Site icon Vistara News

Gruhalakshmi scheme : ಗೃಹಲಕ್ಷ್ಮಿಗೆ ಮತ್ತೆ ವಿಘ್ನ; ಅರ್ಜಿ ಸಲ್ಲಿಕೆ ಜೂನ್‌ 16ರಿಂದ ಆರಂಭ ಆಗಲ್ಲ!

Gruhalakshmi

#image_title

ಬೆಂಗಳೂರು: ಬೆಳಗ್ಗೆ ಒಂದು ಮಾತನಾಡುವುದು, ಸಂಜೆ ಇನ್ನೊಂದು ಎಂಬ ಮಾತಿಗೆ ಪೂರಕವಾಗಿ ನಡೆದುಕೊಂಡಿದ್ದಾರೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar). ಗುರುವಾರ ಬೆಳಗ್ಗೆಯಷ್ಟೇ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ರಾಜ್ಯ ಸರ್ಕಾರ ಕುಟುಂಬದ ಯಜಮಾನಿ ಮಹಿಳೆಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi scheme) ಜೂನ್‌ 16ರ ಮಧ್ಯಾಹ್ನ 1.30ರಿಂದ ಅರ್ಜಿ ಸಲ್ಲಿಸಬಹುದು (Gruhalakshmi scheme application) ಎಂದು ಪ್ರಕಟಿಸಿದ್ದರು. ಆದರೆ, ಸಂಜೆ ಸಂಪುಟ ಸಭೆ ಮುಗಿದ ಬಳಿಕ ಮಾತನಾಡಿದ ಅವರು ಪ್ಲೇಟು ತಿರುಗಿಸಿದ್ದಾರೆ! ಅರ್ಜಿ ಸಲ್ಲಿಕೆ ಆರಂಭಕ್ಕೆ ಇನ್ನೂ ನಾಲ್ಕೈದು ದಿನ ಬೇಕಾದೀತು ಎನ್ನುವುದು ಅವರ ಸಂಜೆಯ ಮಾತು!

ಗೃಹಲಕ್ಷ್ಮೀ ಯೋಜನೆಯ ಅರ್ಜಿ ಬಿಡುಗಡೆ ಕಾರ್ಯಕ್ರಮವನ್ನು ನಾಲ್ಕೈದು ದಿನ ಮುಂದೂಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಂಪುಟ ಸಭೆಯ ಬಳಿಕ ಸ್ಪಷ್ಟಪಡಿಸಿದರು. ಯೋಜನೆಯ ಅರ್ಜಿ ಬಿಡುಗಡೆ ಕಾರ್ಯಕ್ರಮವನ್ನು ನಾಲ್ಕೈದು ದಿನದ ಮಟ್ಟಿಗೆ ಮುಂದೂಡಲಾಗಿದೆ.

ಕೆಲವೊಂದು ತಾಂತ್ರಿಕ ಸಂಗತಿಗಳ ಮರುಪರಿಶೀಲನೆ ಆಗಬೇಕಾಗಿದೆ. ಒಮ್ಮೆ ಆರಂಭಿಸಿದ ಬಳಿಕ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಎಲ್ಲವನ್ನೂ ಸರಿಪಡಿಸಿಕೊಂಡು ನಾಲ್ಕೈದು ದಿನಗಳ ಬಳಿಕ ಅರ್ಜಿ ಸ್ವೀಕಾರ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ತಾಂತ್ರಿಕ ಸಮಸ್ಯೆ ಉಂಟಾಗಬಾರದು, ಅಲ್ಲಿ ಸಲ್ಲಿಕೆಗೆ ತೊಂದರೆಯಾಗಬಾರದು ಎಂದು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಹೀಗಾಗಿ ಅದೆಲ್ಲವನ್ನೂ ಸರಿ ಮಾಡಿಕೊಂಡೇ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸುವುದು ಎಂದು ತೀರ್ಮಾನಿಸಲಾಯಿತು ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯ ಅರ್ಜಿ ಫಾರಂ ತುಂಬಲು ಕಷ್ಟವೇನಿಲ್ಲ. ಕೇವಲ ನಾಲ್ಕರಿಂದ ಆರು ನಿಮಿಷ ಕಾಲಾವಕಾಶ ಸಾಕು. ಆದರೆ ಮಹಿಳೆಯರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಒಂದಷ್ಟು ಪೂರ್ವ ತಯಾರಿ ಮಾಡಿಕೊಳ್ಳುವುದಕ್ಕಾಗಿಯೇ ಅರ್ಜಿ ಬಿಡುಗಡೆ ಕಾರ್ಯಕ್ರಮವನ್ನು ನಾಲ್ಕೈದು ದಿನ ಮುಂದೂಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದರು.

ಅವಸರ ಮಾಡಬೇಕಾಗಿಲ್ಲ ಎಂದ ಹೆಬ್ಬಾಳ್ಕರ್‌

ಯೋಜನೆಗೆ ಆಗಸ್ಟ್‌ 17 ಅಥವಾ 18ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಾಗುತ್ತದೆ. ಈಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸುತ್ತೇವೆ. ಅವುಗಳ ಪರಿಶೀಲನೆ ನಡೆದು ಹಣವನ್ನು ನೇರ ನಗದು ರೂಪದಲ್ಲಿ ಖಾತೆಗೆ ಹಾಕಲು ಎರಡು ತಿಂಗಳ ಕಾಲಾವಕಾಶವಿದೆ. ಮಹಿಳೆಯರು ಅವಸರ ಮಾಡಬೇಕಾದ ಅವಶ್ಯಕತೆ ಇಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂಬುದನ್ನು ನಿಗದಿ ಮಾಡಲಾಗಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮುಂದೆಯೂ ಅವಕಾಶವಿದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಇದು ಎರಡನೇ ಬಾರಿ ಮುಂದೂಡಿಕೆ

ನಿಜವೆಂದರೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕಾರ ಪ್ರಕ್ರಿಯೆ ಜೂನ್‌ 15ರಂದು ಆರಂಭವಾಗುತ್ತದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಒಂದು ದಿನ ತಡವಾಗಿ (ಜೂನ್‌ 16) ಆರಂಭವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದರು. ಇದೀಗ ಮತ್ತೆ ನಾಲ್ಕೈದು ದಿನ ಮುಂದಕ್ಕೆ ಹಾಕಲಾಗಿದೆ. ಅಂದರೆ ಮುಂದಿನ ಅರ್ಜಿ ಸ್ವೀಕಾರ ಮುಂದಿನ ವಾರದ ಮಂಗಳವಾರ- ಬುಧವಾರದ ಹೊತ್ತಿಗೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಗೃಹ ಜ್ಯೋತಿ ಅರ್ಜಿ ಸ್ವೀಕಾರದ ವಿಚಾರದಲ್ಲೂ ಹೀಗೇ ಅಗಿದೆ. ಮೊದಲು ಜೂನ್‌ 15ರಿಂದ ಅರ್ಜಿ ಸ್ವೀಕಾರ ಎಂದು ಹೇಳಿದ್ದದ್ದು ಈಗ ಕೆಲವು ದಿನಗಳ ಮಟ್ಟಿಗೆ ಮುಂದಕ್ಕೆ ಹೋಗಿದೆ!

ಹಿಂದಿನ ಸುದ್ದಿ : Gruhalakshmi scheme : ಗೃಹ ಲಕ್ಷ್ಮಿ ಯೋಜನೆಗೆ ಶುಭ ಶುಕ್ರವಾರದಿಂದ ಅರ್ಜಿ ಸಲ್ಲಿಕೆ! ದಾಖಲೆ ಏನೇನು ಬೇಕು?

Exit mobile version