Site icon Vistara News

H.D. Kumaraswamy: ಅತ್ತೂ ಕರೆದು ಟಿಕೆಟ್‌ ತೊಗೊತೀರ; ಆಮೇಲೆ ಮ್ಯಾಚ್‌ ಫಿಕ್ಸ್‌ ಮಾಡ್ಕೊತೀರ: ಪಕ್ಷದ ಅಭ್ಯರ್ಥಿಗಳ ಬಗ್ಗೆ ಕುಮಾರಸ್ವಾಮಿ ಆಕ್ರೋಶ

h d kumaraswamy lashes out over JDS Candidates

#image_title

ಬೆಂಗಳೂರು: ಚುನಾವಣೆ ಹತ್ತಿರಕ್ಕೆ ಬಂದಾಗ ಬಂದು ಗೋಳಾಡಿ ಬೀ ಫಾರಂ ತೆಗೆದುಕೊಂಡು ಹೋಗುತ್ತೀರಿ, ಆಮೇಲೆ ಯಾವನ ಜತೆಗೊ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತೀರಿ ಎಂದು ಬೆಂಗಳೂರು ಜೆಡಿಎಸ್‌ ಅಭ್ಯರ್ಥಿಗಳ ಕುರಿತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಅರಮನೆ ಮೈದಾನದಲ್ಲಿ ಆಯೋಜನೆ ಮಾಡಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಬೆಂಗಳೂರು ನಗರದಲ್ಲಿ ಹಲವು ವರ್ಷಗಳಿಂದ ಪಕ್ಷದ ಸಂಘಟನೆ ನನೆಗುದಿಗೆ ಬಿದ್ದಿದೆ. ಇನ್ನು ಮುಂದೆ ಬೆಂಗಳೂರಿನಲ್ಲಿ ಸಂಘಟನೆ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ. ನಗರದ ನಾಲ್ಕು ವಿಭಾಗಕ್ಕೆ ನಾಲ್ವರು ಅಧ್ಯಕ್ಷರನ್ನು ಮಾಡಿ ಆದೇಶ ಹೊರಡಿಸಿ ಎಂದು ವೇದಿಕೆಯ ಮೇಲೆ ಕೂತಿದ್ದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ಸೂಚನೆ ನೀಡಿದರು. ಒಬ್ಬರಿಗೆ ಕೊಟ್ಟರೆ ಅವರು ಏಕ ಚಕ್ರಾಧಿಪತ್ಯ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಸಮರ್ಥ ಅಭ್ಯರ್ಥಿಗಳನ್ನು ತಯಾರು ಮಾಡುವಲ್ಲಿ, ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಲೋಪ ಎಸಗಿರುವ ಪಕ್ಷದ ಜಿಲ್ಲಾ ಅಧ್ಯಕ್ಷರುಗಳನ್ನು ಎಚ್‌.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷಗಿರಿ ಎಂದರೆ ಸ್ವಂತ ಜಹಗೀರು ಅಲ್ಲ, ಸಂಘಟನೆಯನ್ನು ಸರಿಯಾಗಿ ಮಾಡಿಲ್ಲ, ಯಾರೂ ಸಮರ್ಥವಾಗಿ ಕೆಲಸ ಮಾಡಿಲ್ಲ, ಎಲ್ಲಾ ಹಂತಗಳಲ್ಲಿಯೂ ಸಂಘಟನೆ ಸೋತಿದೆ, ನಾನೇ ಅಭ್ಯರ್ಥಿ ಹುಡುಕಿ ಕೊಡಬೇಕಾದ ಪರಿಸ್ಥಿತಿ ಬಂದಿದೆ, ಹಾಗಾದರೆ ಜಿಲ್ಲಾಧ್ಯಕ್ಷರು ಮಾಡಿದ್ದೇನು? ಇವರೇನು ಅಲಂಕಾರಕ್ಕೆ ಇದ್ದಾರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಈ ಸರ್ಕಾರದ ಭವಿಷ್ಯ ನಿಂತಿದೆ. ಈ ಸರ್ಕಾರ ಇರಬಹುದು ಅಥವಾ ಹೋಗಬಹುದು. ನಾನೇನು ಭವಿಷ್ಯ ಹೇಳುತ್ತಿಲ್ಲ, ಆ ನಂತರ ಏನೆಲ್ಲಾ ಬೆಳೆವಣಿಗೆ ನಡೆಯುತ್ತದೆಯೋ ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು.

ಕಾಂಗ್ರೆಸ್ 135 ಕ್ಷೇತ್ರ ಗೆದ್ದಿದೆ, ಆದರೆ ಆ ಸರಕಾರದಲ್ಲಿ ವಿಶ್ವಾಸದ ಕೊರತೆ ಇದೆ. ಜನರ ಕೆಲಸ ಮಾಡಲು ಅವರಿಗೆ ಆಗುತ್ತಿಲ್ಲ. ಆದರೆ ನಾವು ಸಂಘಟನೆ ಕಡೆ ಗಮನಕ್ಕೆ ಕೊಡೋಣ, ವಿಷಯಾಧಾರಿತವಾಗಿ ನಾವು ಹೋರಾಟ ನಡೆಸಬೇಕು. ಸಂಘಟನೆಯನ್ನು ಬಳಪಡಿಸಿಕೊಂಡು ಜನರ ಜತೆ ನಿಲ್ಲೋಣ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಎಲ್ಲ ನೂತನ ಶಾಸಕರು, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.

ಇದನ್ನೂ ಓದಿ: Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Exit mobile version