ತುಮಕೂರು: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಗ್ರಾಮಸ್ಥರ ಮುತ್ತಿಗೆಗೆ ಹೆದರಿ ಬೈಕ್‌ನಲ್ಲಿ ಕಾಲ್ಕಿತ್ತ ಘಟನೆ ಮಂಗಳವಾರ ನಡೆದಿದೆ.
ಮೂಲತಃ ಜೆಡಿಎಸ್ ಶಾಸಕರಾಗಿದ್ದು, ಈಗ ಕಾಂಗ್ರೆಸ್ ಪಾಳಯ ಸೇರಲು ಸಜ್ಜಾಗಿರುವ ಶ್ರೀನಿವಾಸ್ ಅವರು ಗುಬ್ಬಿ ತಾಲ್ಲೂಕಿನ ಯಕ್ಕಲಕಟ್ಟೆ ಗ್ರಾಮದ ಮೂಲಕ ಸಾಗುತ್ತಿದ್ದರು. ಈ ವೇಳೆ ಗ್ರಾಮಸ್ಥರು ಕಾರನ್ನು ಅಡ್ಡಗಟ್ಟಿ ಮುತ್ತಿಗೆ ಹಾಕಿದ್ದಾರೆ.
ಶಾಸಕರ ಕಾರು ಬರುತ್ತಿದ್ದಂತೆಯೇ ಅಡ್ಡಗಟ್ಟಿದ ಗ್ರಾಮಸ್ಥರು ಮೊದಲು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಈ ನಡುವೆ ಕೆಲವರು ಗ್ರಾಮದ ಸಮಸ್ಯೆಗಳನ್ನು ಹೇಳಿಕೊಳ್ಳಲು ಆರಂಭ ಮಾಡಿದರು. ಇನ್ನು ಕೆಲವು ಮಹಿಳೆಯರಂತೂ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ ಎಂದು ದೂರಲು ಶುರು ಮಾಡಿದರು.
ಆರಂಭದಲ್ಲಿ ಖುಷಿಯಾದ ಶ್ರೀನಿವಾಸ್ ಅವರಿಗೆ ಬಳಿಕ ಗ್ರಾಮಸ್ಥರ ಈ ಸ್ವಾಗತದ ಹಿಂದಿನ ಕಥೆ ಅರಿವಾಯಿತು. ಅವರು ಕೂಡಲೇ ಮಹಿಳೆಯರ ಕೈಯಲ್ಲಿದ್ದ ಹೂವಿನ ಹಾರ ಎಳೆದು ಸ್ಥಳದಿಂದ ಕಾಲ್ಕಿತ್ತರು. ಕಾರಿನಲ್ಲಿ ಬಂದಿದ್ದ ಶ್ರೀನಿವಾಸ್ ಅವರು ಸ್ಥಳೀಯರ ಬೈಕ್ ಏರಿ ಅಲ್ಲಿಂದ ತೆರಳಿದರು. ಅದರ ಹಿಂದೆ ಅವರ ಕಾರು ಕೂಡಾ ಸಾಗಿತು.
ಇದನ್ನೂ ಓದಿ| ಗ್ರಾಪಂನಲ್ಲಿ ನಿಂತು ಗೆಲ್ಲೋ ಯೋಗ್ಯತೆ ಎಂಎಲ್‌ಸಿ ಶರವಣಗೆ ಇಲ್ಲ: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್