Site icon Vistara News

Gruha Lakshmi Scheme : ಆಗಸ್ಟ್‌ 27ಕ್ಕೆ ಎಲ್ಲರ ಮನೆಗೆ ಗೃಹಲಕ್ಷ್ಮಿ; ಸಿಗಲಿದೆ ಪಿಂಕ್‌ ಸ್ಮಾರ್ಟ್‌ ಕಾರ್ಡ್‌!

gruha lakshmi scheme and DK shivakumar show gruha lakshmi smart card

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಲ್ಲಿ (Congress Guarantee Scheme) ಒಂದಾಗಿರುವ “ಗೃಹಲಕ್ಷ್ಮಿ” ಯೋಜನೆಗೆ (Gruha Lakshmi Scheme) ಆಗಸ್ಟ್ 27ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು. ಅಂದಿನಿಂದ ಮನೆಯ ಯಜಮಾನಿಯರ ಖಾತೆಗೆ 2000 ರೂಪಾಯಿ ಹಣ ವರ್ಗಾವಣೆಯಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DMC DK Shivakumar) ಹೇಳಿದರು.

ವಿಕಾಸಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ (ಆಗಸ್ಟ್‌ 10) ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ನಿರ್ವಹಣಾಧಿಕಾರಿಗಳೊಂದಿಗಿನ ವಿಡಿಯೊ ಸಂವಾದ ನಡೆಸಲಾಯಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಆಗಸ್ಟ್ 27 ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದ್ದು, ಕಾಂಗ್ರೆಸ್ ವರಿಷ್ಠರಾದ‌ ಸೋನಿಯಾ ಗಾಂಧಿ (Sonia Gandhi, ಪ್ರಿಯಾಂಕಾ ಗಾಂಧಿ (Priyanka Gandhi), ರಾಹುಲ್ ಗಾಂಧಿ (Rahul Gandhi) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ 11 ಸಾವಿರ ಕಡೆ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ಎಲ್ಲ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆಗಳಲ್ಲಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಂಚಾಯಿತಿಗೊಬ್ಬರು ನೋಡಲ್ ಆಫಿಸರ್‌ಗಳನ್ನು ನೇಮಕ‌ ಮಾಡಿದ್ದು, ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದರು.

ಈಗಲೇ ಸಮುದಾಯ ಭವನ ಬುಕ್‌ ಮಾಡಿ

ಜಿಲ್ಲೆ, ತಾಲೂಕು, ಪುರಸಭೆ, ನಗರಸಭೆ, ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಮಾಡುವುದರಿಂದ ಅಂದು ಸಮುದಾಯ ಭವನಗಳು, ಕಲ್ಯಾಣ ಮಂಟಪ, ಪ್ರೈವೇಟ್ ಗ್ರೌಂಡ್‌ಗಳನ್ನು ಮೊದಲೇ ಬುಕ್ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ವಹಿಸಿ ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಸೂಚಿಸಿದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Laxmi Hebbalkar), ಬೆಳಗಾವಿಯಲ್ಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಬೇಕು ಎಂಬುದು ನನ್ನ ಕನಸಾಗಿತ್ತು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಬಳಿ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿದ ನಮ್ಮ ನಾಯಕರು ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲು ಒಪ್ಪಿಗೆ ನೀಡಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು.

ಗೃಹಲಕ್ಷ್ಮಿಯರಿಗೆ ಪಿಂಕ್‌ ಸ್ಮಾರ್ಟ್ ಕಾರ್ಡ್!

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಕೊಡಮಾಡುವ ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರದರ್ಶಿಸಿದರು. ಅದು ಪಿಂಕ್‌ ಬಣ್ಣವನ್ನು ಹೊಂದಿದ್ದು, ಯೋಜನೆಯ ಉದ್ಘಾಟನೆ ದಿನ ಬಿಡುಗಡೆ ಮಾಡಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್‌ನಲ್ಲಿ ಫಲಾನುಭವಿಗಳ ವಿವರ ಇರಲಿದೆ. ಜತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವರ ಭಾವಚಿತ್ರ ಇರಲಿದೆ. ₹2000 ಎಂದು ಸ್ಮಾರ್ಟ್ ಕಾರ್ಡ್‌ನಲ್ಲಿ ನಮೂದಿಸಲಾಗಿದೆ.

ಇದನ್ನೂ ಓದಿ: Karnataka Politics : ಡಿಕೆಶಿ 15 ಪರ್ಸೆಂಟ್‌ ಕೇಳೋಕೆ ಸಾಧ್ಯವೇ ಇಲ್ಲ; ಸರ್ಕಾರದ ಪರ ನಿಂತ ಕೆಂಪಣ್ಣ

ಕಾರ್ಡ್‌ ಮಾಡಿಸಿ ಅಪ್ಲೈ ಮಾಡಿ

ಗೃಹ ಲಕ್ಷ್ಮಿ ಯೋಜನೆಗೆ ಈವರೆಗೆ 1.5 ಕೋಟಿ ಗೃಹಿಣಿಯರು ನೋಂದಣಿ ಮಾಡಿಕೊಂಡಿದ್ದಾರೆ. ಯಾವಾಗ ಬೇಕಾದರೂ ನೋಂದಣಿಗೆ ಅವಕಾಶ ಇದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಕೆಲವರ ಬಳಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಇಲ್ಲ. ಹೊಸದಾಗಿ ಮಾಡಿಸಬೇಕಿದೆ. ಅಂಥವರು ಪಡಿತರ ಕಾರ್ಡ್ ಮಾಡಿಸಿದ ಬಳಿಕ ಅಪ್ಲೈ ಮಾಡಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪೌರಾಡಳಿತ ಖಾತೆ ಸಚಿವರಾದ ರಹೀಂ ಖಾನ್ ಉಪಸ್ಥಿತರಿದ್ದರು.

Exit mobile version