ಬೆಂಗಳೂರು: ರಾಜ್ಯ ಸರ್ಕಾರ ಗೃಹಿಣಿಯರಿಗೆ ತಿಂಗಳಿಗೆ 2000 ರೂ. ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು (Gruhalakshmi scheme) ಜಾರಿಗೆ ಮಾಡಲು ನಿರ್ಧರಿಸಿದೆಯಾದರೂ ಅದಕ್ಕೆ ಸಂಬಂಧಿಸಿ ಪ್ರಕ್ರಿಯೆಗಳು ಇನ್ನೂ ಆರಂಭಗೊಂಡಿಲ್ಲ. ಕಳೆದ ಜೂನ್ 16ರಂದೇ ಅರ್ಜಿ ಸಲ್ಲಿಕೆ ಆರಂಭ (Application process) ಎಂದು ಘೋಷಿಸಲಾಗಿತ್ತಾದರೂ ನಾನಾ ಕಾರಣಗಳನ್ನು ಮುಂದೊಡ್ಡಿ ಅದನ್ನು ಮುಂದಕ್ಕೆ ಹಾಕಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದ ಸೇವಾ ಸಿಂಧು ಪೋರ್ಟಲ್ (Sewa sindhu portal) ಬದಲು ಹೊಸ ಆ್ಯಪ್ (New app for Gruhalakshmi scheme) ರೂಪಿಸಲಾಗಿದ್ದು, ಅದಕ್ಕೆ ಸಂಪುಟದ ಒಪ್ಪಿಗೆ ಪಡೆದು ಬಳಿಕ ಬಿಡುಗಡೆ ಮಾಡಲಾಡುತ್ತದೆ. ಮುಂದಿನ ಸಚಿವ ಸಂಪುಟ ಸಭೆ (Cabinet Meeting) ನಡೆಯುವುದು ಜೂನ್ 29ಕ್ಕೆ (ಮುಂದಿನ ಗುರುವಾರ). ಹಾಗಾಗಿ ಅದರ ಬಳಿಕವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಆ್ಯಪ್
ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಉತ್ಸಾಹದಿಂದ ಓಡಾಡುತ್ತಿದ್ದಾರೆ. ಜೂನ್ 16ರಿಂದಲೇ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯಲಿದೆ ಎಂದು ಘೋಷಿಸಲಾಗಿತ್ತು. ಆದರೆ, ಅಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ನಂತರ ಪ್ರಕ್ರಿಯೆ ಆರಂಭವನ್ನು ಮುಂದೂಡಲಾಗಿತ್ತು. ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಬಾರದಿರಲಿ ಎಂಬ ಕಾರಣಕ್ಕಾಗಿ ಜಾಗರೂಕವಾಗಿ ನಿರ್ವಹಿಸಲಾಗುತ್ತಿದೆ. ಹೀಗಾಗಿ ಮೂರ್ನಾಲ್ಕು ದಿನ ತಡವಾಗಬಹುದು ಎಂದು ತಿಳಿಸಲಾಗಿತ್ತು. ಆ ಬಳಿಕ ಜೂನ್ 26ಕ್ಕೆ ಅರ್ಜಿ ಹಾಕಲು ವ್ಯವಸ್ಥೆ ಮಾಡುತ್ತೇವೆ ಎಂದಿದ್ದರು.
ಇದೀಗ ಶುಕ್ರವಾರ (ಜೂನ್ 23) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಐಟಿಬಿಟಿ ಸಚಿವ ಪ್ರಿಯಾಂಕಾ ಖರ್ಗೆ ಮತ್ತು ಅಧಿಕಾರಿಗಳು ಸೇರಿ ಇನ್ನೊಂದು ಸುತ್ತಿನ ಸಭೆ ನಡೆಸಿದ್ದು ಅರ್ಜಿ ಸ್ವೀಕಾರದ ಬಗ್ಗೆ ಚರ್ಚೆ ನಡೆಸಲಾಗಿದೆ.
ರಾಜ್ಯದಲ್ಲಿ ಪ್ರಸಕ್ತ ಗೃಹ ಜ್ಯೋತಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಜಾರಿಯಲ್ಲಿದ್ದು, ಇದಕ್ಕೆ ಪ್ರಮುಖವಾಗಿ ಸೇವಾ ಸಿಂಧು ಪೋರ್ಟಲ್‌ನ್ನು ಬಳಸಲಾಗುತ್ತಿದೆ. ಈಗ ಗೃಹ ಜ್ಯೋತಿ ಯೋಜನೆಯ ಅರ್ಜಿ ಸ್ವೀಕಾರವನ್ನೂ ಸೇವಾ ಸಿಂಧು ಪೋರ್ಟಲ್‌ನಲ್ಲೇ ನಡೆಸಿದರೆ ಒತ್ತಡ ಹೆಚ್ಚಾಗುತ್ತದೆ, ಹೀಗಾಗಿ ಅದಕ್ಕೆ ಪ್ರತ್ಯೇಕ ಆ್ಯಪ್ ಒಂದನ್ನು ರೂಪಿಸಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.
ಈ ಆ್ಯಪ್‌ನ್ನು ಮುಂದಿನ ಸಚಿವ ಸಂಪುಟ ಸಭೆಯ ಮುಂದಿಟ್ಟು ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿ ಮುಖ್ಯಮಂತ್ರಿಗಳ ಅನುಮತಿ ಪಡೆಯಲಾಗುತ್ತದೆ. ಜತೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ನೀತಿ ನಿಯಮಗಳನ್ನು ಅಲ್ಲೇ ಅಂತಿಮಗೊಳಿಸಲಾಗುತ್ತದೆ. ಆ ಬಳಿಕ ಯಾವಾಗದಿಂದ ಅರ್ಜಿ ಸ್ವೀಕಾರ ಮಾಡಬೇಕು ಎಂದು ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಆನ್‌ಲೈನ್, ಆಫ್‌ಲೈನ್ ಎರಡೂ ಕಡೆ ಅವಕಾಶ
ಅಫ್ ಲೈನ್ ಹಾಗೂ ಆನ್ ಲೈನ್ ಎರಡು ಕಡೆ ಅರ್ಜಿ ಹಾಕಲು ವ್ಯವಸ್ಥೆ ಮಾಡಲಾಗುತ್ತದೆ. ಆಫ್ ಲೈನ್ ಅರ್ಜಿ ಭರ್ತಿ ಮಾಡಲು ಪ್ರಜಾಪ್ರತಿನಿಧಿ ಆಯ್ಕೆ ಆಗಬೇಕು. ಆ ಪ್ರಜಾಪ್ರತಿನಿಧಿಗಳನ್ನಾಗಿ ಯಾರನ್ನು ಆಯ್ಕೆ ಮಾಡಬೇಕು, ಹೇಗೆ ಮಾಡಬೇಕು ಎಂಬ ಚರ್ಚೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರನ್ನೆ ಆಯ್ಕೆ ಮಾಡಬೇಕು ಎಂಬ ಸಲಹೆ ಬಂದಿದೆ. ನಾಡ ಕಚೇರಿ, ತಹಶಿಲ್ದಾರ ಕಚೇರಿಗಳಲ್ಲು ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: Free Bus Service: 2ನೇ ವೀಕೆಂಡ್‌ಗೆ ತಗ್ಗಿದ ಮಹಿಳೆಯರ ರಷ್; ಬಸ್‌ಗಳಲ್ಲಿ ನಿರಾಳ ಸಂಚಾರ
ಗೃಹಲಕ್ಷ್ಮಿ ಗ್ಯಾರಂಟಿ ಯಾಕೆ ವಿಳಂಬ?
1) ಮೂರು ಇಲಾಖೆಗಳ ಸಂಯೋಗದಲ್ಲಿ ಗ್ಯಾರಂಟಿ ಅನುಷ್ಠಾನ ಆಗಬೇಕು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ,ಗ್ರಾಮೀಣ ಮತ್ತು ಪಂಚಾಯತ್ ರಾಜ್ಯ ಇಲಾಖೆ ಸಂಯೋಗದಲ್ಲಿ ಅನುಷ್ಠಾನ ಆಗಬೇಕು. ಹಾಗಾಗಿ ಮೂರು ಇಲಾಖೆಗಳಲ್ಲಿ ಸಮನ್ವಯ ಮೂಡಬೇಕು. ಇದಕ್ಕಾಗಿ ಮೂರು ಇಲಾಖೆಗಳ ಸಚಿವರ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದರು.
2) ಪ್ರಜಾಪ್ರತಿನಿಧಿಗಳ ಯಾರು ಎಂಬುದು ಚರ್ಚೆ ಆಗಬೇಕು
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಪ್ರಜಾಪ್ರತಿನಿಧಿಗಳ ನೇಮಕ ಆಗಬೇಕು. ಪ್ರತಿ 500 ಜನರಿಗೆ ಒಬ್ಬರು ಪ್ರಜಾಪ್ರತಿನಿಧಿಗಳು ಆಯ್ಕೆ ಆಗಬೇಕು.. ಎಷ್ಟು ಜನಸಂಖ್ಯೆ ಇದೆ, ಅದಕ್ಕೆ ಅನುಗುಣವಾಗಿ ಪ್ರಜಾಪ್ರತಿನಿಧಿ ಆಯ್ಕೆ ಆಗಬೇಕು.
3) ಸಚಿವ ಸಂಪುಟ ಸಭೆಯಲ್ಲಿ ನೂತನ ಆ್ಯಪ್ ಬಗ್ಗೆ ಮಾಹಿತಿ ನೀಡಬೇಕು.
ಆ್ಯಪ್ ಗೆ ಹಾಗೂ ಪ್ರಜಾಪ್ರತಿನಿಧಿಗಳ ಆಯ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗಬೇಕು
4) ಯಾವಾಗದಿಂದ ಅರ್ಜಿ ಕರೆಯಬೇಕು ಎಂಬುದು ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಬೇಕು.
ಈ ಎಲ್ಲಾ ಪ್ರತಿಕ್ರಿಯೆ ಮುಗಿದು ಅರ್ಜಿ ಕರೆಯಬೇಕು ಅರ್ಜಿ ಸ್ವೀಕಾರದ ಬಳಿಕ ಅರ್ಜಿಗಳ ವಿಲೇವಾರಿ ಆಗಬೇಕು. ವಿಲೇವಾರಿ ಆಗಿ ಫಲಾನುಭವಿಗಳ ಯಾರು ಎಂದು ಆಯ್ಕೆ ಆಗಬೇಕು.