ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಯೋಜನೆಗಳನ್ನೂ ಅನುಷ್ಠಾನ ಮಾಡದೆ ಬಿಜೆಪಿ ಸರ್ಕಾರ, ಸಂಸದ, ಕ್ಷೇತ್ರದ ಮಾಜಿ ಶಾಸಕ ತೊಂದರೆ ನೀಡುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹಾಗೂ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಆರೋಪಿಸಿದರು.
ದಾಸರಹಳ್ಳಿಯಲ್ಲಿ ಆಯೋಜಿಸಿದ್ದ ಪಂಚರತ್ನ ಯಾತ್ರೆಯಲ್ಲಿ ಹಾಗೂ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಂಜುನಾಥ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ಕಾರ್ಯಾದೇಶ ನೀಡದೆ ಕೀಳು ಮಟ್ಟದ ರಾಜಕಾರಣವನ್ನು ಸಂಸದ ಸದಾನಂದಗೌಡರು, ಇಲ್ಲಿನ ಮಾಜಿ ಶಾಸಕರು ಮಾಡುತ್ತಿದ್ದಾರೆ. ಈ ವಿಷಯವನ್ನು ಜನರ ಮುಂದೆ ಇಡುತ್ತಿದ್ದೇವೆ, ಬೆಂಗಳೂರಿನಿಂದ ಬಿಜೆಪಿಯನ್ನು ದೂರ ಇಡುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲಿ ದಿನಪೂರ್ತಿ ದಾಸರಹಳ್ಳಿಯ ಕಾರ್ಯಕ್ರಮಗಳಿವೆ. ರಾತ್ರಿವರೆಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ ಒಂದರ ನಂತರ ಬೆಂಗಳೂರಿನ 8-10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಿದ್ಧತೆ ಮಾಡುತ್ತೇವೆ. ಮಾರ್ಚ್ 8ರಿಂದ ಉತ್ತರ ಕನ್ನಡದ ಕುಮಟಾದಿಂದ ಆರಂಭಿಸಿ ಆ ಭಾಗದ ಎಲ್ಲ ಜಿಲ್ಲೆಗಳ ಪ್ರವಾಸವನ್ನೂ 27ರವರೆಗೆ ನಡೆಯಲಿದೆ. ನಡುವೆ ಶಿವರಾತ್ರಿ ಬಿಡುವು ಇರಲಿದೆ.
ನಂತರ ಮಾರ್ಚ್‌ನಲ್ಲಿ ಮೈಸೂರು, ಹಾಸನ ಹಾಗೂ ಬೆಂಗಳೂರಿನಲ್ಲಿ ಪ್ರವಾಸ ಮಾಡಿದ್ದೇವೆ. ಬೆಂಗಳೂರಿನಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅನೇಕ ಸುತ್ತಿನ ಮಾತುಕತೆ ನಡೆಸಿದ್ದೇವೆ. ಮುಂದಿನ ತಿಂಗಳು 20-25ರ ವೇಳೆಗೆ ಅಂತಿಮ ಕಾರ್ಯಕ್ರಮ ನಡೆಸುತ್ತೇವೆ.
ಇದನ್ನೂ ಓದಿ : Go Back Ashok: ಮಂಡ್ಯದಲ್ಲಿ ಹೆಚ್ಚಾದ ಅಶೋಕ್ ಗೋ ಬ್ಯಾಕ್ ಅಭಿಯಾನ; ಬೇಡ ಹೊಂದಾಣಿಕೆ ರಾಜಕಾರಣವೆಂದ ಬಿಜೆಪಿ ಕಾರ್ಯಕರ್ತರು
ಶಾಸಕ ಮಂಜುನಾಥ್ ಮಾತನಾಡಿ, ಇಲ್ಲಿಗೆ ಮಂಜೂರಾಗಿದ್ದ ಯೋಜನೆಗಳಿಗೆ ಕಾರ್ಯಾದೇಶ ನೀಡದೆ ಸತಾಯಿಸುತ್ತಿದ್ದಾರೆ. ಎಲ್ಲಿ ಆದೇಶ ಆಗಿದೆ ಎಂದು ಅಧಿಕಾರಿಗಳು ಕೇಳುತ್ತಾರೆ. ಆದೇಶದ ಪ್ರತಿ ತೋಋಇಸಿದರೂ ನಂಬುವುದಿಲ್ಲ. ಈ ಬಗ್ಗೆ ಆರ್. ಅಶೋಕ್ ಅವರನ್ನು ಕೇಳಿ ಎಂದು ಬಿಬಿಎಂಪಿ ಆಯುಕ್ತರು ಹೇಳುತ್ತಾರೆ. ಆರ್. ಅಶೋಕ್‌ಗೂ ನನ್ನ ಕ್ಷೇತ್ರಕ್ಕೂ ಏನು ಸಂಬಂಧ? ನಾನೇಕೆ ಅಶೋಕ್ ಹತ್ತಿರ ಹೋಗಬೇಕು? ಹೀಗೆಯೇ ಪ್ರತಿದಿನ ನನ್ನನ್ನು ಕಣ್ಣೀರಿನಲ್ಲಿ ಕೈತೊಳೆಸುತ್ತಿದ್ದಾರೆ. ಇಷ್ಟೆಲ್ಲ ಕಷ್ಟವಿದ್ದರೂ ಕ್ಷೇತ್ರದ ಸೇವೆಯನ್ನು ನಿಲ್ಲಿಸಿಲ್ಲ ಎಂದು ಹೇಳಿದರು.