ಬೆಂಗಳೂರು: ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶವು (Gujarat Election Results) ಗುರುವಾರ ಪ್ರಕಟಗೊಂಡಿದೆ. ಗುಜರಾತ್‌ನಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲವು ಸಾಧಿಸಿದೆ. ಇದರಿಂದ ಸಂತಸಗೊಂಡಿರುವ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ಸಂಭ್ರಮಾಚರಣೆ ಮಾಡುತ್ತಿದ್ದು, ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಕುಣಿದು ಕುಪ್ಪಳಿಸಿದ್ದಾರೆ.
ಕೈಯಲ್ಲಿ ಕಮಲ ಹಿಡಿದ ಕಾರ್ಯಕರ್ತರು
ಹುಬ್ಬಳ್ಳಿಯ ದೇಶಪಾಂಡೆ ನಗರದ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರ ವಿಜಯೋತ್ಸವ ಜೋರಾಗಿತ್ತು. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿದರು. ಕಮಲದ ಹೂವು ಹಿಡಿದು ಜಯಘೋಷಣೆ ಕೂಗಿದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮುಖಂಡರಾದ ಮಲ್ಲಿಕಾರ್ಜುನ್ ಸಾಹುಕಾರ್, ನಾಗರಾಜ್ ಕಲ್ಬುರ್ಗಿ, ಸಂತೋಷ್ ಚವ್ಹಾಣ, ಉಮಾ ಮುಕುಂದ್, ರೂಪಾ ಶೆಟ್ಟಿ, ವಿಜಯಲಕ್ಷ್ಮೀ ತಿಮ್ಮೊಳ್ಳಿ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಗಣೇಶನಿಗೆ ವಿಶೇಷ ಪೂಜೆ ಸಲ್ಲಿಕೆ
ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆಗೆ ಪಾರವೇ ಇರಲಿಲ್ಲ. ಗುಜರಾತಿನ ಅಭೂತಪೂರ್ವ ಗೆಲುವಿನ ಹಿನ್ನೆಲೆ ಬೆಳಗಾವಿ ಚೆನ್ನಮ್ಮ ವೃತ್ತದ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಸಿಎಂ ತವರು ಜಿಲ್ಲೆಯಲ್ಲಿಯೂ ಸಂಭ್ರಮ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಇಮ್ಮಡಿಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಪರ ಘೋಷಣೆ ಕೂಗಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ನೇತೃತ್ವದಲ್ಲಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಂಭ್ರಮಿಸಿದರು.
ಪಟಾಕಿ ಸಿಡಿಸಿ ಸಂಭ್ರಮ
ಶಿವಮೊಗ್ಗದ ಸೊರಬ ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಇತ್ತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋರ್ಟ್ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ ನೇರಲಿ ನೇತೃತ್ವದಲ್ಲಿ ವಿಜಯೋತ್ಸವ ಜೋರಾಗಿತ್ತು.
ಇನ್ನು ಶಿಕಾರಿಪುರದಲ್ಲಿ ಕಾರ್ಯಕರ್ತರೊಂದಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಭ್ರಮಿಸಿದರು. ಬಿಜೆಪಿ ಕಚೇರಿಯಲ್ಲಿ ಸಿಹಿ ಹಂಚಿ ಖುಷಿ ವ್ಯಕ್ತಪಡಿಸಲಾಯಿತು. ಬಳಿಕ ಕಾರ್ಯಕರ್ತರು ಪಟಾಕಿ ಸಿಡಿಸಿದರು.
ಕೋಲಾರದಲ್ಲಿಯೂ ವಿಜಯೋತ್ಸವ
ಕೋಲಾರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಜೋರಾಗಿತ್ತು. ನಗರದ ಡೂಮ್ ಲೈಟ್ ಸರ್ಕಲ್ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜತಗೆ ಜಯಕಾರ ಹಾಕುವ ಮೂಲಕ ಸಂಭ್ರಮಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ರಾಜಕೀಯ ನಡೆಯಿಂದ ಈ ಗೆಲುವು ಸಂದಿದೆ. ಅದೇ ಮಾದರಿಯಲ್ಲಿ ಕೋಲಾರ ಸೇರಿದಂತೆ ರಾಜ್ಯದ ೨೨೪ ಕ್ಷೇತ್ರದಲ್ಲಿ ಮುಂದಿನ ೨೦೨೩ರ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಈ ಫಲಿತಾಂಶ ಸ್ಫೂರ್ತಿ ಆಗಲಿದೆ ಎಂದು ಮುಖಂಡರು ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು.
ವಿಜಯಪುರ, ಕೊಪ್ಪಳದಲ್ಲಿ ಸಂಭ್ರಮಾಚರಣೆ
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆ ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಸಂಭ್ರಮಾಚರಣೆ ನಡೆಯಿತು. ನಗರದ ಸಿದ್ದೇಶ್ವರ ದೇವಸ್ಥಾನದ ಎದುರು ಗೆಲುವಿನ ಸಂಭ್ರಮವನ್ನು ಆಚರಿಸಿದ ಕಾರ್ಯಕರ್ತರು, ಪ್ರಧಾನಿ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಗೆದ್ದಿದೆ. ಇದು ಪ್ರತಿಯೊಬ್ಬ ಕಾರ್ಯಕರ್ತನ ಗೆಲುವೆಂದು ಹರ್ಷ ವ್ಯಕ್ತಪಡಿಸಿದರು. ಇತ್ತ ಕೊಪ್ಪಳದಲ್ಲಿಯೂ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿತ್ತು.
ಇದನ್ನೂ ಓದಿ | ಗುಜರಾತ್‍ನಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು: ಕರ್ನಾಟಕ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂದ ಸಚಿವ ನಿರಾಣಿ