ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ (Congress Guarantee), ಪ್ರತಿ ಮನೆಗೆ ಗರಿಷ್ಠ 200 ಯುನಿಟ್ ಉಚಿತ ವಿದ್ಯುತ್ (Free Electricity) ನೀಡುವ ಗೃಹಜ್ಯೋತಿ ಸ್ಕೀಂನ (Gruhajyothi scheme) ನೋಂದಣಿ ರಾಜ್ಯಾದ್ಯಂತ ಭರದಿಂದ ಸಾಗಿದ್ದು, ಜೂನ್ 28ರ ಸಂಜೆ 7 ಗಂಟೆಯ ಹೊತ್ತಿಗೆ 77 ಲಕ್ಷ ಗ್ರಾಹಕರ ನೋಂದಣಿ ನಡೆದಿದೆ.
ಜೂನ್ 18ರಿಂದ ಆರಂಭಗೊಂಡಿರುವ ನೋಂದಣಿ ಪ್ರಕ್ರಿಯೆಯಲ್ಲಿ ಆರಂಭದಲ್ಲಿ ಸ್ವಲ್ಪ ನಿಧಾನಗತಿ ಇದ್ದರೂ ಈಗ ಸರಾಗವಾಗಿ ಸಾಗುತ್ತಿದೆ. ಜೂನ್ 27ರಂದು ಒಂದೇ ದಿನ 8,18,741 ಮಂದಿ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ 10 ದಿನಗಳಲ್ಲಿ 77,20,207 ಮಂದಿ ನೋಂದಣಿ ಮಾಡಿಕೊಂಡಿದ್ದು, ದಿನಕ್ಕೆ ಸರಾಸರಿ 8 ಲಕ್ಷ ಮಂದಿ ನೋಂದಣಿ ಮಾಡಿಕೊಂಡಂತಾಗಿದೆ. ರಾಜ್ಯದಲ್ಲಿ ಒಟ್ಟು 2.40 ಕೋಟಿ ವಿದ್ಯುತ್ ಬಳಕೆದಾರರಿದ್ದಾರೆ ಎಂಬ ಲೆಕ್ಕಾಚಾರವಿದ್ದು, ಅದನ್ನು ಪರಿಗಣಿಸಿದರೆ ಕೇವಲ 10 ದಿನದಲ್ಲಿ ಶೇ. 33ಕ್ಕಿಂತಲೂ ಹೆಚ್ಚು ಗ್ರಾಹಕರು ನೋಂದಣಿ ಮಾಡಿಕೊಂಡಂತಾಗಿದೆ.
ಜೂನ್ 18ರಿಂದ ಜೂನ್ 26ರವರೆಗೆ ಒಟ್ಟು 63,86,346 ಮಂದಿ ನೋಂದಣಿ ಮಾಡಿಕೊಂಡಿದ್ದರು. ಜೂನ್ 27ರಂದು, 8,18,741 ಮಂದಿ ನೋಂದಣಿ ಮಾಡಿಕೊಂಡಿದ್ದರೆ, ಜೂನ್ 28ರಂದು 7ಗಂಟೆವರೆಗೆ 5,15,120 ಮಂದಿ ನೋಂದಣಿ ಮಾಡಿದ್ದಾರೆ. ಈ ಸಂಖ್ಯೆ ರಾತ್ರಿಯವರೆಗೆ ಇನ್ನೂ ಹೆಚ್ಚಾಗಬಹುದು.
ಯಾವ ವಿಭಾಗದಲ್ಲಿ ಎಷ್ಟು ನೋಂದಣಿ?
ಈಗ ಆಗಿರುವ ಒಟ್ಟು 77,20,207 ಗ್ರಾಹಕರ ನೋಂದಣಿ ಪೈಕಿ ನಾನಾ ವಿಭಾಗದಲ್ಲಿ ಆಗಿರುವ ನೋಂದಣಿಗಳ ಪ್ರಮಾಣ ಹೀಗಿದೆ.
ಬೆಸ್ಕಾಂ: 31,55,367
ಸಿಇಎಸ್ಸಿ: 12,04,627
ಜೆಸ್ಕಾಂ: 8,15,968
ಹೆಸ್ಕಾಂ: 15,99,994
ಎಚ್ಆರ್ಇಸಿಎಸ್: 36,906
ಮೆಸ್ಕಾಂ: 9,07,398
ಒಟ್ಟು: 77,20,207
ನೀವಿನ್ನೂ ನೋಂದಣಿ ಮಾಡಿಸಿಕೊಂಡಿಲ್ಲವೇ?
ಕುಟುಂಬವೊಂದಕ್ಕೆ ಗರಿಷ್ಠ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬೇಕೆಂದರೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೀವಿನ್ನೂ ನೋಂದಣಿ ಮಾಡಿಕೊಂಡಿಲ್ಲ ಎಂದಾದರೆ ಈ ಅಂಶಗಳನ್ನು ಗಮನಿಸಿ
ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?
ಗೃಹಜ್ಯೋತಿ ಯೋಜನೆಗೆ ನೀವು ಹತ್ತಿರದ ವಿದ್ಯುತ್ ಕಚೇರಿ, ನಾಡಕಚೇರಿ, ಕಂಪ್ಯೂಟರ್, ಮೊಬೈಲ್, ಲ್ಯಾಪ್ಟಾಪ್ನಲ್ಲಿ ಅಧಿಕೃತ ಪೋರ್ಟಲ್ನಲ್ಲಿ https://sevasindugs.karnataka.gov.in ನಲ್ಲಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಬೇಕಿರುವ ದಾಖಲೆಗಳು: ವಿದ್ಯುತ್ ಬಿಲ್’ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಹಾಗು ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು.
ಇದನ್ನೂ ಓದಿ: Gruhalakshmi Scheme: ಅರ್ಜಿ ಸಲ್ಲಿಸಲು ಗೃಹಲಕ್ಷ್ಮಿ App ರೆಡಿ; ದಾಖಲೆ ರೆಡಿ ಮಾಡಿಕೊಳ್ಳಿ