Site icon Vistara News

ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

ಗುರು ಸಕಲಮಾ guru sakalamaa

ಹಿಮಾಲಯದ ಮಹಾನ್‌ ಯೋಗಿ ಸ್ವಾಮಿ ರಾಮ (Himalayan Yogi Swami Rama) ಹಾಗೂ ಬಹುಶ್ರುತ ವಿದ್ವಾಂಸ, ಶ್ರೀವಿದ್ಯಾ ಗುರು, ಪದ್ಮಶ್ರೀ ಪುರಸ್ಕೃತ ಡಾ. ರಾ. ಸತ್ಯನಾರಾಯಣ (R Satyanarayana) ಅವರುಗಳ ನೇರ ಶಿಷ್ಯೆ, ಶ್ರೀವಿದ್ಯಾ (Shrividya) ಸಾಧಕಿ ಸಕಲಮಾ ಅವರ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಆತ್ಮಕಥನ ಪುಸ್ತಕ ರೂಪದಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ (Messages from Himalayan Sages- Timely and Timeless) ಸದ್ಯದಲ್ಲೇ ಹೊರಬರಲಿದೆ. ಈ ಹಿನ್ನೆಲೆಯಲ್ಲಿ, ಕೃತಿಯ ಮುಖಪುಟ ಅನಾವರಣ (cover page launch) ಇದೇ ಮೇ 26ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಸಂಸದ ತೇಜಸ್ವಿ ಸೂರ್ಯ (Tejaswi Surya), ಸಾಹಿತಿ, ಪತ್ರಕರ್ತ ಜೋಗಿ (Jogi), ಕಾಂತಾರ (Kantara) ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗುರು ಸಕಲಮಾ ತಮ್ಮ ಪೂರ್ವಾಶ್ರಮದಲ್ಲಿ ಜ್ಯೋತಿ ಪಟ್ಟಾಭಿರಾಂ ಹೆಸರಿನಿಂದಲೇ ನೃತ್ಯವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದವರು. ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪ್ರೊಫೆಸರ್‌ ಆಗಿ ಸಾವಿರಾರು ಮಕ್ಕಳಿಗೆ ಇಂಗ್ಲೀಷ್‌ ಬೋಧನೆ ಮಾಡಿದವರು. ಇದರ ಜೊತೆಜೊತೆಗೇ, ತಾನು ಬಾಲ್ಯದಿಂದ ಕಲಿತ ಭರತನಾಟ್ಯವನ್ನೂ ಪೋಷಿಸಿ, ತನ್ನದೇ ಆದ ನೃತ್ಯ ಸಂಸ್ಥೆಯನ್ನು ಕಟ್ಟಿ ನೀರೆರೆದು, ಹಲವಾರು ನೃತ್ಯಪ್ರತಿಭೆಗಳನ್ನು ಬೆಳೆಸಿದವರು. ನೃತ್ಯಕ್ಷೇತ್ರದ ಇವರ ಸಾಧನೆಗೆ ಕರ್ನಾಟಕ ಸರ್ಕಾರ ಕೊಡುವ ಉನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದು ಇವರ ಸಾಧನೆಯ ಹಾದಿಯ ಮೈಲುಗಲ್ಲುಗಳಲ್ಲಿ ಒಂದು. ಇವಿಷ್ಟೇ ಅಲ್ಲದೆ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಯೋಗ- ನಾಟ್ಯ ಸರಸ್ವತಿ, ಆಸ್ಟ್ರೇಲಿಯಾ ಕನ್ನಡ ಸಂಘ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರ ಸನ್ಮಾನಗಳು ಇವರಿಗೆ ಸಂದಿವೆ. ನೂರಾರು ಪ್ರದರ್ಶನಗಳನ್ನೂ ನೀಡಿ ಅಪಾರ ನೃತ್ಯಾಭಿಮಾನಿಗಳನ್ನೂ ಹೊಂದಿದ್ದಾರೆ.

ಇವೆಲ್ಲ ಸಾಧನೆಯ ಜೊತೆಜೊತೆಗೇ, ಜ್ಯೋತಿ ಪಟ್ಟಾಭಿರಾಂ ಅವರು ಇನ್ನೊಂದು ಕ್ಷೇತ್ರದಲ್ಲೂ ಸಮನಾಗಿ ಹೆಜ್ಜೆಯೂರಿ ಬೆಳೆದಿದ್ದೇ ಒಂದು ವಿಸ್ಮಯದ ಗಾಥೆ. ಅದು ಅಧ್ಯಾತ್ಮ. 1992ರವರೆಗೆ ಜ್ಯೋತಿ ಪಟ್ಟಾಭಿರಾಂ ಅವರು ತಮ್ಮ ಬದುಕಿನ ಹಾದಿ ಈ ದಿಕ್ಕಿನಲ್ಲಿ ಹೊರಳೀತು ಎಂಬ ಕಲ್ಪನೆಯನ್ನೂ ಹೊಂದಿರಲಿಲ್ಲ. ಯೋಗಾಚಾರ್ಯ ಪಟ್ಟಾಭಿರಾಂ ಅವರ ಜೀವನ ಸಂಗಾತಿಯಾಗಿ, ತನ್ನ ಕಾಲೇಜು, ನೃತ್ಯ ತರಗತಿಗಳು, ನೃತ್ಯ ಪ್ರದರ್ಶನಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರಿಗೆ ಹಿಮಾಲಯನ್‌ ಯೋಗಿ ಸ್ವಾಮಿ ರಾಮ ಅವರ ಭೇಟಿಯಾದದ್ದೇ ಒಂದು ಆಸಕ್ತಿದಾಯಕ ಕತೆ. ಅಲ್ಲಿಂದ ನಂತರ ಬದುಕು ಬೇರೆಯದೇ ದಿಕ್ಕಿನತ್ತ ಮುಖ ಮಾಡಿದರೂ, ಅಧ್ಯಾತ್ಮವನ್ನೂ, ನೃತ್ಯವನ್ನೂ, ತನ್ನ ಉದ್ಯೋಗವನ್ನೂ ಸಮದೂಗಿಸಿಕೊಂಡು ಕೆಲಸ ಮಾಡಿದರು. ತಮ್ಮ ಗುರು ಸ್ವಾಮಿ ರಾಮ ಅವರಿಂದ ಶ್ರೀವಿದ್ಯೆಯಲ್ಲಿ ಅತ್ಯಂತ ಶ್ರೇಷ್ಠವಾದ ಶಾಂಭವ ದೀಕ್ಷೆಯನ್ನು ಪಡೆದ ಇವರು, ಗುರುವಿನ ದೇಹತ್ಯಾಗದ ನಂತರವೂ ಅವರಿಂದ ಮಾರ್ಗದರ್ಶನಗಳನ್ನು ಪಡೆಯುತ್ತಾ ಬಂದವರು. ಅವರ ಈ ಅಧ್ಯಾತ್ಮದ ಹಾದಿಗೆ ಇನ್ನಷ್ಟು ಬಲ ಬಂದಿದ್ದು ಸ್ವಾಮಿ ರಾಮ ಅವರ ಮಾರ್ಗದರ್ಶನದ ಮೇರೆಗೆ ಮೈಸೂರಿನ ಖ್ಯಾತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ರಾ ಸತ್ಯನಾರಾಯಣ ಅವರ ಬಳಿ ದಕ್ಷಿಣದ ವಿದ್ಯಾರಣ್ಯ ಪರಂಪರೆಯಲ್ಲಿ ಶ್ರೀವಿದ್ಯೆಯ ಹೆಚ್ಚಿನ ಕಲಿಕೆಗೆ ತೆರಳಿದ ಮೇಲೆ.

ಹೀಗಾಗಿ ಉತ್ತರದ ಹಿಮಾಲಯನ್‌ ಭಾರತೀ ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಈಗ ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರ ಈ ಬದುಕಿನ ಪುಟಗಳಲ್ಲಿ ನೂರಾರು ರೋಮಾಂಚನಗೊಳಿಸುವ ಅಧ್ಯಾತ್ಮದ ಅನುಭವಗಳಿವೆ. ಸುಮಾರು 30 ವರ್ಷಗಳ ಸುದೀರ್ಘ ಅಧ್ಯಾತ್ಮ ಸಾಧನೆಯ ವಿವಿಧ ಮಜಲುಗಳೆಲ್ಲವೂ, ಮೈನವಿರೇಳಿಸುವಂತ ಹಲವಾರು ಅನುಭವಗಳ ಜೊತೆಗೆ ಪುಸ್ತಕದ ಮೂಲಕ ಅಧ್ಯಾತ್ಮ ಆಸಕ್ತರನ್ನೂ ಸಾಧಕರನ್ನೂ, ಜನಸಾಮಾನ್ಯರನ್ನೂ ತಲುಪಲಿದ್ದು, ಋಷಿ ಪರಂಪರೆಯ ಬಗೆಗಿನ ಸಾಮಾನ್ಯರ ಅರಿವಿನ ವಿಸ್ತಾರಕ್ಕೆ ಹೊಸ ಭಾಷ್ಯ ಬರೆಯಲಿದ್ದಾರೆ.

ಕೃತಿ ಮುಖಪುಟ ಅನಾವರಣ, ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ
ದಿನಾಂಕ: ಮೇ 26, ಭಾನುವಾರ
ಸಮಯ: ಬೆಳಗ್ಗೆ 10.30
ಸಾನಿಧ್ಯ: ಗುರು ಸಕಲಮಾ
ಅತಿಥಿಗಳು: ಸಾಹಿತಿ ಜೋಗಿ, ಸಂಸದ ತೇಜಸ್ವಿ ಸೂರ್ಯ, ನಟಿ ಸಪ್ತಮಿ ಗೌಡ

ಇದನ್ನೂ ಓದಿ: Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

Exit mobile version