ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳನ್ನು ಮೊದಲ ಸಂಪುಟದಲ್ಲೇ ಜಾರಿ ಮಾಡುವುದಾಗಿ ತಿಳಿಸಿದ್ದರೂ ಈಗ ನಿಬಂಧನೆ ವಿಧಿಸಲು ಸರ್ಕಾರ ಮುಂದಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಬಿ; ಕಟ್ಟಬೇಡಿ ಎಂದು ರಾಜ್ಯದ ಜನರಿಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಧಾನಸದೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ನಾವು ಕೊಟ್ಟ ಮಾತನ್ನು ತಪ್ಪೋದಿಲ್ಲ ಅನ್ನೋ ವೀರಾವೇಶದ ಮಾತನ್ನು ಸಿಎಂ ಆಡಿದ್ದರು. 200 ಯೂನಿಟ್ ಎಲ್ಲರಿಗೂ ಫ್ರೀ ,ಫ್ರೀ ಅಂತ ಹೇಳಿದ್ದರು. ಈಗ ಗೈಡ್‌ಲೈನ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ.
ಅವತ್ತು ವೀರಾವೇಶದ ಮಾತನಾಡಿ, ಚಪ್ಪಾಳೆ ಹೊಡಿಸಿದ್ದೆ, ಹೊಡಿಸಿದ್ದೆ ಈಗ ಏನು ಹೇಳುತ್ತಿದ್ದಾರೆ? ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್‌ನಲ್ಲೇ ಎಲ್ಲ ಯೋಜನೆಗಳನ್ನು ಉಚಿತ ಮಾಡುತ್ತೇವೆ ಎಂದಿದ್ದರು. ನಿರುದ್ಯೋಗ ಪದವೀಧರರಿಗೆ 3 ಸಾವಿರ ರೂ. ಕೊಡುತ್ತೇವೆ ಎಂದು ಹೇಳಿದ್ದರು. ಎದ್ದೇಳು ಕರ್ನಾಟಕ ಎಂದು ಹೇಳಿದ್ದರಲ್ಲ, ಈಗ ಎದ್ದೇಳಿಸಿ. ಹೆಣ್ಣುಮಕ್ಕಳಿಗೆ ಧರ್ಮಸ್ಥಳ, ತಿರುಪತಿ, ಪೂನಾ ಎಲ್ಲ ಫ್ರೀ ಅಂದ್ರಲ್ಲ ಈಗ ಏನ್ ಹೇಳ್ತಿದ್ದಾರೆ?
ಯಾವಾಗ ಇದು ಕಾರ್ಯರೂಪಕ್ಕೆ ಬರುತ್ತೆ ಅನ್ನೋದನ್ನ ಕಾದು ನೋಡೋಣ. ಇವರ ಸುಳ್ಳಿನ ಆಟ ಇದೆಯಲ್ಲ, ಅದರ ಮುಂದೆ ನಮ್ಮ ಪಕ್ಷದ ಹೋರಾಟದ ಸ್ವರೂಪ ಇರಲಿದೆ. ಅವತ್ತು ಹೇಳಬೇಕಾದ್ರೆ ನಿಗಾ ಇರಲಿಲ್ವಾ? ಈಗ ಹಾದಿ ಬೀದಿಯಲ್ಲಿ ಹೋಗೋರು ಅಂತಾ ಗೊತ್ತಾಗ್ತಿದ್ಯಾ? ಎಂದು ಡಿ.ಕೆ ಶಿವಕುಮಾರ್ ಮಾತಿಗೆ ಹರಿಹಾಯ್ದ ಎಚ್.ಡಿ. ಕುಮಾರಸ್ವಾಮಿ, ಕರೆಂಟ್ ಬಿಲ್ ಕಟ್ಟಬೇಡಿ ಎಂದು ನಾನು ಕರೆ ಕೊಡಬೇಕು ಎಂದುಕೊಂಡಿದ್ದೇನೆ. ರಾಜ್ಯಾದ್ಯಂತ ನಮ್ಮ ಪಕ್ಷದ ವತಿಯಿಂದ ನಾನು ಕರೆ ಕೊಡುತ್ತೇನೆ ಎಂದು ಎಚ್ಚರಿಸಿದ್ದಾರೆ.
ಜೆಡಿಎಸ್ ಅವಲೋಕನ ಸಭೆ ವಿಚಾರ
ಜೆಡಿಎಸ್ ಅವಲೋಕನ ಸಭೆ ಕುರಿತು ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ಮುಂದಿನ ಸಂಘಟನಾ ದೃಷ್ಟಿಯಿಂದ ಸಭೆ ಕರೆಯಲಾಗಿದೆ. ಕಾರ್ಯಕರ್ತರಲ್ಲಿ ಇಂದಿಗೂ ಕೂಡ ಪಕ್ಷ ಸಂಘಟನೆಗೆ ಒಲವಿದೆ. ಪಕ್ಷದಲ್ಲಿ ಕೆಲವೊಬ್ಬರಿಗೆ ಜವಾಬ್ದಾರಿ ನೀಡಬೇಕು ಅನ್ನೋ ಉದ್ದೇಶವಿದೆ. ಪಕ್ಷದಲ್ಲಿ ಆಗಿರುವ ನೋವು, ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ. ಸಂಘಟನೆಯ ದೃಷ್ಟಿಯಿಂದ ಹಲವಾರು ಬದಲಾವಣೆಗೆ ಚಿಂತನೆ ನಡೆಸಿದ್ದೇವೆ.
ಮುಂದಿನ ದಿನಗಳಲ್ಲಿ ಪಕ್ಷದಲ್ಲಿರುವ ಮಾಜಿ ಶಾಸಕರು, ಮಾಜಿ ಸಚಿವರಿಗೆ ಜವಾಬ್ದಾರಿ ನೀಡಿ ಜಿಲ್ಲಾಮಟ್ಟದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತೇವೆ ಎಂದರು. ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಗುರುವಾರದ ಸಭೆಯಲ್ಲಿ ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ. ಯಾವುದೇ ಮುಚ್ಚುಮರೆಯಿಲ್ಲ. ಪಕ್ಷದ ಸಂಘಟನಾ ದೃಷ್ಟಿಯಿಂದ ಎಲ್ಲಾ ರೀತಿಯ ಚರ್ಚೆ ಮಾಡುತ್ತೇವೆ ಎಂದರು.
ಸೆಪ್ಟೆಂಬರ್ ಬಳಿಕ ರಾಜಕೀಯ ಬದಲಾವಣೆ ಆಗಲಿದೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ರಾಜಕೀಯದಲ್ಲಿ ಬೆಳವಣಿಗೆಗಳು ಆಗುತ್ತವೆ ಎಂದಿದ್ದೆ ಅಷ್ಟೇ. ಸರ್ಕಾರ ಹೋಗುತ್ತೆ ಅಂತಾ ಹೇಳಿದ್ದೆನಾ? ನೀವೆ ನೋಡುತ್ತಿದ್ದೀರಲ್ಲ ಅಧಿಕಾರ ಹಂಚಿಕೆ ವಿಚಾರ? ಇದನ್ನು ನಾವು ಸೃಷ್ಟಿ ಮಾಡಿದ್ದಾ? ಎಂದು ಪ್ರಶ್ನಿಸಿದರು.
ರಾಜ್ಯ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಸಿ.ಎಂ. ಇಬ್ರಾಹಿಂ ಬದಲಿಗೆ ಬೇರೆಯವರನ್ನು ನೇಮಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆಯೇ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರನ್ನೂ ಬದಲಾಯಿಸಬಹುದು ಎನ್ನಲಾಗಿದೆ.
ಇದನ್ನೂ ಓದಿ: Karnataka Election 2023 : ರಾಜಕೀಯಕ್ಕೆ ಕುಮಾರಸ್ವಾಮಿ ಗುಡ್‌ಬೈ? ಏನಾಗುತ್ತಿದೆ ಜೆಡಿಎಸ್‌ನಲ್ಲಿ?