Site icon Vistara News

Karnataka Election 2023: ಬೈಂದೂರಿನಲ್ಲಿ ಗುರುರಾಜ ಗಂಟಿಹೊಳೆಗೆ ಗೆಲುವು ನಿಶ್ಚಿತ; ಯಡಿಯೂರಪ್ಪ ಅಭಯ

Gururaja Gantihole to win in Byndoor says BS Yediyurappa Karnataka Election 2023 updates

ಬೈಂದೂರು: ಯಾರೋ ಒಂದಿಬ್ಬರು ನಮ್ಮ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರನ್ನು ಸೋಲಿಸುತ್ತೇವೆ ಎಂದು ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದಕ್ಕೆ ನೀವು ಯಾರೂ ಕಿವಿಕೊಡುವ ಅಗತ್ಯವಿಲ್ಲ. ನಿಮ್ಮ ಯಡಿಯೂರಪ್ಪ ನಾನಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ನೂರಕ್ಕೆ ನೂರರಷ್ಟು ನಮ್ಮ ಅಭ್ಯರ್ಥಿ ಗುರುರಾಜ ಗಂಟಿಹೊಳೆ (Gururaja Gantihole) ಅವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಸ್ಪಷ್ಟವಾಗಿ ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಬಿ.ಎಸ್.‌ ಯಡಿಯೂರಪ್ಪ ಅವರು ಮಾತನಾಡಿ, ನಾನು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಎಲ್ಲರೂ ಗುರುರಾಜ ಗಂಟಿಹೊಳೆ ಜತೆಗಿದ್ದೇವೆ. ನಾವೆಲ್ಲರೂ ಸೇರಿ ಅವರ ಪರ ಕೆಲಸ ಮಾಡುತ್ತೇವೆ. ನಾವೆಲ್ಲರೂ ಅವರ ಪರವಾಗಿ ಇದ್ದ ಮೇಲೆ ಯಾವುದೇ ಭಯ, ಆತಂಕ ಬೇಡ. ಯಾರೋ ಒಂದಿಬ್ಬರು ಇಡೀ ಚುನಾವಣೆಯನ್ನು ನಿರ್ಧಾರ ಮಾಡಲು ಆಗುವುದಿಲ್ಲ ಎಂದು ಗುಡುಗಿದರು.

ತನಗೆ ಎಲ್ಲವೂ ಬೇಕು. ಆದರೆ, ತನಗೆ ಸಿಗದೇ ಬೇರೆಯವರಿಗೆ ಸಿಕ್ಕರೆ ಅದನ್ನು ನಾನು ವಿರೋಧ ಮಾಡುತ್ತೇನೆ ಎಂಬ ಪ್ರವೃತ್ತಿ ಸರಿಯಲ್ಲ. ಇಂತಹ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹ ಮಾಡಬಾರದು. ಮತದಾರರಾದ ನೀವೆಲ್ಲರೂ ಸೇರಿ ಅದನ್ನು ಖಂಡಿಸಬೇಕು ಎಂದು ಬಿ.ಎಸ್.‌ ಯಡಿಯೂರಪ್ಪ ಕರೆ ನೀಡಿದರು.

ಅಪ ಪ್ರಚಾರ ಮಾಡಿದವರಿಗೆ ಬಿ.ಎಸ್.‌ ಯಡಿಯೂರಪ್ಪ ಹೇಳಿದ್ದೇನು?

ಗಂಟಿಹೊಳೆಗಿದೆ ದೊಡ್ಡ ಯುವ ಅಭಿಮಾನಿ ಬಳಗ

ಬಿಜೆಪಿಯಲ್ಲಿ ಈ ಬಾರಿ ಹೊಸ ಬೆಳವಣಿಗೆಯಾಗಿದ್ದು, ಹಾಲಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್ ನೀಡದೆ ಸಾಮಾನ್ಯ ಕಾರ್ಯಕರ್ತರಾದ, ಬರಿಗಾಲ ಸೇವಕ, ಪದವೀಧರ ಗುರುರಾಜ ಶೆಟ್ಟಿ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಲಾಗಿದೆ. ಸಂಘದ ಶಾಖೆಯಲ್ಲಿ ಪಳಗಿದ ಗುರುರಾಜ ಗಂಟಿಹೊಳೆ ಅವರಿಗೆ ಕ್ಷೇತ್ರದಲ್ಲಿ ದೊಡ್ಡ ಯುವ ಅಭಿಮಾನಿ ಬಳಗವಿದೆ. ಸರಳ ಜೀವನಕ್ಕೆ ಹೆಸರುವಾಸಿಯಾಗಿರುವ ಗುರುರಾಜ ಗಂಟಿಹೊಳೆಯವರ ನಡೆಯು ಗ್ರಾಮೀಣ ಜನರ ಮನಸ್ಸನ್ನು ಸೆಳೆಯುತ್ತಿದೆ. ಇಂಥ ಆದರ್ಶ, ಪ್ರಾಮಾಣಿಕ ವ್ಯಕ್ತಿ ಗೆಲ್ಲಬೇಕು ಎಂಬ ಮಾತು ಕ್ಷೇತ್ರಾದ್ಯಂತ ಕೇಳಿ ಬರುತ್ತಿದೆ. ಬಿಜೆಪಿ ಮತ್ತು ಸಂಘ ಪರಿವಾರದ ಹಿರಿಯರೂ ಗಂಟಿಹೊಳೆ ಪರವಾಗಿ ಚುರುಕಿನಿಂದ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: Karnataka Election: ಮೇ 7ರಂದು ಆಯನೂರಿನಲ್ಲಿ ಮೋದಿ ಚುನಾವಣಾ ಪ್ರಚಾರ; 3 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ ನಿರೀಕ್ಷೆ

ಗುರುರಾಜ ಶೆಟ್ಟಿ ಗಂಟಿಹೊಳೆ ಸಮಾಜ ಸೇವೆ

ಗುರುರಾಜ ಶೆಟ್ಟಿ ಗಂಟಿಹೊಳೆ ಅವರು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉಪ್ಪುಂದದ ಬಳಿಯ ಗಂಟಿಹೊಳೆಯಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾದರು. ಈ ರೀತಿ ಹತ್ತು ವರ್ಷ ಪ್ರಚಾರಕರಾಗಿದ್ದ ನಂತರ ತಮ್ಮೂರಿಗೆ ವಾಪಸಾದರು. ಆನಂತರ ಉಡುಪಿ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಹೊಣೆ ನಿರ್ವಹಿಸಿದರು. ಈ ನಡುವೆ ಉದ್ಯಮವನ್ನು ಆರಂಭಿಸಿ ನೂರು ಜನರಿಗೆ ಕೆಲಸ ಕೊಟ್ಟರು. ಉದ್ಯಮ ವಿಸ್ತರಣೆ ಸಂದರ್ಭದಲ್ಲಿ ಹಿನ್ನಡೆಯಾಗಿ ಅಲ್ಲಿಂದ ಹೊರಬಂದರು. ಜತೆಗೆ ಸಂಪೂರ್ಣ ಸಮಾಜ ಸೇವೆಯಲ್ಲೇ ತೊಡಗಿಸಿಕೊಂಡು, ಈಶಾನ್ಯ ರಾಜ್ಯಗಳ ಮಕ್ಕಳ ಶಿಕ್ಷಣದತ್ತ ಗಮನಹರಿಸಿದರು. ಹೀಗೆ ಬೈಂದೂರಿನಲ್ಲಿಯೂ ಅನೇಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ.

Exit mobile version