ಬೆಂಗಳೂರು: ದಿನ ಬಳಕೆಯ ಕೆಲವು ಉತ್ಪನ್ನಗಳಿಗೆ ಜಿಎಸ್‌ಟಿ ವಿನಾಯಿತಿ (GST rate hike) ರದ್ದುಪಡಿಸಿದ ಪರಿಣಾಮ ನಾಳೆಯಿಂದ (ಜು.೧೮) ನಂದಿನಿ ಮೊಸರು, ನಂದಿನಿ ಮಸಾಲ ಮಜ್ಜಿಗೆ ಮತ್ತು ನಂದಿನಿ ಸ್ವೀಟ್ ಲಸ್ಸಿಗಳ ದರದಲ್ಲಿ ಹೆಚ್ಚಳವಾಗಲಿದೆ. ಈ ಬಗ್ಗೆ ಕೆಎಂಎಫ್ ಪ್ರಕಟಣೆ ಹೊರಡಿಸಿದ್ದು, ನಂದಿನಿ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಇನ್ನು ಮುಂದೆ ೨೦೦ ಗ್ರಾಂ ಮೊಸರಿನ ಬೆಲೆ ೨ ರೂ ಹೆಚ್ಚಲಿದ್ದು, ೧೨ ರೂ.ಗಳಾಗಲಿವೆ. ೫೦೦ಗ್ರಾಂ ಮೊಸರಿನ ಬೆಲೆ ೨೨ರಿಂದ ೨೪ ರೂ.ಗಳಿಗೆ ಏರಲಿದೆ. ಒಂದು ಕೇಜಿ ಮೊಸರಿನ ಬೆಲೆ ೪೩ ರಿಂದ ೪೬ಕ್ಕೆ ಏರಿಕೆಯಾಗಲಿದೆ.
ನಂದಿನಿ ಮಸಾಲ ಮಜ್ಜಿಗೆ ಚಿಕ್ಕ ಪ್ಯಾಕ್ (೨೦೦ಗ್ರಾಂ)ನ ಬೆಲೆ ೭ರಿಂದ ೮ ರೂ.ಗಳಾದರೆ, ನಂದಿನಿ ಸ್ವೀಟ್ ಲಸ್ಸಿಯ ಬೆಲೆಯು (೨೦೦ಗ್ರಾಂ) ೧೦ರಿಂದ೧೧ರೂ.ಗೆ ಏರಲಿದೆ. ಈ ಸಂಬಂಧ ಕೆಎಂಎಫ್ ಶನಿವಾರ ಅಧಿಕೃತ ಆದೇಶ ಹೊರಡಿಸಿದ್ದು, ಜು.೧೮ರ ಸೋಮವಾರದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಇದುವರೆಗೆ ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದ್ದ ಪ್ಯಾಕ್ಡ್ ಆಹಾರ ಉತ್ಪನ್ನಗಳು ಈಗ ತೆರಿಗೆ ವ್ಯಾಪ್ತಿಗೆ ಒಳಪಡುವುದರಿಂದ ಮೊಸರು, ಮಜ್ಜಿಗೆ ದರಗಳಲ್ಲಿ ಹೆಚ್ಚಳವಾಗಿದೆ. ಇತ್ತೀಚೆಗೆ ಚಂಡೀಗಢದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿತ್ಯೋಪಯೋಗಿ ವಸ್ತುಗಳ ಮೇಲೆ ನೀಡಲಾಗಿದ್ದ ಜಿಎಸ್‌ಟಿ ವಿನಾಯಿತಿಯನ್ನು ರದ್ದುಪಡಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಈಗ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವ ಹಾಲು, ಮಜ್ಜಿಗೆ, ಮೊಸರು, ಲಸ್ಸಿ ಇತ್ಯಾದಿಗಳ ಮೇಲೆ ೫% ಜಿಎಸ್‌ಟಿ ಅನ್ವಯವಾಗುತ್ತಿದೆ. ಈ ಹೊರೆಯನ್ನು ಕೆಎಂಎಫ್ ಗ್ರಾಹಕರ ಮೇಲೆ ವರ್ಗಾಯಿಸುತ್ತಿದೆ. ಇದರ ಪರಿಣಾಮ ಗ್ರಾಹಕರ ಜೇಬಿಗೆ ಈ ಉತ್ಪನ್ನಗಳು ಭಾರವಾಗಲಿವೆ.
ಜಿಎಸ್‌ಟಿ ದರ ಹೆಚ್ಚಳವು ಕೆಎಂಎಫ್‌ಗೆ ಹೊರೆಯಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಕೆಲ ಉತ್ಪನ್ನಗಳ ಮೇಲಿನ ಬೆಲೆಯನ್ನು ೨-೩ರೂ.ಗಳಷ್ಟು ಮಾತ್ರ ಹೆಚ್ಚಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಹಾಲು ಒಕ್ಕೂಟಗಳಿಗೆ ತೀವ್ರವಾದ ಹೊಡೆತ ಬೀಳುತ್ತಿದ್ದು, ಪರಿಸ್ಥಿತಿಯನ್ನು ಎದುರಿಸಲು ಬೆಲೆ ಹೆಚ್ಚಳವು ಅನಿವಾರ್ಯವಾಗಿದೆ ಎಂದು ಕೆಎಂಎಫ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಜಿಎಸ್‌ಟಿ ವಿನಾಯಿತಿ ರದ್ದಿನಿಂದ ಪ್ರಿ-ಪ್ಯೇಕೇಜ್ಡ್ ಮತ್ತು ಪ್ರಿ-ಲೇಬಲ್ಡ್ ಉತ್ಪನ್ನಗಳು ದುಬಾರಿಯಾಗಲಿವೆ. ಪ್ಯಾಕ್‌ಗಳಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಪನೀರ್, ಹಾಲು, ಮೊಸರು, ಲಸ್ಸಿ, ಮಜ್ಜಿಗೆ, ಜೇನುತುಪ್ಪ, ಮೀನು ಮತ್ತು ಮಾಂಸ, ಬಾರ್ಲಿ, ಓಟ್ಸ್, ಅಕ್ಕಿ- ಜೋಳದ ಹಿಟ್ಟು, ಬೆಲ್ಲ, ಮಂಡಕ್ಕಿಯ ಬೆಲೆ ಕೂಡ ಹೆಚ್ಚಲಿದೆ.
ಇದನ್ನೂ ಓದಿ| GST rate hike| ಜುಲೈ 18ರಿಂದ ಹಾಲು, ಮೊಸರು, ಅಕ್ಕಿ, ಹೋಟೆಲ್ ರೂಮ್, ಆಸ್ಪತ್ರೆ ವೆಚ್ಚ ಏರಿಕೆ