Site icon Vistara News

Gruha lakshmi scheme : ಗೃಹಲಕ್ಷ್ಮಿ ನೋಂದಣಿಗೆ Starting trouble; ಗೊಂದಲ ಬೇಡ, ಈ ನಿಯಮ ಪಾಲಿಸಿ

Gruhalakshmi Hebbalkar

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಗುರುವಾರದಿಂದ (ಜುಲೈ 20) ಆರಂಭವಾಗಿದೆಯಾದರೂ ನೋಂದಣಿ ನಿಯಮಗಳ (Registration rules) ಬಗೆಗಿನ ಗೊಂದಲ, ಸರ್ವರ್‌ ಸಮಸ್ಯೆ, ಮಾಹಿತಿಯ ಕೊರತೆಯಿಂದ ಸ್ಟಾರ್ಟಿಂಗ್‌ ಟ್ರಬಲ್‌ (Starting trouble) ಅನುಭವಿಸಿತು. ಇದರ ನಡುವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು ವಿಧಾನಸಭೆಯ ಕಲಾಪದ ಮಧ್ಯೆ ಬಿಡುವು ಮಾಡಿಕೊಂಡು ಜನಪ್ರತಿನಿಧಿಯಾಗಿ ಕೆಲಸ ಮಾಡಿ ಗಮನ ಸೆಳೆದರು.

ರಾಜ್ಯದ ಮನೆ ಯಜಮಾನಿಗೆ ತಿಂಗಳಿಗೆ 2000 ರೂ. ಸಹಾಯಧನ ನೀಡುವ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಚಾಲನೆ ನೀಡಿದ್ದರು. ಗುರುವಾರದಿಂದಲೇ ನೋಂದಣಿ ನಡೆಯಲಿದೆ ಎಂದು ಘೋಷಿಸಲಾಗಿತ್ತು. ರಾಜ್ಯದ ಗ್ರಾಮ ಒನ್‌, ಬಾಪೂಜಿ ಕೇಂದ್ರ, ಕರ್ನಾಟಕ ಒನ್‌, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ನೋಂದಣಿ ನಡೆಯಲಿದ್ದು, ಗೃಹಿಣಿಯರು ಮೊದಲೇ ಸ್ಲಾಟ್‌ ಬುಕ್‌ ಮಾಡಿಕೊಂಡು ಹೋಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿತ್ತು.

ಆದರೆ, ಗುರುವಾರ ಬೆಳಗ್ಗೆಯೇ ರಾಜ್ಯದ ಹಲವು ಕೇಂದ್ರಗಳಲ್ಲಿ ಗೃಹಿಣಿಯರು ಮತ್ತು ಕೆಲವು ಕಡೆ ಪುರುಷರು ಸಾಲುಗಟ್ಟಿ ನಿಂತಿದ್ದರು. ಅಲ್ಲಿದ್ದ ಕೆಲವು ಅಧಿಕಾರಿಗಳಿಗೂ ಸರಿಯಾಗಿ ಮಾಹಿತಿ ಇಲ್ಲದೆ ಗೊಂದಲ ಉಂಟಾಯಿತು. ರಾಜ್ಯದಲ್ಲಿ 11000 ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದ್ದು, ಒಂದು ಕೇಂದ್ರದಲ್ಲಿ ಒಂದು ದಿನಕ್ಕೆ 60 ಮಂದಿಗೆ ನೋಂದಣಿ ಮಾಡಲು ಅವಕಾಶವಿದೆ ಎಂದು ತಿಳಿಸಲಾಗಿತ್ತು. ಆದರೆ, ಕೇಂದ್ರಕ್ಕೆ ಹೋಗುವ ಮೊದಲು ನಿಗದಿಪಡಿಸಿದ ಸಹಾಯವಾಣಿ ನಂಬರ್‌ಗೆ ತಮ್ಮ ಪಡಿತರ ಚೀಟಿ ನಂಬರನ್ನು ಸಂದೇಶವಾಗಿ ಕಳುಹಿಸಿ ಅಲ್ಲಿಂದ ಬರುವ ಮಾಹಿತಿಯನ್ನು ಆಧರಿಸಿ ಯಾವ ದಿನ, ಯಾವ ಕೇಂದ್ರಕ್ಕೆ, ಯಾವ ಹೊತ್ತಿಗೆ ಹೋಗಬೇಕು ಎನ್ನುವುದನ್ನು ತಿಳಿಯಬೇಕು ಎಂದು ಹೇಳಲಾಗಿತ್ತು.

ಆದರೆ, ಹೆಚ್ಚಿನವರು ನೇರವಾಗಿ ಗ್ರಾಮ ಒನ್‌, ಬಾಪೂಜಿ ಕೇಂದ್ರ, ಕರ್ನಾಟಕ ಒನ್‌ ಮತ್ತು ಬೆಂಗಳೂರು ಒನ್‌ ಕೇಂದ್ರಗಳಿಗೆ ಧಾವಿಸಿ ನೋಂದಣಿ ಮಾಡಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದರು. ಇದು ಗೊಂದಲಕ್ಕೆ ಕಾರಣವಾಯಿತು. ಕೆಲವು ಕಡೆ ಜನರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಂದೇಶ ಕಳುಹಿಸಿದರೂ ಮರು ಸಂದೇಶ ಬರಲಿಲ್ಲ

ಕೆಲವು ಕೇಂದ್ರಗಳಿಗೆ ಬಂದ ಗೃಹಿಣಿಯರಿಗೆ ನೀವು ಮೊದಲು ನಿರ್ದಿಷ್ಟ ನಂಬರ್‌ ಸಂದೇಶ ಕಳುಹಿಸಬೇಕು ಎಂಬ ಬಗ್ಗೆ ಶಿಕ್ಷಣ ನೀಡಿದರು. ಆದರೆ, ತಕ್ಷಣಕ್ಕೆ ಮರು ಸಂದೇಶ ಬರಲಿಲ್ಲ ಎಂದು ಕೆಲವರು ಗಲಾಟೆ ಮಾಡಿದರು. ಇನ್ನು ಕೆಲವರು ಈಗಲೇ ನೋಂದಣಿ ಮಾಡಿಕೊಳ್ಳಿ ಎಂದು ಒತ್ತಡ ಹೇರಿದರು. ಒಟ್ಟಾರೆಯಾಗಿ ಮೊದಲ ದಿನ ನೋಂದಣಿ ವಿಚಾರದಲ್ಲಿ ಸಣ್ಣ ಮಟ್ಟಿನ ಗೊಂದಲ ಕಂಡುಬಂತು.

ಗೃಹ ಲಕ್ಷ್ಮಿಗೆ ಅರ್ಜಿ ಹಾಕಿದ್ದೀರಾ? ಲಕ್ಷ್ಮಿ ಹೆಬ್ಬಾಳ್ಕರ್ ಕಾಳಜಿ

ಬೆಂಗಳೂರು: ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ಊಟದ ವೇಳೆ ಅಲ್ಲಿದ್ದ ಡಿ ಗ್ರೂಪ್ ಮಹಿಳಾ ನೌಕರರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಚಾರಿಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು.

ಗೃಹಲಕ್ಷ್ಮಿಗೆ ಅರ್ಜಿ ಹಾಕುವ ಮುನ್ನ ಮೊಬೈಲ್ ಚೆಕ್ ಮಾಡ್ಕೊಳ್ಳಿ | Gruha Lakshmi Application | Vistara News

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಊಟ ಮಾಡುತ್ತಿದ್ದ ವೇಳೆ ಅಲ್ಲಿ ಸ್ವಚ್ಚತೆಯ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರನ್ನು ಹತ್ತಿರ ಕರೆದು ಯೋಗ ಕ್ಷೇಮ ವಿಚಾರಿಸುವುದರ ಜೊತೆಗೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಮಹಿಳಾ ಕಾರ್ಮಿಕರು ಇನ್ನೂ ಇಲ್ಲ ಮೇಡಂ ಎಂದರು.

ಆಗ, ನಂಬರ್ ಕೊಡುತ್ತೇನೆ, ಅದಕ್ಕೆ ಎಸ್ ಎಂಎಸ್ ಮಾಡಿ, ಅದಷ್ಟು ಬೇಗ ಅರ್ಜಿ ಹಾಕಿ ಎಂದು ಸೂಚಿಸಿದರು. ಜೊತೆಗೆ ತಕ್ಷಣವೇ SMS ಕಳುಹಿಸಬೇಕಾದ ನಂಬರ್ ಅನ್ನು ಸಚಿವರು ನೀಡಿದರು. ಯೋಜನೆಯ ಲಾಭ ಸಮಾಜದ ಕಟ್ಟಕಡೆಯ ಮಹಿಳೆಯರಿಗೂ ತಲುಪಬೇಕು ಎನ್ನುವ ಕಾಳಜಿ ಹೊಂದಿರುವ ಸಚಿವರು ಊಟ ಮಾಡುವ ವೇಳೆಯಲ್ಲೂ ಕಳಕಳಿ ಮೆರೆದರು.

ನೀವು ಅರ್ಜಿ ಸಲ್ಲಿಸಬೇಕು ಎಂದರೆ ಈ ಕೆಲಸ ಮಾಡಬೇಕು

ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ.ಯನ್ನು ಅವರ ಖಾತೆಗೇ ನಗದೀಕರಿಸುವ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಈ ನೋಂದಣಿ ಪ್ರಕ್ರಿಯೆ ಗಾಮ ಒನ್‌, ಬಾಪೂಜಿ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌ ಈ ಕೇಂದ್ರಗಳಲ್ಲಿ ಮಾತ್ರ ನಡೆಯುತ್ತದೆ. ಗೃಹ ಜ್ಯೋತಿಯಂತೆ ಮೊಬೈಲ್‌ನಲ್ಲೇ ನಾವೇ ಸ್ವತಃ ನೋಂದಣಿ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.

ಅರ್ಜಿ ನೋಂದಣಿಯನ್ನು ಯಾವಾಗ ಮಾಡಿಕೊಳ್ಳಬೇಕು, ಯಾವ ಕೇಂದ್ರದಲ್ಲಿ ಮಾಡಿಕೊಳ್ಳಬೇಕು ಎಂಬ ಮಾಹಿತಿ ಅವರವರ ಮೊಬೈಲ್‌ಗೇ ಬರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ತಿಳಿಸಿದ್ದರು. ಆದರೆ, ಹಾಗೆ ನಮಗೆ ಮೆಸೇಜ್‌ ಬರಬೇಕು ಎಂದರೆ ನಾವು ಕೂಡಾ ಒಂದು ಕೆಲಸ ಮಾಡಬೇಕು. ಅದೇನೇಂದರೆ ನಾವು ಸಹಾಯವಾಣಿಗೆ ಸಂದೇಶ ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಬಯಸುವವರು ತಮ್ಮ ನೋಂದಾಯಿತ ಮೊಬೈಲ್‌ನಿಂದ 8147 – 500500 ಸಂಖ್ಯೆಗೆ ಮೆಸೇಜ್‌ ಮಾಡಬೇಕು. ಮೆಸೇಜ್‌ ಮಾಡುವಾಗ ಪಡಿತರ ಚೀಟಿಯ ನಂಬರ್‌ನ್ನೂ ಬರೆದಿರಬೇಕು. ಹಾಗೆ ಮೆಸೇಜ್‌ ಮಾಡಿದ ಬಳಿಕ ಅಲ್ಲಿಂದ ಒಂದು ಸಂದೇಶ ಬರುತ್ತದೆ.

ಪಡಿತರ ಚೀಟಿಯ ನಂಬರ್ ಮೇಸೆಜ್ ಮಾಡಿದರೆ ಅರ್ಜಿ ಸಲ್ಲಿಸಬೇಕಾದ ಸ್ಥಳ ಮತ್ತು ದಿನಾಂಕವನ್ನು ಮೆಸೇಜ್‌ ಮೂಲಕ ಕಳುಹಿಸಲಾಗುತ್ತದೆ. ಬಳಿಕ ನಿಗದಿಪಡಿಸಿದ ಸ್ಥಳ ಮತ್ತು ದಿನಾಂಕದಂದು ಅಲ್ಲಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಕುಟುಂಬದ ಯಜಮಾನಿ ಎಂದು ಗುರುತಿಸಿದ ಮಹಿಳೆ ಮತ್ತು ಪತಿಯ ಆಧಾರ್‌ ಕಾರ್ಡ್‌, ಪಡಿತರ ಕಾರ್ಡ್‌ ಮತ್ತು ಬ್ಯಾಂಕ್‌ ಅಕೌಂಟ್‌ ನಂಬರ್‌ ಇದಿಷ್ಟೇ ಬೇಕಾಗಿರುವ ದಾಖಲೆಗಳು.

ರಾಜ್ಯದಲ್ಲಿ 11 ಸಾವಿರ ನೋಂದಣಿ ಕೇಂದ್ರಗಳಿದ್ದು, ಒಂದು ಕೇಂದ್ರದಲ್ಲಿ ದಿನಕ್ಕೆ 60 ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶವಿರುತ್ತದೆ. ಹೀಗಾಗಿ ಯಾವುದೇ ಗೊಂದಲವಿಲ್ಲದೆ, ನೂಕು ನುಗ್ಗಲು ಇಲ್ಲದೆ ಅರ್ಜಿ ಸಲ್ಲಿಸಬಹುದು. ದಿನಕ್ಕೆ ಆರು ಲಕ್ಷ ಜನ‌ರ ನೋಂದಣಿಗೆ ಅವಕಾಶವಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಇದನ್ನೂ ಓದಿ: Gruha lakshmi Scheme : 2000 ರೂ. ಪಡೆಯಲು ನೀವು ಅರ್ಹರಾ? ಅರ್ಜಿ ಹಾಕೋದೆಲ್ಲಿ? ಇಲ್ಲಿ ಚೆಕ್‌ ಮಾಡಿಕೊಳ್ಳಿ

ಯಾವುದೇ ಸಮಸ್ಯೆ ಇದ್ದರೂ ಕಾಲ್‌ ಮಾಡಿ- 1902

ಗೃಹಲಕ್ಷ್ಮಿ ನೋಂದಣಿಗೆ ಸಂಬಂಧಿಸಿ ಯಾವುದೇ ಸಮಸ್ಯೆ, ಗೊಂದಲ ಇದ್ದರೂ ಅದನ್ನು ಪರಿಹರಿಸಿಕೊಳ್ಳಲು ಒಂದು ಹೆಲ್ಪ್‌ ಲೈನ್‌ ತೆರೆಯಲಾಗುತ್ತದೆ. 1902 ಇಲಾಖೆಯ ಹೆಲ್ಪ್ ಲೈನ್ ಸಂಖ್ಯೆಯಾಗಿದ್ದು, ಇದು ಜುಲೈ 19ರ ಸಂಜೆ ಐದು ಗಂಟೆಯಿಂದ ಚಾಲ್ತಿಯಲ್ಲಿರುತ್ತದೆ. ಯಾವುದೇ ಗೊಂದಲ ಇದ್ದರೂ ಕರೆ ಮಾಡಿ ಪರಿಹರಿಸಿಕೊಳ್ಳಬಹುದು.

ಮೊದಲ ದಿನ 60,222 ಮಂದಿ ನೋಂದಣಿ

ಗೃಹ ಲಕ್ಷ್ಮಿ ಯೋಜನೆಗೆ ಮೊದಲ ದಿನ 60,222 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಮೊಬೈಲ್ ಆ್ಯಪ್ ಮೂಲಕ 15,276, ವೆಬ್ ಅಪ್ಲಿಕೇಶನ್ ಮೂಲಕ 44,946 ಮಹಿಳೆಯರಿಂದ ನೋಂದಣಿ ಆಗಿದೆ ಎಂದು ಇಲಾಖೆ ತಿಳಿಸಿದೆ.

Exit mobile version