ಬೆಂಗಳೂರು: ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ (Gruhajyothi scheme) ಜಾರಿ ನಂತರ ಮೊದಲ ವಿದ್ಯುತ್ ಬಿಲ್ (Electricity bill) ನಿಮ್ಮ ಮನೆ ಬಾಗಿಲಿಗೆ ಬರುವ ಕಾಲ ಸನ್ನಿಹಿತವಾಗಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ ನಾಲ್ಕನೇ ದಿನಾಂಕದ ಬಳಿಕ ಮನೆ ಮನೆಗೆ ಬಿಲ್ ನೀಡಲಾಗುತ್ತದೆ. ಈ ಬಾರಿ ಒಂದು ದೊಡ್ಡ ಕಾರ್ಯಕ್ರಮದ ಮೂಲಕ ಉಚಿತ ವಿದ್ಯುತ್ ಬಿಲ್ ನೀಡಲಾಗುತ್ತದೆ. ಆಗಸ್ಟ್ 5ರಂದು ಕಲಬುರಗಿಯಲ್ಲಿ ನಡೆಯುವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉಚಿತ ಬಿಲ್ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದಾದ ಬಳಿಕ ಬಿಲ್ ರೀಡರ್‌ಗಳು ಪ್ರತಿ ಮನೆಗೆ ಬಂದು ಬಿಲ್ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ತಿಳಿಸಿದ್ದರು.
ರಾಜ್ಯದಲ್ಲಿ 2.20 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆಯುವ ಅವಕಾಶವಿದೆ ಎಂದು ಸರ್ಕಾರ ತಿಳಿಸಿತ್ತು. ಆದರೆ, ಇದುವರೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ 1.40 ಕೋಟಿ ಮಾತ್ರ. ಹೀಗಾಗಿ ನೋಂದಾಯಿತ ಕುಟುಂಬಗಳಿಗೆ ಮಾತ್ರ ಇದರ ಲಾಭ ಸಿಗಲಿದೆ. ಅದರಲ್ಲೂ ಜುಲೈ 26ಕ್ಕೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಮಾತ್ರ ಈ ಬಾರಿ ಉಚಿತ ವಿದ್ಯುತ್ ಬಿಲ್ ಬರಲಿದೆ.
ಇದರ ನಡುವೆ ಇರುವ ಕುತೂಹಲವೇನೆಂದರೆ, ಈ ಬಾರಿ ಉಚಿತ ವಿದ್ಯುತ್ ಬಿಲ್ ಹೇಗಿರುತ್ತದೆ ಎನ್ನುವುದು. ಈ ಬಾರಿ ನೀಡಲಿರುವುದು ಜುಲೈ ತಿಂಗಳ ಬಿಲ್. ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಈ ಬಾರಿ ಝೀರೋ ಬಿಲ್ ಬರಲಿದೆ. ಹಾಗಂತ ಅದರಲ್ಲಿ ಏನೂ ಇರುವುದಿಲ್ಲ. ಎಲ್ಲವೂ ಜೀರೋ ಜೀರೋ, ಕೊನೆಗೆ ಒಟ್ಟು ಮೊತ್ತವೂ ಝೋರೋ ಆಗಿಯೇನೂ ಇರುವುದಿಲ್ಲ.
ಹಿಂದಿನ ಬಿಲ್‌ನಂತೆಯೇ ಗ್ರಾಹಕರು ಬಳಸಿದ ಯುನಿಟ್‌ಗಳು, ಅದಕ್ಕೆ ತಗಲುವ ವೆಚ್ಚ, ಮೀಟರ್ ಚಾರ್ಜ್ ಎಲ್ಲವೂ ಹಿಂದಿನ ಬಿಲ್‌ನಲ್ಲಿ ಹೇಗಿರುತ್ತಿತ್ತೋ ಈಗಲೂ ಹಾಗೆಯೇ ಇರುತ್ತದೆ. ಅದರ ಜತೆಗೆ ಹೆಚ್ಚುವರಿಯಾಗಿ ಸರ್ಕಾರ ಯಾವ್ಯಾವ ದರಕ್ಕೆ ಪ್ರತಿಯಾಗಿ ಎಷ್ಟೆಷ್ಟು ಹಣ ನೀಡಲಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಿದೆ.
ಹೀಗಿರುತ್ತದೆ ಗೃಹಜ್ಯೋತಿ ಉಚಿತ ದರ ಬಿಲ್
ವಿದ್ಯುತ್ ಬಿಲ್‌ನಲ್ಲಿ ಸಿಎಂ, ಡಿಸಿಎಂ, ಇಂಧನ ಸಚಿವರ ಫೋಟೋ ಮುದ್ರಣ ಮಾಡಲಾಗಿದೆ. ಬಿಲ್‌ನ ಹಿಂಬದಿಯಲ್ಲಿ ಸೂಚನೆಗಳು, ಬಿಲ್ ಕುರಿತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಈ ಬಾರಿ ಎಲ್ಲಾ ಎಸ್ಕಾಂನಲ್ಲಿ ಏಕರೂಪದ ಬಿಲ್ ನೀಡಲು ಇಂಧನ ಇಲಾಖೆ ನಿರ್ಧಾರ ಮಾಡಿದೆ. ಆದರೆ, ಆಯಾ ಎಸ್ಕಾಂನ ಯೂನಿಟ್ ಬೆಲೆ, ಹೊಂದಾಣಿಕೆ ವೆಚ್ಚದಲ್ಲಿ ಬದಲಾವಣೆ ಇರುತ್ತದೆ.
ಬಿಲ್ ನಲ್ಲಿ ಏನಿರುತ್ತೆ?
- ಬಿಲ್ ಮುಂಬದಿಯಲ್ಲಿ ಕರೆಂಟ್ ಬಿಲ್
- ಗೃಹಜ್ಯೋತಿ ಯೂನಿಟ್ ಮಾಹಿತಿ
- ಬಿಲ್ ಪ್ರತಿ ಕಾಲಂ ಸ್ಪಷ್ಟ
- ಹೆಚ್ಚುವರಿ ಸರಾಸರಿ ವಿದ್ಯುತ್ ಬಳಕೆ ಯೂನಿಟ್
- ಗೃಹಜ್ಯೋತಿ ಪರಿಗಣಿಸಿದ ಯೂನಿಟ್ ಅಂಶ ಕಾಲಂ ಸೇರ್ಪಡೆ
- ನಗರ, ಗ್ರಾಮೀಣ ಪ್ರದೇಶದ ಬಿಲ್ ತುಸು ಭಿನ್ನ
- ಬೆಸ್ಕಾಂ, ನಾಲ್ಕು ಎಸ್ಕಾಂ ಶುಲ್ಕ, ವಿದ್ಯುತ್ ದರದಲ್ಲಿ ವ್ಯತ್ಯಾಸ ಇರಲಿದೆ.
- ನಿಮ್ಮ ಮೀಟರ್‌ಗೆ ನಿಗದಿಯಾಗಿರುವ ಗರಿಷ್ಠ ಯುನಿಟ್ ಬಳಕೆಯೂ ನಮೂದಾಗಿರುತ್ತದೆ.