ನು ಕಟ್ಟಿದ್ದು ನಾವು. ನಾವು ಬಡವರಿಗಾಗಿ ಯೋಜನೆ ಮಾಡಿದರೆ, ಅವರು ಶ್ರೀಮಂತರಿಗಾಗಿ ಕೆಲಸ ಮಾಡುತ್ತಾರೆ. ನೀರವ್ ಮೋದಿ ಮತ್ತಿತರರು ಬ್ಯಾಂಕ್ ಹಣ ಲೂಟಿ ಮಾಡಿ ಹೋಗಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ತೆಗೆದಿದ್ದರು. ಆದರೆ, ರಾಹುಲ್ ಗಾಂಧಿ ಅದಕ್ಕೆಲ್ಲಾ ಹೆದರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Gruha lakshmi Scheme : ಹೆಣ್ಣೆಂದರೆ ಸಮಾಜದ ಬೇರು, ಅದನ್ನು ಗಟ್ಟಿಗೊಳಿಸುವುದೇ ಕಾಂಗ್ರೆಸ್‌ ಧ್ಯೇಯ; ರಾಹುಲ್‌ ವ್ಯಾಖ್ಯಾನ

ಈ ದೇಶಕ್ಕೆ ಹೊಸ ಸಂವಿಧಾನದ ಕೊಟ್ಟಿದ್ದು ನಾವು, ಸಂವಿಧಾನದ ಇಲ್ಲದೆ ಹೋದರೆ ನಾವು ಸತ್ತ ಹಾಗೆ. ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಒಳ್ಳೆಯದು ಆಗುತ್ತಿದೆ‌ ಎಂದರೆ ಅದಕ್ಕೆ ಸಂವಿಧಾನ ಕಾರಣ ಎಂದ ಅವರು, ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕು. ಇಲ್ಲಂದರೆ ಮುಂದಿನ ಪೀಳಿಗೆ ಗುಲಾಮರಂತೆ ಇರಬೇಕಾಗುತ್ತದೆ. ನಾವು ದೇಶವನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ. ತಾವೆಲ್ಲರೂ ಒಂದಾದರೆ ಕೋಮುವಾದಿ, ಸರ್ವಾಧಿಕಾರಿ ಸರ್ಕಾರವನ್ನು ಒದ್ದು ಓಡಿಸಬಹುದು ಎಂದು ಕರೆ ನೀಡಿದರು.

Exit mobile version