Site icon Vistara News

Gruhalakshmi Scheme: ಎಚ್ಚರ, ಗೃಹಲಕ್ಷ್ಮಿ ಹೆಸರಲ್ಲಿ ಹುಟ್ಟಿಕೊಂಡಿವೆ ನಕಲಿ ಆ್ಯಪ್‌ಗಳು

Gruhalakshmi application

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರದ (Congress Government) ಗೃಹ ಲಕ್ಷ್ಮಿ ಯೋಜನೆ (Gruhalakshmi Scheme) ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಮನೆಯೊಡತಿ ಖಾತೆಗೆ ತಿಂಗಳಿಗೆ 2000 ರೂ. ತುಂಬುವ ಈ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಕೆಲವೇ ದಿನಗಳಲ್ಲಿ ಇದರ ಘೋಷಣೆಯಾಗಬಹುದು. ಆದರೆ, ಈಗಾಗಲೇ ಕೆಲವು ಏಜೆನ್ಸಿಗಳು ನಕಲಿ ಅರ್ಜಿಗಳನ್ನು ತುಂಬಿಸಿ 150 ರೂ. ಕಿತ್ತುಕೊಂಡು ವಂಚನೆ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಇದರ ಜತೆಗೆ ಹತ್ತಾರು ನಕಲಿ ಆ್ಯಪ್‌ಗಳು (Fake Applications) ಕೂಡಾ ಪ್ಲೇ ಸ್ಟೋರ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಬಗ್ಗೆ ಮಹಿಳೆಯರು ಎಚ್ಚರ ಹೊಂದಿರಬೇಕಾಗಿದೆ.

ಗೃಹ ಲಕ್ಷ್ಮಿ ಯೋಜನೆಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ (Sewa sindhu Portal) ಮಾತ್ರವಲ್ಲ ಅದಕೆಂದೇ ವಿಶೇಷವಾದ ಒಂದು ಆ್ಯಪ್ ರೂಪಿಸಿ ಅದರಲ್ಲೂ ನೋಂದಣಿಗೆ ಅವಕಾಶ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದ್ದರು. ಈಗಾಗಲೇ ಈ ಆ್ಯಪ್ ಸಿದ್ಧವಾಗಿದ್ದು, ಜೂನ್‌ 27ರಂದು ನಡೆದ ಸಂಪುಟ ಸಭೆಯಲ್ಲಿ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಸಚಿವರ ಮುಂದೆ ಪ್ರದರ್ಶಿಸಲಾಗಿದೆ. ಇದರಲ್ಲಿ ಸಣ್ಣ ಪುಟ್ಟ ಬದಲಾವಣೆ, ನೀತಿ ನಿಯಮಗಳನ್ನು ಅಂತಿಮಗೊಳಿಸಿ ಆ್ಯಪ್‌ನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

Beware of Fake applications

ಆದರೆ, ಮೊಬೈಲ್‌ ಪ್ಲೇ ಸ್ಟೋರ್‌ಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಈಗಾಗಲೇ ಹತ್ತಕ್ಕಿಂತಲೂ ಹೆಚ್ಚು ಆ್ಯಪ್‌ಗಳು ಕಾಣಿಸಿಕೊಂಡಿದ್ದು, ಇವ್ಯಾವುವೂ ಅಸಲಿಯಲ್ಲ. ಈ ಆ್ಯಪ್‌ಗಳು ಪಕ್ಕಾ ಸರ್ಕಾರಿ ಆ್ಯಪ್‌ಗಳಂತೆಯೇ ಇದ್ದು, ಅರ್ಜಿ ಫಾರಂ, ಅರ್ಜಿ ಸಲ್ಲಿಕೆಯ ವಿಧಾನ, ಬೇಕಾದ ದಾಖಲೆ, ಸಲಹೆಗಳು ಎಲ್ಲವೂ ಅತ್ಯಂತ ಖಚಿತ ರೂಪದಲ್ಲಿರುತ್ತವೆ. ಹೀಗಾಗಿ ಜನರು ಇದು ಸರ್ಕಾರಿ ಆ್ಯಪ್‌ಗಳೇ ಇರಬಹುದು ಎಂದು ಸುಲಭದಲ್ಲಿ ನಂಬಿ ಬಿಡುವ ಅಪಾಯವಿದೆ.

ಒಂದು ವೇಳೆ ಈ ಆ್ಯಪ್‌ಗಳನ್ನು ಡೌನ್‌ ಲೋಡ್‌ ಮಾಡಿಕೊಂಡರೆ ಅವರು ನಮ್ಮ ಮಾಹಿತಿಗಳನ್ನು ಸಂಪೂರ್ಣವಾಗಿ ಪಡೆದುಕೊಂಡು ವಂಚನೆ ಮಾಡುವ ಅಪಾಯವಿದೆ ಎನ್ನುವುದು ಸೈಬರ್‌ ತಜ್ಞರು ನೀಡುವ ಎಚ್ಚರಿಕೆ. ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಹಂತದಲ್ಲಿ ಗ್ರಾಹಕರು ತಮ್ಮ ಬ್ಯಾಂಕ್‌ ಅಕೌಂಟ್‌ಗಳ ಡಿಟೇಲ್‌ ಕೂಡಾ ನೀಡಬೇಕಾಗುತ್ತದೆ. ಈ ರೀತಿ ಅರ್ಜಿ ತುಂಬುವ ಯಾವುದೋ ಹಂತದಲ್ಲಿ ನಮಗೆ ಬರುವ ಒಟಿಪಿಯನ್ನು ನೀಡುವಂತೆ ಕೇಳುವ ಸಾಧ್ಯತೆ ಇರುತ್ತದೆ. ಅದು ನಮ್ಮ ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ಆನ್‌ಲೈನ್‌ ವ್ಯವಹಾರದ ಒಟಿಪಿಯಾಗಿದ್ದರೆ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.

ಇಂಥ ಫೇಕ್‌ ಆ್ಯಪ್‌ಗಳ ಮೂಲಕ ಸೈಬರ್‌ ಕಳ್ಳರು ಜನರ ಬ್ಯಾಂಕ್‌ ಖಾತೆಗೆ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಯಾರೂ ಅನಧಿಕೃತ ಆ್ಯಪ್‌ಗಳನ್ನು ಡೌನ್‌ ಲೋಡ್‌ ಮಾಡದಂತೆ ಸೂಚನೆ ನೀಡಲಾಗಿದೆ.

ಗಮನಿಸಬೇಕಾದ ಅಂಶಗಳು

1. ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆರಂಭವನ್ನು ಸರ್ಕಾರವೇ ಅಧಿಕೃತವಾಗಿ ಪ್ರಕಟಿಸಲಿದೆ. ಈಗ ಯಾರಾದರೂ ಅರ್ಜಿ ಸಲ್ಲಿಸುತ್ತೇವೆ ಎಂದರೆ ಅವರ ವಿರುದ್ಧ ದೂರು ಕೊಡಿ.
2. ಅರ್ಜಿ ಸಲ್ಲಿಕೆಗೆ ಸರ್ಕಾರ ಬಿಡುಗಡೆ ಮಾಡುವ ಅಧಿಕೃತ App ಅಥವಾ ಸೇವಾ ಸಿಂಧು ಪೋರ್ಟಲನ್ನೇ ಬಳಸಿ
3. ಯಾವುದೇ ಆಮಿಷಗಳಿಗೆ ಬಲಿ ಬೀಳಬೇಡಿ, ಯಾರಿಗೂ ಹಣ ಕೊಡಬೇಡಿ

ನಕಲಿ appಗಳು

ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸುವಾಗ 1 ಪೈಸೆನೂ ಕೊಡ್ಬೇಡಿ, ಅದೂ ಫುಲ್‌ ಫ್ರೀ

ಬೆಳಗಾವಿ: ಮನೆಯೊಡತಿಯ ಖಾತೆಗೆ ತಿಂಗಳಿಗೆ 2000 ರೂ.ವನ್ನು ನೇರವಾಗಿ ಹಾಕುವ ರಾಜ್ಯದ ಕಾಂಗ್ರೆಸ್‌ ಸರ್ಕಾರದ (Congress Government) ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ (Gruhalakshmi scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಆಗಲೇ ಅರ್ಜಿ ಸಲ್ಲಿಕೆ ಹೆಸರಿನಲ್ಲಿ ಕೆಲವು ವ್ಯಕ್ತಿಗಳು, ಏಜೆನ್ಸಿಗಳು ಹಣ ವಸೂಲಿಗೆ ಇಳಿದಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಅವರು ಈ ಯೋಜನೆಗೆ ಅರ್ಜಿ ಸಲ್ಲಿಕೆ ಒಂದು ರೂ. ಕೂಡಾ ಕೊಡಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬಳ್ಳಾರಿ ಸೇರಿದಂತೆ ರಾಜ್ಯದ ಹಲವೆಡೆ ಗೃಹಲಕ್ಷ್ಮಿ ಯೋಜನೆಯ ನಕಲಿ ಅರ್ಜಿ ಹಿಡಿದುಕೊಂಡುಬಂದು ಅದನ್ನು ತುಂಬಿಸಲು 150 ರೂ. ಶುಲ್ಕ ವಸೂಲಿ ಮಾಡಿದ್ದರ ಬಗ್ಗೆ ವಿಸ್ತಾರ ನ್ಯೂಸ್‌ ವರದಿ ಪ್ರಕಟಿಸಿತ್ತು. ಇದರ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಬಳ್ಳಾರಿಯಲ್ಲಿ ಈ ರೀತಿ ಪ್ರಕರಣ ನಡೆದಿರುವುದರ ಬಗ್ಗೆ ಮಾಹಿತಿ ಬಂದಿದೆ. ಇದರ ಬಗ್ಗೆ ತನಿಖೆ ಮಾಡುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ಈ ಅರ್ಜಿ ಸಲ್ಲಿಕೆಗೆ ಒಂದು ರೂ. ಕೂಡಾ ಕೊಡಬೇಕಾಗಿಲ್ಲ ಎಂದರು.

ಇದನ್ನೂ ಓದಿ: Gruhalakshmi Scheme : ಗೃಹಲಕ್ಷ್ಮಿಯರೇ ಹುಷಾರು, ಅರ್ಜಿ ಹೆಸರಲ್ಲಿ ವಂಚನೆ ಮಾಡೋರು ಬರ್ತಿದ್ದಾರೆ!

20 ರೂ. ಸೇವಾ ಶುಲ್ಕ ಕೂಡಾ ಸರ್ಕಾರವೇ ಭರಿಸಲಿದೆ

ʻʻನನ್ನ ಎಲ್ಲ ಇಲಾಖೆಯ ಸಿಬ್ಬಂದಿಗೂ ಈಗಾಗಲೇ ಸೂಚನೆ ನೀಡಿದ್ದೇನೆ. ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಒಂದೂ ರೂಪಾಯಿ ಖರ್ಚು ಮಾಡುವುದು ಬೇಡ. ಅರ್ಜಿ ಸಲ್ಲಿಕೆ ಸೇವಾ ಕೇಂದ್ರಗಳಿಗೆ ನೀಡಬೇಕಾಗಿರುವ 20 ರೂ. ಸೇವಾ ಶುಲ್ಕವನ್ನು ಕೂಡಾ ಸರ್ಕಾರವೇ ಭರಿಸಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೇವಾ ಕೇಂದ್ರಗಳಿಗೆ 20 ರೂ. ಹಣ ನೀಡುವ ನಿರ್ಧಾರ ತೆಗೆದುಕೊಂಡಿದ್ದೇವೆʼʼ ಎಂದು ಹೇಳಿದರು.

ʻʻಸೇವಾ ಸಿಂಧು, ಗ್ರಾಂ ಒನ್, ನಾಡಕಚೇರಿ, ಬಾಪೂಜಿ ಸೇವಾ ಕೇಂದ್ರಗಳಿಗೆ ನಾವೇ ಹಣ ಭರಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನನ್ನ ಇಲಾಖೆಯಿಂದಲೇ ಪ್ರತಿ ಅರ್ಜಿಗೆ 20 ರೂ. ಸೇವಾ ಕೇಂದ್ರಗಳಿಗೆ ನೀಡುತ್ತೇವೆʼʼ ಎಂದು ಹೇಳಿದರು.

Exit mobile version