Site icon Vistara News

Kolar News: ಬಂಗಾರಪೇಟೆಯಲ್ಲಿ ರಸ್ತೆ ಮಧ್ಯೆ ರಾತ್ರೋ ರಾತ್ರಿ ನಿರ್ಮಿಸಿದ್ದ ಗುಂಬಜ್ ತೆರವು

Gumbaz

ಕೋಲಾರ : ರಾತ್ರೋ ರಾತ್ರಿ ರಸ್ತೆ ಮಧ್ಯೆ ನಿರ್ಮಿಸಿದ್ದ ಗುಂಬಜ್ ಅನ್ನು ತೆರವು ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ನ್ಯೂಟೌನ್ ಮಸೀದಿ ಬಳಿ ನಡೆದಿದೆ. ಈದ್ ಮಿಲಾದ್ ಮೆರವಣಿಗೆ ಆಚರಿಸಲು ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ಕೃತಕ ಗುಂಬಜ್ ಅನ್ನು ಪುರಸಭೆ ಅಧಿಕಾರಿಗಳು ತೆರವು ಮಾಡಿದ್ದಾರೆ.

ಅನುಮತಿ ಪಡೆಯದೆ ಗುಂಬಜ್ ನಿರ್ಮಿಸಿ ಧ್ವಜಗಳನ್ನು ಮುಸ್ಲಿಮರು ಕಟ್ಟಿದ್ದರು. ಕೆಲ ಹಿಂದು ಪರ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಗುಂಬಜ್ ತೆರವು ಗೊಳಿಸಿದ್ದಕ್ಕೆ ಕೆಲ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಗುರುವಾರ ಬಂಗಾರಪೇಟೆಯಲ್ಲಿ ಈದ್ ಮಿಲಾದ್ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಕೃತಕ ಗುಂಬಜ್ ಅನ್ನು ನಿರ್ಮಿಸಲಾಗಿತ್ತು. ಅದನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೆಜಿಎಫ್‌ ಡಿವೈಎಸ್ಪಿ ಭೇಟಿ ನೀಡಿ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಸ್ತ್‌ ಏರ್ಪಡಿಸಿದ್ದಾರೆ.

ಇತ್ತೀಚೆಗೆ ಕೋಲಾರದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ತಲ್ವಾರ್‌ ಮಾದರಿಯ ದ್ವಾರ ನಿರ್ಮಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದೇ ರೀತಿ ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ತಲ್ವಾರ್‌ ದ್ವಾರ, ಟಿಪ್ಪು ಹಾಗೂ ಔರಂಗಜೇಬ್‌ ಭಾವಚಿತ್ರವುಳ್ಳ ಬೃಹತ್‌ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ನಂತರ ಮೆರವಣಿಗೆ ವೇಳೆ ಗಲಾಟೆ, ಕಲ್ಲು ತೂರಾಟ ನಡೆದು ಹಲವರು ಗಾಯಗೊಂಡಿದ್ದರು. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಂಗಾರಪೇಟೆಯಲ್ಲಿ ಗುಂಬಜ್‌ ಅನ್ನು ತೆರವುಗೊಳಿಸಲಾಗಿದೆ.

ಇದನ್ನೂ ಓದಿ | Murder Case : ಬಡ್ಡಿ ಹಣ ಕೊಡಲು ತಡವಾಗಿದ್ದಕ್ಕೆ ಕೋಳಿ ಕಟ್ ಮಾಡುವ ಮಚ್ಚಿನಿಂದ ಕೊಚ್ಚಿದ!

ಅಶೋಕ ಚಕ್ರಕ್ಕೇ ಅರ್ಧ ಚಂದ್ರ; ಈದ್‌ ಮೆರವಣಿಗೆ ವೇಳೆ ತ್ರಿವರ್ಣ ಧ್ವಜಕ್ಕೆ ಅಪಮಾನ ಆರೋಪ

ಕಾರವಾರ: ಕಳೆದ ವಾರ ನಡೆದ ಮುಸ್ಲಿಮರ ಈದ್‌ ಮೆರವಣಿಗೆ (Eid Procession) ವೇಳೆ ರಾಷ್ಟ್ರ ಧ್ವಜಕ್ಕೆ ಅಪಮಾನ (Disrespecting National Flag) ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತ್ರಿವರ್ಣ ಧ್ವಜದ ಅಶೋಕ ಚಕ್ರ ತೆಗೆದು ಅರ್ಧಚಂದ್ರದೊಂದಿಗೆ ಉರ್ದು ಬರವಣಿಗೆ ಬರೆಸಿ ಮೆರವಣಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿದೆ.

ಮಿರ್ಜಾನ್‌ನ ಜಮಾತ್ ಉಲ್ ಮುಸ್ಲಮಿನ್ ಕಮಿಟಿ ನಡೆಸಿದ್ದ ಮೆರವಣಿಗೆ ವೇಳೆ ಯುವಕರು ಅತ್ಯಂತ ಉತ್ಸಾಹದಿಂದ ರಾಷ್ಟ್ರ ಧ್ವಜವನ್ನು ಬೀಸುವ ದೃಶ್ಯಗಳು ವೈರಲ್‌ ಆಗಿವೆ. ಹೆಚ್ಚಿನವರು ಈದ್‌ನಲ್ಲಿ ಬಳಸುವ ಮುಸ್ಲಿಂ ಧ್ವಜಗಳನ್ನು ಬಳಸಿದ್ದರೆ ನಡುವೆ ದೊಡ್ಡ ಧ್ವಜವನ್ನು ಬಳಸಲಾಗಿದೆ. ಇದು ತ್ರಿವರ್ಣದಲ್ಲಿದೆ. ಕೇಸರಿ, ಬಿಳಿ ಹಸಿರು ಧ್ವಜವನ್ನು ಬಳಸಲಾಗಿದ್ದು, ಅದರಲ್ಲಿ ಬಿಳಿ ಬಣ್ಣದಲ್ಲಿ ಅಶೋಕ ಚಕ್ರ ಇರಬೇಕಾದ ಜಾಗದಲ್ಲಿ ಅರ್ಧ ಚಂದ್ರನ ಚಿತ್ರವನ್ನು ಹಾಕಲಾಗಿದೆ. ಜತೆಗೆ ಕೇಸರಿ ಮತ್ತು ಹಸಿರು ಬಣ್ಣದಲ್ಲಿ ಕೂಡಾ ಇದೇ ರೀತಿಯ ಅರ್ಧ ಚಂದ್ರ ಮತ್ತು ನಕ್ಷತ್ರಗಳ ಚಿತ್ರಗಳನ್ನು ಹಾಕಲಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು.

ವಿಡಿಯೋದಲ್ಲಿ ಹಸಿರು, ನೀಲಿ-ಕೆಂಪು, ಕೆಂಪು-ಹಳದಿ ಬಾವುಟಗಳನ್ನು ಹಾರಿಸಲಾಗಿತ್ತು. ಇವುಗಳ ನಡುವೆ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೋಲುವಂತೆ ಮಾಡಲಾಗಿತ್ತು. ಕೇಸರಿ, ಬಿಳಿ ಹಸಿರು ಬಣ್ಣ ಇರುವ ಜಾಗದಲ್ಲಿ ನಕ್ಷತ್ರ ಮತ್ತು ಚಂದ್ರಾಕೃತಿಯ ಚಿತ್ರವನ್ನು ಬರೆಯಲಾಗಿತ್ತು.

ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಜತೆಗೆ ರಾಷ್ಟ್ರಧ್ವಜಕ್ಕೆ ಅಪಮಾನ ತಡೆಗಟ್ಟುವ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಆರೋಪಿಗಳ ಪತ್ತೆ ಮಾಡಿ ಬಂಧಿಸಲು ಕೂಡಾ ಪೊಲೀಸರು ಮುಂದಾಗಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: National Flag: ತ್ರಿವರ್ಣ ಧ್ವಜದ ಅಶೋಕ ಚಕ್ರ ಜಾಗದಲ್ಲಿ ಮದೀನಾ ಗುಂಬಜ್‌ ಚಿತ್ರ ಹಾಕಿದವ ಅರೆಸ್ಟ್

ಈ ನಡುವೆ, ತ್ರಿವರ್ಣದಲ್ಲಿ ಈ ರೀತಿ ಬಳಸುವುದು ತಪ್ಪೇ? ಎಲ್ಲಾ ತ್ರಿವರ್ಣಗಳನ್ನು ರಾಷ್ಟ್ರ ಧ್ವಜವೆಂದೇ ಪರಿಗಣಿಸಲಾಗುತ್ತದೆಯೇ ಎಂಬ ಪ್ರಶ್ನೆಗಳನ್ನು ಕೂಡಾ ಕೇಳಲಾಗುತ್ತಿದ್ದು, ಪೊಲೀಸರು ಮತ್ತು ನ್ಯಾಯಾಲಯ ಈ ಪ್ರಕರಣವನ್ನು ಹೇಗೆ ಪರಿಗಣಿಸುತ್ತದೆ ಎನ್ನುವುದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಲಿದೆ.

Exit mobile version