ಬೆಂಗಳೂರು: ನಿತ್ಯ ಬಳಕೆಯ ಕೆಲವು ಉತ್ಪನ್ನಗಳಿಗೆ ಜಿಎಸ್‌ಟಿ ವಿನಾಯಿತಿ (GST rate hike) ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಜು. 18ರಿಂದ ಕೆಲ ದಿನ ಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದ್ದು, ಜನಸಾಮಾನ್ಯರು ಪ್ರತಿ ದಿನ ಬಳಸುತ್ತಿರುವ ನಂದಿನಿ ಹಾಲಿನ ದರದಲ್ಲೂ ಹೆಚ್ಚಳವಾಗಲಿದೆ. ಹೀಗಾಗಿ ಪ್ರತಿ ಲೀಟರ್ ಹಾಲಿಗೆ 2-4 ರೂಪಾಯಿವರೆಗೆ ಬೆಲೆ ಏರಿಲಿದೆ ಎಂದು ಅಂದಾಜಿಸಲಾಗಿದೆ.
ಇದುವರೆಗೆ ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದ್ದ ಪ್ಯಾಕ್ಡ್ ಆಹಾರ ಉತ್ಪನ್ನಗಳು ಈಗ ತೆರಿಗೆ ವ್ಯಾಪ್ತಿಗೆ ಒಳಪಡುವುದರಿಂದ ಹಾಲು, ಮೊಸರು, ಮಜ್ಜಿಗೆ, ಅಕ್ಕಿ, ರಾಗಿ, ಗೋಧಿಯ ದರಗಳು ಹೆಚ್ಚಳವಾಗಲಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಹುಪಾಲು ಮಂದಿ ಬಳಕೆ ಮಾಡುವ ನಂದಿನ ಹಾಲಿನ ದರದಲ್ಲೂ ವ್ಯತ್ಯಯವಾಗಲಿದ್ದು, ಹಾಲು ನಾಗರಿಕರ ಬಾಯನ್ನು ಸುಡಲಿದೆ.
ತೆರಿಗೆ ವಿಧಿಸಿರುವುದರಿಂದ ಈ ಎಲ್ಲ ವಸ್ತುಗಳ ಮೇಲೆ ಶೇ.5 ಜಿಎಸ್‌ಟಿ ಅನ್ವಯವಾಗಲಿದೆ. ಈ ಹೊರೆಯನ್ನು ಕಂಪನಿಗಳು ಗ್ರಾಹಕರ ಮೇಲೆ ವರ್ಗಾಯಿಸುವುದರಿಂದ ಗ್ರಾಹಕರ ಜೇಬಿಗೆ ಹೊರೆಯಾಗಲಿದೆ. ಪ್ರಮುಖವಾಗಿ ಕೆಎಂಎಫ್ ಉತ್ಪನ್ನಗಳಾದ ನಂದಿನಿ ಹಾಲು, ಮೊಸರು, ಮಜ್ಜಿಗೆಯನ್ನು ಪ್ಯಾಕೇಟ್‌ಗಳಲ್ಲಿ ವಿತರಿಸುವುದರಿಂದ ಅವುಗಳ ಮೇಲೆ ಕೂಡ ಜಿಎಸ್‌ಟಿ ಅನ್ವಯವಾಗಲಿದೆ. ಹೀಗಾಗಿ ಈ ಉತ್ಪನ್ನಗಳ ದರ ಏರಿಕೆಯಾಗುವ ನಿರೀಕ್ಷೆ ಇದ್ದು, ಕೆಎಂಎಫ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಯಾವೆಲ್ಲ ಪದಾರ್ಥಗಳ ಬೆಲೆ ಏರಿಕೆ?
- ಹಾಲು, ಮೊಸರು, ಲಸ್ಸಿ, ಮಜ್ಜಿಗೆ, ಪನೀರ್, ಬೆಣ್ಣೆ, ಜೇನುತುಪ್ಪ
- ಒಣಗಿದ ದ್ವಿದಳ ಧಾನ್ಯಗಳು, ಒಣಗಿದ ಮಖಾನಾ, ಗೋಧಿ ಮತ್ತು ಇತರೆ ಧಾನ್ಯ
- ಲೇಬಲ್ಡ್ ಮಾಂಸ, ಮೀನು
- ಬೆಲ್ಲ, ಮಂಡಕ್ಕಿ, ಸಾವಯವ ಗೊಬ್ಬರ, ತೆಂಗಿನನಾರಿನ ಕಾಂಪೋಸ್ಟ್
- ಎಲ್ಇಡಿ ಲೈಟ್, ಎಲ್ಇಡಿ ಲ್ಯಾಂಪ್ (ಜಿಎಸ್‌ಟಿ ಶೇ.12ರಿಂದ ಶೇ.18ಕ್ಕೆ ಏರಿಕೆ)
- ಬ್ಲೇಡ್ಗಳನ್ನು ಹೊಂದಿರುವ ಕತ್ತರಿ, ಪೇಪರ್ ಚಾಕು, ಪೆನ್ಸಿಲ್ ಶಾರ್ಪ್ನರ್, ಬ್ಲೇಡ್, ಚಮಚ, ಫೋರ್ಕ್, ಏಣಿ,
- ರೂಪಾಯಿ 1000 ಒಳಗಿನ ಬಾಡಿಗೆಯ ಹೋಟೆಲ್ ಕೊಠಟಿಗಳ ಮೇಲೆ ಶೇ.12ರಷ್ಟು ತೆರಿಗೆ
- ನೀರು ಎತ್ತುವ ಪಂಪ್, ಟರ್ಬೈನ್ ಪಂಪ್, ಸಬ್ಮರ್ಸಿಬಲ್ ಪಂಪ್, ಬೈಸಿಕಲ್ ಪಂಪ್
- ಗಿರಣಿ ಯಂತ್ರೋಪಕರಣಗಳ ಮೇಲೆ ಶೇ. 18ರಷ್ಟು ಜಿಎಸ್‌ಟಿ
ಇದನ್ನೂ ಓದಿ | ಆಹಾರ ಧಾನ್ಯಗಳ ಮೇಲೆ ಜಿಎಸ್‌ಟಿ ಹೊರೆ ವಿರುದ್ಧ ಗುಡುಗಿದ ಗಿರಣಿದಾರರು