ಚಿಕ್ಕೋಡಿ: ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ (Gruha Lakshmi scheme)ಯ ನೋಂದಣಿ ರಾಜ್ಯಾದ್ಯಂತ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಗ್ರಾಮ ಒನ್ (Grama one staff), ಬಾಪೂಜಿ ಕೇಂದ್ರ, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ನಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆ ನೋಂದಣಿ (Registration for Gruhalakshmi) ಕಾರ್ಯ ಸಂಪೂರ್ಣ ಉಚಿತವಾಗಿದೆ. ಆದರೆ, ಕೆಲವೊಂದು ಕಡೆಗಳಲ್ಲಿ ಸರ್ಕಾರದ ಸೂಚನೆಯನ್ನು ಮೀರಿಯೂ ಸಿಬ್ಬಂದಿ ಹಣ ವಸೂಲಿ (looting money) ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಯಾರಿಗೂ ಕ್ಯಾರೇ ಅನ್ನದೆ ಸುಲಿಗೆ ನಡೆಯುತ್ತಿದೆ. ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರದೇ ಜಿಲ್ಲೆ ಇದು. ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರಿಂದಲೂ 100 ರೂ. ವಸೂಲಿ ಮಾಡುತ್ತಿದ್ದಾನೆ.
ಈ ಸಿಬ್ಬಂದಿಯ ವಸೂಲಿಯನ್ನು ಪ್ರಶ್ನಿಸಿದವರನ್ನು ಆತನೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾನೆ. ಇದರ ವಿಡಿಯೊ ಈಗ ವೈರಲ್ ಆಗಿದೆ.
ಸರ್ಕಾರ ಒಂದು ಅರ್ಜಿಗೆ 16 ರೂ.ಯನ್ನು ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್‌ಗೆ ನೀಡುತ್ತಿದೆ. ಆದರೂ ಹಣ ವಸೂಲಿ ಮಾಡುತ್ತಿರುವ ದೂರುಗಳು ಬಂದಾಗ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಖುದ್ದಾಗಿ ಸೂಚನೆ ನೀಡಿ ಅವರನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ. ಸಿಬ್ಬಂದಿಗಳಿಗೆ ನೀಡಿದ ಲಾಗ್‌ಇನ್ ಐಡಿಗಳನ್ನು ವಾಪಸ್ ಪಡೆದಿದ್ದಾರೆ. ಅದರೆ, ಕೆಲವು ಕಡೆಗಳಲ್ಲಿ ಸರ್ಕಾರದ ಎಚ್ಚರಿಕೆಯನ್ನು ಮೀರಿ ವಸೂಲಿ ನಡೆಯುತ್ತಿದೆ.
ಅವರಖೋಡಾ ಗ್ರಾಮದ ಈ ಕೇಂದ್ರದಲ್ಲಿ ಸಿಬ್ಬಂದಿಯೊಬ್ಬ 100 ರೂ. ತೆಗೆದುಕೊಳ್ಳುವುದನ್ನು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಆಗ ಕೇಂದ್ರದ ಸಿಬ್ಬಂದಿ ನೂರು ರೂಪಾಯಿ ಕೊಡದೆ ಇದ್ದರೆ ನೋಂದಣಿ ಮಾಡಲು ಸಾಧ್ಯವೇ ಇಲ್ಲ. ನಾವೇನು ಬಿಟ್ಟಿ ಕೂತಿದ್ದೀವಾ ಇಲ್ಲಿ, ಕೆಲಸ ಮಾಡಿಕೊಡಲ್ವಾ? ದುಡ್ಡು ಕೊಟ್ಟು ಹೋಗ್ತಾ ಇರ್ಬೇಕು ಅಷ್ಟೇ ಎಂದು ದಬಾಯಿಸಿದ್ದಾನೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕರೆಸು ಎಂದ ಸಿಬ್ಬಂದಿ
ಅಷ್ಟೇ ಅಲ್ಲ, ಸರ್ಕಾರ ಫ್ರೀ ಎಂದು ಹೇಳಿದರೂ ಹಣ ವಸೂಲಿ ಯಾಕೆ ಮಾಡ್ತೀರಿ ಎಂದು ಕೇಳಿದ್ದಕ್ಕೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರನ್ನ ಬೇಕಾದರೂ ಕರೆಸು, ಫ್ರೀಯಾಗಿ ಮಾಡಲ್ಲ. ನಾವು ಬೇಕಿದೆ ಹೆಬ್ಬಾಳ್ಕರ್ ನೀವು ಸೇರಿಕೊಂಡು 18 ಸಾವಿರ ನನ್ನ ಖಾತೆಗೆ ಹಾಕಿ.. ಅವಾಗ ಪ್ರೀ ಮಾಡುತ್ತೇವೆ. ಇಲ್ಲಾಂದ್ರೆ 100 ರೂಪಾಯಿ ತೆಗೆದುಕೊಂಡೇ ಕೆಲಸ ಮಾಡ್ತಿವಿ, ಏನ್ ಇವಾಗ ಎಂದು ಧಮ್ಕಿ ಹಾಕಿದ್ದಾನೆ.
ಗ್ರಾಮ ಒನ್ ಸಿಬ್ಬಂದಿ ಹಾಲಪ್ಪ ಲೋಕೂರ ಎಂಬಾತನೇ ಈ ರೀತಿ ಬಡಜನರ ಕೈಯಿಂದ ಸುಲಿಗೆ ಮಾಡಿದರೂ ನಿರ್ಭಯವಾಗಿ ಉತ್ತರ ಕೊಟ್ಟವನು. ಆತ ಜನರನ್ನು ಬೆದರಿಸುವುದು ಮಾತ್ರವಲ್ಲದೆ ಯಾವನ್ ಬೇಕಾದರೂ ಬರಲಿ, ನಾನು ಕ್ಯಾರ್ ಮಾಡಲ್ಲ ಎಂದು ಹೇಳುತ್ತಿದ್ದಾನೆ. ಈತ ಗ್ರಾಮ ಒನ್ ಕೇಂದ್ರದಲ್ಲಿ ಮೊದಲಿನಿಂದಲೂ ಇಂಥಹುದೇ ದಬ್ಬಾಳಿಕೆ ಮತ್ತು ಹಣ ವಸೂಲಿ ಮಾಡಿಕೊಂಡು ಬರುತ್ತಿದ್ದಾನೆ ಎಂಬ ಆರೋಪವಿದೆ. ಈಗ ಸರ್ಕಾರವೇ ಫ್ರೀ ನೋಂದಣಿ ಎಂದೂ ʻʻ100 ರೂಪಾಯಿ ತೆಗೆದುಕೊಂಡೇ ಕೆಲಸ ಮಾಡ್ತೀನಿ ಏನ್ ಈವಾಗʼ ಎಂದು ಧಮ್ಕಿ ಹಾಕುವ ಮಟ್ಟಕ್ಕೆ ದಾರ್ಷ್ಟ್ಯ ತೋರಿದ್ದಾನೆ.
ಇದನ್ನೂ ಓದಿ : Chikkaballapur News: ಗೃಹಲಕ್ಷ್ಮೀ ಯೋಜನೆಯಲ್ಲಿ ನಿಲ್ಲದ ಹಣ ವಸೂಲಿ; ಅರ್ಜಿ ಸಲ್ಲಿಕೆಗೆ ಕೊಡಬೇಕು 50-100 ರೂ.
ಈತ ರಾಜಾರೋಷವಾಗಿ ಹಣ ಪಡೆಯುತ್ತಿದ್ದರೂ ತಲೆ ಕೆಡಿಸಿಕೊಳ್ಳದ ತಾಲೂಕಾ ಆಡಳಿತ ಈಗೇನು ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೇ ದಬಾಯಿಸಿರುವ ಈತನ ಮೇಲೆ ಏನು ಕ್ರಮ ಆಗಲಿದೆ ಎಂಬ ಕುತೂಹಲ ಎಲ್ಲ ಕಡೆ ಇದೆ.
ಪ್ರಕರಣ ದಾಖಲು, ಗ್ರಾಮ ಒನ್ ಸೀಜ್
ಈ ನಡುವೆ, ಗ್ರಾಮ ಒನ್ ಸಿಬ್ಬಂದಿ ಹಾಲಪ್ಪ ಲೋಕೂರನ ಮೇಲೆ ತಹಸೀಲ್ದಾರ್ ಅವರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ಆಗಿದೆ. ಆತನ ಲಾಗ್ ಇನ್ ಐಡಿಯನ್ನು ಹಿಂದೆ ಪಡೆಯಲಾಗಿದ್ದು, ಗ್ರಾಮ ಒನ್ ಕೇಂದ್ರವನ್ನು ಸೀಜ್ ಮಾಡಲಾಗಿದೆ.