ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ (Congress Government) ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ (Congress Guarantee) ಪೈಕಿ ಒಂದಾದ ಗೃಹ ಜ್ಯೋತಿ ಯೋಜನೆ (Gruhajyoti scheme) ಜುಲೈ ಒಂದರಿಂದಲೇ ಜಾರಿಗೆ ಬರಲಿದೆ. ಅಂದರೆ ಜೂನ್ 30ರ ಮಧ್ಯರಾತ್ರಿಯಿಂದಲೇ ಉಚಿತ ವಿದ್ಯುತ್ (Free Electricity) ಲೆಕ್ಕಾಚಾರ ಶುರುವಾಗಲಿದೆ.
200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ಮಹತ್ವದ ಯೋಜನೆ ಇದಾಗಿದೆ. ಕುಟುಂಬಗಳು ಈಗ ಬಳಸುತ್ತಿರುವ ಸರಾಸರಿ ವಿದ್ಯುತ್‌ನ ಶೇಕಡಾ ಹತ್ತರಷ್ಟು ಹೆಚ್ಚು ವಿದ್ಯುತ್ ಬಳಸಲು ಈ ಯೋಜನೆಯಲ್ಲಿ ಅವಕಾಶವಿದೆ. ಅದಕ್ಕಿಂತ ಹೆಚ್ಚು ಬಳಸಿದರೆ ಬಳಸಿದ ಯುನಿಟ್‌ಗಳ ಆಧಾರದಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. 200ಕ್ಕಿಂತ ಹೆಚ್ಚು ಯುನಿಟ್ ಬಳಸುವ ಕುಟುಂಬಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
ಗೃಹ ಜ್ಯೋತಿ ಯೋಜನೆಗೆ ಕಳೆದ ಜೂನ್ 18ರಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಸುಮಾರು 2.14 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಬಳಕೆ ವ್ಯಾಪ್ತಿಗೆ ಬರುವ ಸಾಧ್ಯತೆಗಳನ್ನು ಕಂಡುಕೊಳ್ಳಲಾಗಿದೆ. ಅವರ ಪೈಕಿ ಕಳೆದ 11 ದಿನದ ಅವಧಿಯಲ್ಲಿ 85 ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ 20 ದಿನಗಳಲ್ಲಿ ಎಲ್ಲ ಅರ್ಹ ಗ್ರಾಹಕರು ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.
ಆಗಸ್ಟ್ ತಿಂಗಳಲ್ಲಿ ಬರುವ ಬಿಲ್ ಉಚಿತ!
ಉಚಿತ ವಿದ್ಯುತ್‌ನ ಲೆಕ್ಕಾಚಾರ ಜುಲೈ 1ರಿಂದಲೇ ಆರಂಭವಾಗಲಿದೆ. ಹಾಗಂತ ಮೀಟರ್‌ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮೀಟರ್‌ಗಳು ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚಾಗಿದೆ ಎನ್ನುವುದನ್ನು ಲೆಕ್ಕ ಮಾಡುತ್ತಲೇ ಇರುತ್ತವೆ. ಅದು ಆಯಾ ಮೀಟರ್‌ಗೆ ವಿಧಿಸಿದ ಗರಿಷ್ಠ ಬಳಕೆಯ ಮಿತಿಯೊಳಗೇ ಇದ್ದರೆ ಆಗಸ್ಟ್‌ನಲ್ಲಿ ಉಚಿತ ಬಿಲ್ ಎಂದು ಬರುತ್ತದೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ನೀಡಲಾಗುತ್ತದೆ.
12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಫ್ರಿ ವಿದ್ಯುತ್ ಸಿಗಲಿದೆ. 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ. 12 ತಿಂಗಳ ಸರಾಸರಿಯ ಬಿಲ್ನಲ್ಲಿ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಿದೆ.
ಉಚಿತ ವಿದ್ಯುತ್ ಲೆಕ್ಕಾಚಾರ ಹೇಗೆ?
ಕಳೆದ 12 ತಿಂಗಳಿನಲ್ಲಿ ನೀವು 100 ಯುನಿಟ್ ವಿದ್ಯುತ್ ಬಳಸಿದ್ದರೆ, ನಿಮಗೆ ಈಗ 110 ಯುನಿಟ್‌ವರೆಗೆ ಮಾತ್ರ ಉಚಿತ ವಿದ್ಯುತ್ ಬಳಸಲು ಅವಕಾಶ ಇರುತ್ತದೆ. ಅಂದರೆ ಸರಾಸರಿ ಬಳಕೆಯ ಶೇಕಡಾ 10ರಷ್ಟು ಹೆಚ್ಚು ಉಚಿತ ಇದೆ ಎಂದು ಮಿತಿ ಮೀರಿ ಬಳಕೆ ಮಾಡಿದರೆ ನಿಮಗೆ ವಿದ್ಯುತ್ ಬಿಲ್ ಬರಲಿದೆ.
ಬಾಕಿ ವಿದ್ಯುತ್ ಬಿಲ್ ಕಟ್ಟಬೇಕು ಇನ್ನು ನೀವು ಉಚಿತ ವಿದ್ಯುತ್ ಪಡೆಯಬೇಕು ಎಂದರೆ ಬಾಕಿ ಇರುವ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಸರ್ಕಾರ ಸೆಪ್ಟೆಂಬರ್ ವರೆಗೆ ಇದಕ್ಕೆ ಸಮಯ ನೀಡಿದ್ದು, ಉಚಿತ್ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಿದವರು ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಪಾವತಿ ಮಾಡಬೇಕು.
ನೀವಿನ್ನೂ ನೋಂದಣಿ ಮಾಡಿಸಿಕೊಂಡಿಲ್ಲವೇ?
ನೀವು ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಯಾಗಲು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ವೆರಿಗುಡ್. ಹಾಗಂತ ಇನ್ನೂ ಅರ್ಜಿ ಸಲ್ಲಿಸಿಲ್ಲವಾದರೂ ಯಾವುದೇ ರೀತಿಯಲ್ಲಿ ಚಿಂತಿಸುವ ಅಗತ್ಯವಿಲ್ಲ. ಸೇವಾ ಸಿಂಧು ಪೋರ್ಟಲ್‌ನಲ್ಲಿ, ಎಲ್ಲ ವಿದ್ಯುತ್ ಕಚೇರಿಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮೊಬೈಲ್‌ನಲ್ಲೇ ಅತ್ಯಂತ ಸರಳವಾಗಿ ಮಾಡಬಹುದು.
ಇದನ್ನೂ ಓದಿ: Gruhajyothi Scheme: ಕೇವಲ10 ದಿನದಲ್ಲಿ 77 ಲಕ್ಷ ದಾಟಿದ ಗೃಹ ಜ್ಯೋತಿ ನೋಂದಣಿ, 33% ಪೂರ್ಣ
ನೀವು ನಿಮ್ಮ ವಿದ್ಯುತ್ ಸಂಪರ್ಕದ ಖಾತೆ ಸಂಖ್ಯೆ, ಆರ್‌ಆರ್ ನಂಬರ್, ನಿಮ್ಮ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಇವಿಷ್ಟನ್ನು ಇಟ್ಟುಕೊಂಡು ಸೇವಾ ಸಿಂಧು app ಮೂಲಕ ಸರಳವಾಗಿ ಅರ್ಜಿ ಹಾಕಬಹುದು.
ಅರ್ಜಿ ಸಲ್ಲಿಸಲು ಸಾಕಷ್ಟು ಸಮಯಾವಕಾಶ ಇದೆ. ಆರಂಭದಲ್ಲಿ ಪೋರ್ಟಲ್ ಸಮಸ್ಯೆ ಮತ್ತಿತರ ಕಾರಣಗಳಿಂದಾಗಿ ನೋಂದಣಿ ಸ್ವಲ್ಪ ವಿಳಂಬ ಗತಿಯಲ್ಲಿ ನಡೆದಿದ್ದರೂ ಈಗ ದಿನಕ್ಕೆ ಸರಾಸರಿ 10 ಲಕ್ಷ ಗ್ರಾಹಕರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಇನ್ನು 12 ದಿನಗಳ ಒಳಗೆ ಬಹುತೇಕ ಎಲ್ಲ ಗ್ರಾಹಕರು ನೋಂದಣಿ ಮಾಡಿಕೊಳ್ಳಲಿದ್ದಾರೆ. ಹೀಗಾಗಿ ಒತ್ತಡವಿಲ್ಲದೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Free Electricity: ಉಚಿತ ವಿದ್ಯುತ್ ಅರ್ಜಿ ಪೋರ್ಟಲ್ ಓಪನ್ ಆಗ್ತಿಲ್ವಾ? ಈ ಲಿಂಕ್ ಬಳಸಿ, ನೇರ ಕನೆಕ್ಟ್ ಆಗುತ್ತೆ