ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆ (Gruha lakshmi scheme)ಯ ನೋಂದಣಿ ಭರ್ಜರಿ ಯಶಸ್ಸು ಪಡೆಯುತ್ತಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ನೋಂದಣಿಯಾಗಬೇಕಾದ ಒಟ್ಟು ಯಜಮಾನಿಯರ ಸಂಖ್ಯೆ 1.28 ಕೋಟಿ. ಕಳೆದ ಜುಲೈ 20ರಿಂದ ಆರಂಭಗೊಂಡ ನೋಂದಣಿಯಲ್ಲಿ (Gruha lakshmi Registration) ಕೇವಲ ಏಳು ದಿನದಲ್ಲಿ 62,01,530 ಮಂದಿಯ ನೋಂದಣಿ ಆಗಿದೆ. ಅಷ್ಟಾದರೂ ಕೆಲವೊಂದು ಸಣ್ಣಪುಟ್ಟ ಸಮಸ್ಯೆ ಇದೆ ಎಂಬ ಕಾರಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಸೂಚಿಸಿದ್ದಾರೆ.
ಮನೆಯ ಯಜಮಾನಿಯ ಖಾತೆಗೆ ತಿಂಗಳಿಗೆ 2000 ರೂ. ನೇರ ನಗದು ವರ್ಗಾವಣೆ ಮಾಡುವ ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಜುಲೈ 20ರಿಂದ ಅವಕಾಶ ನೀಡಲಾಗಿದೆ. ಈ ಹಿಂದೆ ಸೂಚಿಸಿದ ಪ್ರಕಾರ, ಕುಟುಂಬದ ಯಜಮಾನಿ ತಮ್ಮ ಆಧಾರ್ ಲಿಂಕ್ ಆದ ಮೊಬೈಲ್ ನಂಬರ್‌ನಿಂದ ಪಡಿತರ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಸಹಾಯವಾಣಿಗೆ ಮೆಸೇಜ್ ಮಾಡಬೇಕಾಗಿತ್ತು. ಹಾಗೆ ಮೆಸೇಜ್ ಮಾಡಿದಾಗ ಅಲ್ಲಿಂದ ಮರಳಿ ಒಂದು ಮೆಸೇಜ್ ಬರುತ್ತಿತ್ತು. ಅದರಲ್ಲಿ ಯಾವ ಸೇವಾ ಕೇಂದ್ರದಲ್ಲಿ ಯಾವ ದಿನ ಯಾವ ಹೊತ್ತಿಗೆ ನೋಂದಣಿ ನಡೆಯಲಿದೆ ಎಂಬ ಸ್ಪಷ್ಟ ಮಾಹಿತಿ ಸಿಗುತ್ತಿತ್ತು. ಅದನ್ನು ಅನುಸರಿಸಿ, ಅದೇ ದಿನ ಅದೇ ಹೊತ್ತಿಗೆ ಹೋದರೆ ಸರಳವಾಗಿ ನೋಂದಣಿ ನಡೆಯುತ್ತಿತ್ತು.
ಆದರೆ, ಕೆಲವೊಂದು ಕಡೆಗಳಲ್ಲಿ ಮೆಸೇಜ್ ಬಾರದೆ ಜನರಿಗೆ ಸಮಸ್ಯೆ ಎದುರಾಗಿತ್ತು. ಆದರೂ ಒಟ್ಟಾರೆ ನೋಂದಣಿಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೂ ಮೆಸೇಜ್ ಬಾರದೆ ಜನರು ಗೊಂದಲಕ್ಕೆ ಒಳಗಾಗಬಾರದು ಎಂಬ ನಿಟ್ಟಿನಲ್ಲಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ.
ಸರಳೀಕೃತ ಹೊಸ ವಿಧಾನ ಹೇಗೆ?
ಹೊಸ ವಿಧಾನದಡಿ ನೀವು ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಹೋಗುವ ಮೊದಲು ಸಹಾಯವಾಣಿಗೆ ಮೆಸೇಜ್ ಮಾಡಬೇಕಾಗಿಲ್ಲ. ಸ್ಲಾಟ್ ಬುಕ್ ಮಾಡಬೇಕಾಗಿಲ್ಲ. ನೇರವಾಗಿ ಸಂಬಂಧಿತ ದಾಖಲೆಗಳನ್ನ ಹಿಡಿದುಕೊಂಡು ನೋಂದಣಿ ಕೇಂದ್ರಕ್ಕೆ ಹೋದರೆ ಅಲ್ಲೇ ದಾಖಲಾತಿ ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವೆ ತಿಳಿಸಿದ್ದಾರೆ.
ಮಹಿಳೆಯರು ತಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್, ಆಧಾರ್ ಕಾರ್ಡ್‌ನ್ನು ಹಿಡಿದುಕೊಂಡು ನೇರವಾಗಿ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಬಹುದು. ಅಲ್ಲಿ ಯಾವುದೇ ಒತ್ತಡಕ್ಕೆ ಅವಕಾಶವಿಲ್ಲದಂತೆ ನೋಂದಣಿ ಮಾಡಿಕೊಳ್ಳಬಹುದು.
ಒಂದು ವೇಳೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಲಿಂಕ್ ಆಗದೆ ಇದ್ದರೆ ಅಥವಾ ಆಗಿದ್ದರೂ ಅ ಅಕೌಂಟ್‌ಗೆ ಬೇಡ ಬೇರೆ ಖಾತೆಗೆ ಹಣ ಬರಲಿ ಎಂದೇನಾದರೂ ಇದ್ದರೆ ಬದಲಿ ಅಕೌಂಟ್‌ಗೆ ಸಂಬಂಧಿಸಿದ ಪಾಸ್ ಬುಕ್ ದಾಖಲೆಯನ್ನು ಹಿಡಿದುಕೊಂಡೇ ಕೇಂದ್ರಕ್ಕೆ ಹೋಗಬೇಕು ಎಂದು ಸೂಚಿಸಲಾಗಿದೆ.
ಹೊಸ ಸರಳೀಕೃತ ಪ್ರಕ್ರಿಯೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕೃತವಾಗಿ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದ್ದು, ಅರ್ಹ ಫಲಾನುಭವಿಗಳು ಅಗತ್ಯವಿರುವ ದಾಖಲೆಗಳೊಂದಿಗೆ ಹತ್ತಿರದಲ್ಲಿರುವ ನೋಂದಣಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು.
— Laxmi Hebbalkar (@laxmi_hebbalkar) July 26, 2023
ಇದಕ್ಕೂ ಮೊದಲು ಅರ್ಹ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸೇಜ್ (ಶೆಡ್ಯೂಲಿಂಗ್) ಬಂದರಷ್ಟೇ ನೋಂದಣಿ ಕೇಂದ್ರಗಳಿಗೆ… pic.twitter.com/YkbRPKmTOY
ಏಳೇ ದಿನದಲ್ಲಿ ದಾಖಲೆ ನೋಂದಣಿ
ನಿಜವೆಂದರೆ, ಈ ಹಿಂದೆ ರಾಜ್ಯದ 11000 ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ದಿನಕ್ಕೆ 60 ಮಂದಿಯಂತೆ ಒಟ್ಟು ದಿನಕ್ಕೆ 6.6 ಲಕ್ಷ ನೋಂದಣಿಯ ಗುರಿಯನ್ನು ಹೊಂದಲಾಗಿತ್ತು. ಆದರೆ, ಜನರ ಒತ್ತಡ ತೀವ್ರವಾಗಿದೆ. ಹೀಗಾಗಿ ಕೆಲವೊಂದು ದಿನ 12 ಲಕ್ಷ ನೋಂದಣಿಯೂ ನಡೆದಿದೆ. ಒಟ್ಟಾರೆಯಾಗಿ ಕೇವಲ ಏಳು ದಿನದಲ್ಲಿ 62 ಲಕ್ಷ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಯಾವುದೇ ಸಮಸ್ಯೆ ಇದ್ದರೂ ಮೆಸೇಜ್ ಮಾಡಿ, ಕರೆ ಮಾಡಿ
ಯಾವುದೇ ಸಮಸ್ಯೆ ಇದ್ದರೆ 8147 – 500500 ಸಂಖ್ಯೆಗೆ ಮೆಸೇಜ್ ಮಾಡಬಹುದು. ಇಲ್ಲವೇ 1902 ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಬಹುದು.
ಇದನ್ನೂ ಓದಿ: Gruha lakshmi Scheme : ನೀವು/ನಿಮ್ಮ ಗಂಡ ಆದಾಯ ತೆರಿಗೆ ಕಟ್ತೀರಾ? ಹಾಗಿದ್ದರೂ ನಿಮಗೆ 2,000 ರೂ. ಸಿಗುತ್ತಾ?