ಹಾಸನ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ಉಂಟಾಗಿದ್ದ ಭಿನ್ನಮತದ ಕಾವು ಈಗ ಆರಿದೆ. ಹಾಸನ ಜೆಡಿಎಸ್ ಅಭ್ಯರ್ಥಿ ವಿಚಾರದಲ್ಲಿ ಎಚ್.ಡಿ.ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಅವರ ಮನವೊಲಿಸುವಲ್ಲಿ ದೇವೇಗೌಡರು ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ, ಹಾಸನದಲ್ಲಿ ಜೆಡಿಎಸ್ ಗೆಲುವಿಗೆ ಗೌಡರ ಕುಟುಂಬ ಒಗ್ಗೂಡಿದ್ದು, ಇಡೀ ಕುಟುಂಬವೇ ಜೆಡಿಎಸ್ ಅಭ್ಯರ್ಥಿ ಎಚ್.ಪಿ.ಸ್ವರೂಪ್ ಬೆನ್ನಿಗೆ ನಿಂತಿದೆ.
ಆರೋಗ್ಯ ಸಮಸ್ಯೆಯ ಮಧ್ಯೆಯೇ ಎಚ್.ಡಿ.ದೇವೇಗೌಡರು ಹಾಸನದಲ್ಲಿ ಗುರುವಾರ ಎಚ್.ಪಿ. ಸ್ವರೂಪ್ ಪರ ಪ್ರಚಾರ ಮಾಡಿದ್ದಾರೆ. ಇವರಿಗೆ ಎಚ್.ಡಿ.ಕುಮಾರಸ್ವಾಮಿ ಸಾಥ್ ನೀಡಿದ್ದಾರೆ. ಎಚ್.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಅವರು ಬುಧವಾರ ಸ್ವರೂಪ್ ಅವರಿಗೆ ಆಶೀರ್ವಾದ ಮಾಡುವ ಮೂಲಕ ಮುನಿಸು ಮರೆತು, ಬೆಂಬಲ ಘೋಷಿಸಿದ್ದಾರೆ. ಅಲ್ಲಿಗೆ, ದೇವೇಗೌಡರ ಇಡೀ ಕುಟುಂಬವೇ ಸ್ವರೂಪ್ ಬೆನ್ನಿಗೆ ನಿಂತಂತಾಗಿದೆ.
ಪ್ರತಿಷ್ಠೆಯ ಕಣ, ಗೆಲುವಿಗೆ ಪಣ
ಹಾಸನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತವರು ಜಿಲ್ಲೆ. ಇಡೀ ಜಿಲ್ಲೆಯು ಜೆಡಿಎಸ್ ಭದ್ರಕೋಟೆಯಾಗಿದೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾಸನದಲ್ಲಿ ಬಿಜೆಪಿಯ ಪ್ರೀತಂ ಗೌಡ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಅವರೇ ಸ್ಪರ್ಧಿಸಿದ್ದು, ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ಹಾಗಾಗಿ, ದೇವೇಗೌಡರ ಕುಟುಂಬವು ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಇದೇ ಕಾರಣದಿಂದಾಗಿಯೇ, ಏನೇ ಮುನಿಸುಗಳಿದ್ದರೂ, ಅದನ್ನು ಮರೆತು ಸ್ವರೂಪ್ ಪರ ಒಗ್ಗಟ್ಟಾಗಿ ಪ್ರಚಾರ ಕೈಗೊಂಡಿದ್ದಾರೆ. ಆ ಮೂಲಕ ಪ್ರೀತಂ ಗೌಡ ಅವರನ್ನು ಸೋಲಿಸುವ ಪಣ ತೊಟ್ಟಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮೊದಲು ರೋಡ್ ಶೋ
ಮುಸ್ಲಿಂ ಮೀಸಲಾತಿ ಮರುಸ್ಥಾಪನೆ ಎಂದ ಎಚ್‌ಡಿಕೆ
ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವು 2ಬಿ ಮೀಸಲಾತಿಯನ್ನು ರದ್ದುಗೊಳಿಸಿದ ಕುರಿತು ಮಾತನಾಡಿದ ಕುಮಾರಸ್ವಾಮಿ, ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು. “ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಮುಸಲ್ಮಾನ ಬಂಧುಗಳಿಗೆ ಮೀಸಲಾತಿ ಕೊಟ್ಟಿದ್ದರು. ಈ ಮೀಸಲಾತಿಯನ್ನು ಬಿಜೆಪಿ ತೆಗೆದಿದೆ. ಆದರೆ, ನಾವು ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಂ ಮೀಸಲಾತಿಯನ್ನು ಮರುಸ್ಥಾಪನೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.
ಭವಾನಿ ಅವರನ್ನು ಹೊಗಳಿದ ಕುಮಾರಸ್ವಾಮಿ
ಭವಾನಿ ರೇವಣ್ಣ ಅವರು ಮುನಿಸು ಮರೆತು ಸ್ವರೂಪ್ ಅವರಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಎಚ್.ಡಿ.ಕುಮಾರಸ್ವಾಮಿ ಅವರು ಭವಾನಿ ಅವರನ್ನು ಹೊಗಳಿದ್ದಾರೆ. “ಎಚ್.ಪಿ.ಸ್ವರೂಪ್ ಅವರಿಗೆ ಭವಾನಿ ಅವರು ತಾಯಿ ಸ್ಥಾನದಲ್ಲಿ ನಿಂತು ಆಶೀರ್ವಾದ ಮಾಡಿದ್ದಾರೆ. ಹಲವು ಒತ್ತಡ ಬಂದರೂ ಸ್ವರೂಪ್ ಅವರಿಗೇ ಟಿಕೆಟ್ ನೀಡಿ ಎಂದು ಭವಾನಿ ಹೇಳಿದ್ದಾರೆ. ಪಕ್ಷದ ಏಳಿಗೆ ಮುಖ್ಯ, ದೇವೇಗೌಡರು ಮುಖ್ಯ ಎಂದು ಅವರು ತ್ಯಾಗ ಮಾಡಿದ್ದಾರೆ. ರೇವಣ್ಣ ಅವರು ಮಾತಿನಲ್ಲಿ ಒರಟು ಎನಿಸಿದರೂ ಜಿಲ್ಲೆಗೆ ಹಲವು ಕೊಡುಗೆ ನೀಡಿದ್ದಾರೆ. ಇಂತಹ ರೇವಣ್ಣ ಅವರ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿ ಬಗ್ಗೆ ನಾನು ಮಾತನಾಡುವುದಿಲ್ಲ” ಎಂದು ಪರೋಕ್ಷವಾಗಿ ಪ್ರೀತಂ ಗೌಡ ಅವರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: Karnataka Election 2023: ಸ್ವರೂಪ್ ಬೇರೆಯಲ್ಲ, ನನ್ನ ಮಕ್ಕಳು ಬೇರೆಯಲ್ಲವೆಂದ ಭವಾನಿ; ಬೆಂಬಲಕ್ಕೆ ರೇವಣ್ಣ ಕುಟುಂಬ
ಎಚ್.ಪಿ.ಸ್ವರೂಪ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಹಾಸನದಲ್ಲಿ ಬೃಹತ್ ರೋಡ್ ಶೋ ಕೈಗೊಳ್ಳಲಾಯಿತು. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರು ರೋಡ್ ಶೋನಲ್ಲಿ ಭಾಗವಹಿಸಿ ಎಚ್.ಪಿ.ಸ್ವರೂಪ್ ಅವರಿಗೆ ಸಾಥ್ ನೀಡಿದರು.