Site icon Vistara News

Gruha Lakshmi Scheme: ಆ.30ಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಮೈಸೂರಿನಲ್ಲಿ ಕಾರ್ಯಕ್ರಮದ ಸಿದ್ಧತೆ ವೀಕ್ಷಿಸಿದ ಡಿಕೆಶಿ‌, ಹೆಬ್ಬಾಳ್ಕರ್

DK Shivakumar in Mysore

ಮೈಸೂರು: ನಗರದಲ್ಲಿ ಆಗಸ್ಟ್ 30 ರಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಚಾಲನೆ ನೀಡಲಾಗುತ್ತದೆ. ಹೀಗಾಗಿ ಸಮಾರಂಭ ನಡೆಯಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೋಮವಾರ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಾರಂಭದ ಸಿದ್ಧತೆ ಬಗ್ಗೆ ಬೃಹತ್ ವೇದಿಕೆ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ‌, ಹಿರಿಯ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಬೃಹತ್‌ ವೇದಿಕೆ, 1 ಲಕ್ಷ ಮಂದಿಗೆ ಆಸನ ವ್ಯವಸ್ಥೆ

Laxmi Hebbalkar in Mysore

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 80 ಅಡಿ ಉದ್ದ, 60 ಅಡಿ ಅಗಲ, 8 ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ವೇದಿಕೆ ಹಿಂಭಾಗ 140 ಅಡಿ ಉದ್ದದ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗುತ್ತಿದೆ. ವಿಐಪಿ, ವಿವಿಐಪಿಗಳಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ ಮಾಡುತ್ತಿದ್ದು, ಮೈದಾನದಲ್ಲಿ ವಾಟರ್ ಪ್ರೂಫ್ ಜರ್ಮನ್ ಟೆಂಟ್ ಅಳವಡಿಕೆ ಮಾಡಲಾಗಿದೆ. 500ಕ್ಕೂ ಹೆಚ್ಚು ಕಾರ್ಮಿಕರು ಹಗಲು ರಾತ್ರಿ ವೇದಿಕೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ | Karnataka Politics: ಪ್ರಾದೇಶಿಕ ಪಕ್ಷ ಉಳಿಸುವುದೇ ನಮ್ಮ ಗುರಿ: ಎಚ್‌.ಡಿ.ದೇವೇಗೌಡ

ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ ಸುಸಜ್ಜಿತ ತಾತ್ಕಾಲಿಕ ಶೌಚ ಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ಮುಂಭಾಗ 1 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಸುತ್ತಮುತ್ತ ಕಾಂಗ್ರೆಸ್ ನಾಯಕರ ಫ್ಲೆಕ್ಸ್, ಬಂಟಿಂಗ್ಸ್ ರಾರಾಜಿಸುತ್ತಿವೆ. ಇನ್ನು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

Laxmi Hebbalkar in Mysore

ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದ ಲಕ್ಷ್ಮಿ ಹೆಬ್ಬಾಳ್ಕರ್

ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಅತ್ಯಂತ ಮಹತ್ವದ ಗ್ಯಾರಂಟಿ ಎಂದರೇ ಗೃಹಲಕ್ಷ್ಮಿ ಯೋಜನೆಯಾಗಿದೆ. ಇದು ಸಿಎಂ ಸಿದ್ದರಾಮಯ್ಯ ಅವರ ಕನಸು. ಮಹಿಳೆಯನ್ನು ಸಾಮಾಜಿಕ, ಆರ್ಥಿಕವಾಗಿ ಸಬಲೀಕರಣ ಮಾಡಬೇಕಿದೆ. ಸಿಎಂ ಕನಸನ್ನು ನನಸು ಮಾಡುವ ಕಾರ್ಯಕ್ರಮ ಇದಾಗಿದೆ. ಐದು ಜಿಲ್ಲೆಯ ಫಲಾನುಭವಿಗಳಿಗೆ ಆಮಂತ್ರಣ ನೀಡಿದ್ದೇವೆ. ನಾವು ನುಡಿದಂತೆ ನಡೆಯುತ್ತಿದ್ದು, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ನಾಲ್ಕು ಯೋಜನೆ ಜಾರಿ‌ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದರು.

Laxmi Hebbalkar in Mysore

ಇದನ್ನೂ ಓದಿ | ‌Yathindra siddaramaiah : ಪುತ್ರನಿಗೆ ರಾಜಕೀಯ ಆಶ್ರಯ ನೀಡಿದ ಸಿದ್ದರಾಮಯ್ಯ; ಎರಡು ಹುದ್ದೆಗೆ ಯತೀಂದ್ರ ನೇಮಕ

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಬಿಪಿಎಲ್ ಕಾರ್ಡ್‌ಗಳನ್ನು ನಾವು ಎಲ್ಲೂ ಕ್ಯಾನ್ಸಲ್ ಮಾಡಿಲ್ಲ. ಮಾಹಿತಿ ಇದ್ದರೆ ದಾಖಲೆ ಕೊಡಿ, ನಾವು ಸರಿ ಮಾಡುತ್ತೇವೆ. ಉಳಿದ ಬಿಪಿಎಲ್ ಅರ್ಜಿದಾರರು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುತ್ತೇವೆ. ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಮತ್ತಿತರರು ಬರುತ್ತಾರೆ. ರಾಜ್ಯದಲ್ಲಿ 1.53 ಕೋಟಿ ಕುಟುಂಬಗಳು ಇವೆ. ಇದರಲ್ಲಿ 1. 28 ಕೋಟಿ ಅರ್ಹ ಫಲಾನುಭವಿಗಳು ಇದ್ದಾರೆ. ಈ ಪೈಕಿ 1.11 ಕೋಟಿ ಫಲಾನುಭವಿಗಳು ಯೋಜನೆಗೆ ನೋಂದಣಿ ಮಾಡಿಸಿದ್ದಾರೆ. ಅವರ ಖಾತೆಗಳಿಗೆ ಯೋಜನೆಗೆ ಚಾಲನೆ ನೀಡುವ ದಿನವೇ 2000 ರೂ. ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದರು.

Exit mobile version