Site icon Vistara News

Congress Guarantee: ಸಿಎಂ ಸಿದ್ದರಾಮಯ್ಯ ತವರಲ್ಲೇ ಸಿಗದ ಗ್ಯಾರಂಟಿ ಯೋಜನೆಗಳು; ಸ್ಲಂ ನಿವಾಸಿಗಳ ಪರದಾಟ

Mysore people

ಮೈಸೂರು: ಜನರ ಜೀವನ ಮಟ್ಟ ಸುಧಾರಣೆ ಮಾಡಲು 5 ಗ್ಯಾರಂಟಿ ಯೋಜನೆಗಳನ್ನು (Congress Guarantee) ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರಿ ಯೋಜನೆಗಳು ಕೆಲ ಪ್ರದೇಶಗಳಲ್ಲಿ ಬಡವರಿಗೆ ಮರೀಚಿಕೆಯಾಗಿವೆ. ಯೋಜನೆಗಳು ಜಾರಿಯಾಗಿ ಹಲವು ತಿಂಗಳುಗಳೇ ಕಳೆದರೂ ಇಂದಿಗೂ ನೂರಾರು ಕುಟುಂಬಗಳು ಸೌಲಭ್ಯ ವಂಚಿತವಾಗಿರುವುದು ನಗರದಲ್ಲಿ ಕಂಡುಬಂದಿದೆ.

ಹೌದು, ನಗರದ ಎಲ್ಲಮ್ಮ ಬಡಾವಣೆಯ ಹಲವು ಕುಟುಂಬಗಳು ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದ ವಂಚಿತವಾಗಿವೆ. ಸುಮಾರು 15-20 ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದರೂ ಕೆಲವರಿಗೆ ಆಧಾರ್‌, ರೇಷನ್ ಕಾರ್ಡ್ ಸಿಕ್ಕಿಲ್ಲ. ಇದರಿಂದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ತೊಂದರೆಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಎಂ ತವರಲ್ಲೇ ಬಡವರು ಸಮಸ್ಯೆ ಎದುರಿಸುವಂತಾಗಿದೆ.

ಉಳ್ಳವರಿಗೆ ಮಾತ್ರ ಸರ್ಕಾರದ ಯೋಜನೆಗಳು ಅನುಕೂಲವಾಗುತ್ತಿದ್ದು, ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ನಿರೀಕ್ಷೆಯಾಗಿಯೇ ಉಳಿದಿವೆ. ಜನಪ್ರತಿನಿಧಿಗಳು ವೋಟಿಗಾಗಿ ಮತದಾರರ ಗುರುತಿನ ಚೀಟಿ ಮಾಡಿಸಿಕೊಟ್ಟಿದ್ದಾರೆ. ಆದರೆ ಅಕ್ಕಿ, ಗೋಧಿ ಪಡೆಯಲು ಶಾಸಕ ತನ್ವೀರ್ ಸೇಠ್ ಅವರು ರೇಷನ್ ಕಾರ್ಡ್ ಮಾಡಿಸಿಕೊಟ್ಟಿಲ್ಲ, ಇದರಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಸ್ಲಮ್ ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | TN Seetharam: ನನ್ನ ರಾಜಕೀಯ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿ ಕಾರಣ: ಸಿಎಂ ಸಿದ್ದರಾಮಯ್ಯ

ಎಲ್ಲಮ್ಮ ಬಡಾವಣೆಯ ಕೆಲವರಿಗೆ ಆಧಾರ್, ರೇಷನ್ ಕಾರ್ಡ್ ಇಲ್ಲ. ರೇಷನ್ ಕಾರ್ಡ್ ಇಲ್ಲದ ಪರಿಣಾಮ ಇತ್ತ ಶಾಲೆಯಲ್ಲಿ ಸ್ಕಾಲರ್‌ಶಿಪ್ ಪಡೆಯಲೂ ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ಅನ್ನಭಾಗ್ಯ, ಗೃಹ ಲಕ್ಷ್ಮಿ ಯೋಜನೆ ಸೇರಿ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಕೊಡಿಸುವಲ್ಲಿ ಮೈಸೂರು ಜಿಲ್ಲಾಡಳಿತ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ


Exit mobile version