Site icon Vistara News

Gruhalakshmi Scheme : ನಾಳೆಯಿಂದ ಗೃಹಲಕ್ಷ್ಮಿ ನೋಂದಣಿ ; ಅರ್ಜಿ ಹಾಕುವ ಮುನ್ನ ನೀವು ಈ ಕೆಲಸ ಮಾಡಬೇಕು

Gruhalakshmi regn

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದ (Congress Government) ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ (Gruhalakshmi scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜುಲೈ 19ರಂದು ಮಧ್ಯಾಹ್ನ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಗೆ ನೀಡಲಾಗಿರುವ ಎರಡು ಸಹಾಯವಾಣಿ ನಂಬರ್‌ಗಳು ಚಾಲನೆ ಪಡೆಯಲಿವೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು ವಿಸ್ತಾರ ನ್ಯೂಸ್‌ಗೆ ಈ ಮಾಹಿತಿ ನೀಡಿದರು.

ನೀವು ಅರ್ಜಿ ಸಲ್ಲಿಸಬೇಕು ಎಂದರೆ ಈ ಕೆಲಸ ಮಾಡಬೇಕು

ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ.ಯನ್ನು ಅವರ ಖಾತೆಗೇ ನಗದೀಕರಿಸುವ ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಈ ನೋಂದಣಿ ಪ್ರಕ್ರಿಯೆ ಗಾಮ ಒನ್‌, ಬಾಪೂಜಿ ಕೇಂದ್ರ, ಬೆಂಗಳೂರು ಒನ್‌, ಕರ್ನಾಟಕ ಒನ್‌ ಈ ಕೇಂದ್ರಗಳಲ್ಲಿ ಮಾತ್ರ ನಡೆಯುತ್ತದೆ. ಗೃಹ ಜ್ಯೋತಿಯಂತೆ ಮೊಬೈಲ್‌ನಲ್ಲೇ ನಾವೇ ಸ್ವತಃ ನೋಂದಣಿ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.

ಅರ್ಜಿ ನೋಂದಣಿಯನ್ನು ಯಾವಾಗ ಮಾಡಿಕೊಳ್ಳಬೇಕು, ಯಾವ ಕೇಂದ್ರದಲ್ಲಿ ಮಾಡಿಕೊಳ್ಳಬೇಕು ಎಂಬ ಮಾಹಿತಿ ಅವರವರ ಮೊಬೈಲ್‌ಗೇ ಬರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ತಿಳಿಸಿದ್ದರು. ಆದರೆ, ಹಾಗೆ ನಮಗೆ ಮೆಸೇಜ್‌ ಬರಬೇಕು ಎಂದರೆ ನಾವು ಕೂಡಾ ಒಂದು ಕೆಲಸ ಮಾಡಬೇಕು. ಅದೇನೇಂದರೆ ನಾವು ಸಹಾಯವಾಣಿಗೆ ಸಂದೇಶ ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಬಯಸುವವರು ತಮ್ಮ ನೋಂದಾಯಿತ ಮೊಬೈಲ್‌ನಿಂದ 8147 – 500500 ಸಂಖ್ಯೆಗೆ ಮೆಸೇಜ್‌ ಮಾಡಬೇಕು. ಮೆಸೇಜ್‌ ಮಾಡುವಾಗ ಪಡಿತರ ಚೀಟಿಯ ನಂಬರ್‌ನ್ನೂ ಬರೆದಿರಬೇಕು. ಹಾಗೆ ಮೆಸೇಜ್‌ ಮಾಡಿದ ಬಳಿಕ ಅಲ್ಲಿಂದ ಒಂದು ಸಂದೇಶ ಬರುತ್ತದೆ.

ಪಡಿತರ ಚೀಟಿಯ ನಂಬರ್ ಮೇಸೆಜ್ ಮಾಡಿದರೆ ಅರ್ಜಿ ಸಲ್ಲಿಸಬೇಕಾದ ಸ್ಥಳ ಮತ್ತು ದಿನಾಂಕವನ್ನು ಮೆಸೇಜ್‌ ಮೂಲಕ ಕಳುಹಿಸಲಾಗುತ್ತದೆ. ಬಳಿಕ ನಿಗದಿಪಡಿಸಿದ ಸ್ಥಳ ಮತ್ತು ದಿನಾಂಕದಂದು ಅಲ್ಲಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಕುಟುಂಬದ ಯಜಮಾನಿ ಎಂದು ಗುರುತಿಸಿದ ಮಹಿಳೆ ಮತ್ತು ಪತಿಯ ಆಧಾರ್‌ ಕಾರ್ಡ್‌, ಪಡಿತರ ಕಾರ್ಡ್‌ ಮತ್ತು ಬ್ಯಾಂಕ್‌ ಅಕೌಂಟ್‌ ನಂಬರ್‌ ಇದಿಷ್ಟೇ ಬೇಕಾಗಿರುವ ದಾಖಲೆಗಳು.

ರಾಜ್ಯದಲ್ಲಿ 11 ಸಾವಿರ ನೋಂದಣಿ ಕೇಂದ್ರಗಳಿದ್ದು, ಒಂದು ಕೇಂದ್ರದಲ್ಲಿ ದಿನಕ್ಕೆ 60 ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶವಿರುತ್ತದೆ. ಹೀಗಾಗಿ ಯಾವುದೇ ಗೊಂದಲವಿಲ್ಲದೆ, ನೂಕು ನುಗ್ಗಲು ಇಲ್ಲದೆ ಅರ್ಜಿ ಸಲ್ಲಿಸಬಹುದು. ದಿನಕ್ಕೆ ಆರು ಲಕ್ಷ ಜನ‌ರ ನೋಂದಣಿಗೆ ಅವಕಾಶವಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಯಾವುದೇ ಸಮಸ್ಯೆ ಇದ್ದರೂ ಕಾಲ್‌ ಮಾಡಿ- 1902

ಗೃಹಲಕ್ಷ್ಮಿ ನೋಂದಣಿಗೆ ಸಂಬಂಧಿಸಿ ಯಾವುದೇ ಸಮಸ್ಯೆ, ಗೊಂದಲ ಇದ್ದರೂ ಅದನ್ನು ಪರಿಹರಿಸಿಕೊಳ್ಳಲು ಒಂದು ಹೆಲ್ಪ್‌ ಲೈನ್‌ ತೆರೆಯಲಾಗುತ್ತದೆ. 1902 ಇಲಾಖೆಯ ಹೆಲ್ಪ್ ಲೈನ್ ಸಂಖ್ಯೆಯಾಗಿದ್ದು, ಇದು ಜುಲೈ 19ರ ಸಂಜೆ ಐದು ಗಂಟೆಯಿಂದ ಚಾಲ್ತಿಯಲ್ಲಿರುತ್ತದೆ. ಯಾವುದೇ ಗೊಂದಲ ಇದ್ದರೂ ಕರೆ ಮಾಡಿ ಪರಿಹರಿಸಿಕೊಳ್ಳಬಹುದು.

ಎಲ್ಲ ವ್ಯವಸ್ಥೆಗಳಿಂದ ಬೆಂಬಲ

ರಾಜ್ಯದ ಎಲ್ಲ ಆಡಳಿತಾತ್ಮಕ ವ್ಯವಸ್ಥೆಗಳು ಗೃಹ ಲಕ್ಷ್ಮಿ ನೋಂದಣಿಯ ಪ್ರಕ್ರಿಯೆಯಲ್ಲಿ ಸಹಕರಿಸಲಿವೆ ಎಂದು ಹೇಳಿದರು. ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ತಹಶಿಲ್ದಾರರವರೆಗೂ ಹಳ್ಳಿ ಮಟ್ಟದಿಂದ ಬೆಂಗಳೂರು ಮಟ್ಟದವರೆಗೂ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಯೋಜನೆಯ ಸಿದ್ಧತೆಯಿಂದ ಹಿಡಿದು ಚಾಲನೆವರೆಗೂ ಅವರು ನಮಗೆ ಸಹಕಾರ ನೀಡಿದ್ದಾಋೆ. ಇದನ್ನ ನಡೆಸಿಕೊಂಡು ಹೋಗಲು ಸಂಪೂರ್ಣ ಸಹಕಾರ ನೀಡುತ್ತಾರೆ ಎಂದು ತಿಳಿಸಿದರು ಲಕ್ಷ್ಮೀ ಹೆಬ್ಬಾಳ್ಕರ್‌.

ಎಲ್ಲಿಯೂ ನೂಕುನುಗ್ಗಲು ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ತಂತ್ರ ಮಾಡಿದ್ದೇವೆ ಎಂದು ಹೆಬ್ಬಾಳ್ಕರ್‌ ಹೇಳಿದರು.

ಆಗಸ್ಟ್‌ನಿಂದಲೇ ಯಜಮಾನಿ ಖಾತೆಗೆ ಹಣ

ಗೃಹ ಲಕ್ಷ್ಮಿ ಯೋಜನೆಗೆ ಈ ವರ್ಷ 17,500 ಕೋಟಿ ರೂ. ಖರ್ಚು ಬರುತ್ತೆ. ಮುಂದಿನ ವರ್ಷದಿಂದ 30 ಸಾವಿರ ಮೇಲ್ಪಟ್ಟು ಖರ್ಚು ಆಗುತ್ತದೆ ಎಂದು ತಿಳಿಸಿದ ಅವರು, ಆಗಸ್ಟ್ ತಿಂಗಳಲ್ಲಿ ಫಲಾನುಭವಿಗಳ ಅಕೌಂಟ್ ಗೆ ಹಣ ಬರುತ್ತದೆ ಎಂದರು.

ಈ ಯೋಜನೆ ಜಾರಿಗೆ ಬರುವ ಸಂದರ್ಭದಲ್ಲಿ ನಾನು ಸಚಿವೆಯಾಗಿರುವುದು ನನಗೆ ಖುಷಿ ಇದೆ ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್‌, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.

Exit mobile version