ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧೆಡೆ ರಾಜಕೀಯ ಪಕ್ಷಗಳಿಂದ ವೋಟಿಗಾಗಿ ಮತದಾರರಿಗೆ ಉಡುಗೊರೆಗಳನ್ನು ನೀಡಿ ಆಮಿಷ ಒಡ್ಡಲಾಗುತ್ತಿದೆ. ಈ ನಡುವೆ ನಗರದ ಪ್ರತಿಷ್ಠಿತ ಖಾಸಗಿ ಶಾಲೆ ಮೇಲೆ ಜಿಎಸ್‌ಟಿ ಅಧಿಕಾರಿಗಳು (GST Raid) ದಾಳಿ ನಡೆಸಿ, ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಕುಕ್ಕರ್, ಗಡಿಯಾರ ಹಾಗೂ ಪಾತ್ರೆಗಳನ್ನು ಜಪ್ತಿ ಮಾಡಿದ್ದಾರೆ. ವಶಕ್ಕೆ ಪಡೆದಿರುವ ವಸ್ತುಗಳು ಬ್ಯಾಟರಾಯನಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನೇಂದ್ರ ಕುಮಾರ್‌ಗೆ ಸೇರಿದವು ಎನ್ನಲಾಗಿದೆ.
ಯಲಹಂಕ ಸಮೀಪದ ವಿದ್ಯಾಶಿಲ್ಪ ಶಾಲೆಯ ಮೇಲೆ ದಾಳಿ ಮಾಡಿರುವ ಜಿಎಸ್‌ಟಿ ಅಧಿಕಾರಿಗಳು, ಶಾಲೆಯಲ್ಲಿ ದಾಸ್ತಾನು ಮಾಡಿದ್ದ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಕುಕ್ಕರ್‌ಗಳು, ವಿವಿಧ ಬ್ರ್ಯಾಂಡೆಡ್ ವಾಚ್‌ಗಳು ಹಾಗೂ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಜಿಎಸ್‌ಟಿ ಅಧಿಕಾರಿಗಳು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಲ್ಲಿ ನೀತಿ ಸಂಹಿತೆ ಜಾರಿಯಾಗುತ್ತದೆ. ಹೀಗಾಗಿ ಮತದಾರರನ್ನು ತಮ್ಮತ್ತ ಓಲೈಸಿಕೊಳ್ಳಲು ಅಭ್ಯರ್ಥಿಗಳು ಭಾರಿ ಪ್ರಮಾಣದಲ್ಲಿ ಉಡುಗೊರೆಗಳನ್ನು ನೀಡುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಆದ್ದರಿಂದ ಪೊಲೀಸರು ಹಾಗೂ ಜಿಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಮತದಾರರಿಗೆ ಹಂಚಲು ಶೇಖರಿಸಿದ್ದ ರೇಷನ್ ಕಿಟ್ ಜಪ್ತಿ
ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ನೀಡಲು ಶೇಖರಿಸಿದ್ದ ರೇಷನ್ ಕಿಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಟಾಟಾ ಏಸ್ ನಲ್ಲಿ ರೇಷನ್ ಕಿಟ್ ಶೇಖರಿಸಿ ವಿತರಣೆ. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಹೆಗಡೆ ನಗರದಲ್ಲಿ ವಿತರಣೆ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಸಾದಿಕ್ ಎಂಬ ಟಾಟ ಏಸ್ ಚಾಲಕನನ್ನು ವಶಕ್ಕೆ ಪಡೆದು, ಪಡಿತರ ಕಿಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿಗಳಿಗೆ ದೂರು ನೀಡಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ | Bajarang dal attack : ಹೋಳಿ ಸಂಭ್ರಮದ ಡಿಜೆ ಪಾರ್ಟಿಗೆ ಬಜರಂಗ ದಳ ದಾಳಿ; ಅಶ್ಲೀಲ ವರ್ತನೆ ಆರೋಪ
ಅದೇ ರೀತಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳ ವಿದ್ಯಾಮಂದಿರ ಶಾಲೆಯ ಮೇಲೆಯೂ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಉಡುಗೊರೆ ಶೇಖರಿಸಿ ಇಟ್ಟಿರುವ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಶಾಲೆಯಲ್ಲಿ ಏನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ವಾಪಸ್ ಹೊರಡಿದ್ದಾರೆ.
ಲಕ್ಷಾಂತರ ರೂಪಾಯಿ ಮೌಲ್ಯದ ಪಾತ್ರೆಗಳು ಹಾಗೂ ಸ್ಟೀಲ್ ಬಾಕ್ಸ್ ವಶಕ್ಕೆ
ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡಿನಲ್ಲಿ ಪೊಲೀಸರು ದಾಳಿ ನಡೆಸಿ, ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಪಾತ್ರೆಗಳು ಹಾಗೂ ಸ್ಟೀಲ್ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿಯಾಗಿರುವ ವಸ್ತುಗಳು ಬಿಜೆಪಿ ಜಿಲ್ಲಾಧ್ಯಕ್ಷ ಬೇಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹುಲ್ಲಹಳ್ಳಿ ಸುರೇಶ್‌ಗೆ ಸೇರಿದವು ಎನ್ನಲಾಗಿದೆ.
ಎಚ್.ಕೆ.ಸುರೇಶ್ ಅವರು ಭಾನುವಾರದಿಂದ ಎರಡು ದಿನ ಹಳೆಬೀಡಿನಲ್ಲಿ ಮಹಾ ರುದ್ರಯಾಗ ಮತ್ತು ಗಿರಿಜಾ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರುವ ಮಹಿಳೆಯರಿಗೆ ಉಡುಗೊರೆಯಾಗಿ ವಿತರಣೆ ಮಾಡಲು ಸ್ಡೀಲ್ ಪಾತ್ರೆ ಸಂಗ್ರಹ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಾರ್ಯಕ್ರಮ ನಡೆಯುವ ಕಲ್ಯಾಣ ಮಂಟಪದ ಹಿಂಬದಿಯ ಗೋದಾಮಿನಲ್ಲಿ ಪಾತ್ರೆ ಸಂಗ್ರಹ ಮಾಡಿದ್ದ ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಮಮತಾ ಮತ್ತು ಹಳೆಬೀಡು ಇನ್ಸ್‌ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿ, ಸ್ಟೀಲ್ ಪಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿವೇಳೆ ಪಾತ್ರೆಗಳ ಜೊತೆಗೆ ಸುರೇಶ್ ಭಾವಚಿತ್ರಗಳಿರೊ ಸ್ಟಿಕ್ಕರ್ ಪತ್ತೆ
60 ಲಕ್ಷ ರೂಪಾಯಿ ಮೌಲ್ಯದ ಒಟ್ಟು 6798 ಇಸ್ತ್ರಿ ಪೆಟ್ಟಿಗೆಗಳ ಜಪ್ತಿ
ಬಾಗಲಕೋಟೆ: ಅಕ್ರಮವಾಗಿ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಮೇಲೆ ಪೊಲೀಸರು ದಾಳಿ ನಡೆಸಿ, ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಒಟ್ಟು 6798 ಇಸ್ತ್ರಿ ಪೆಟ್ಟಿಗೆಗಳನ್ನು ವಾಹನ ಸಮೇತ ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ನಗರದ ಹೊರವಲಯದ ಮಹಾರುದ್ರಪ್ಪನ ಹಳ್ಳದ ಬಳಿ ಎಸ್.ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.