Site icon Vistara News

Ugadi 2023: ಎಚ್‌.ಡಿ. ಕುಮಾರಸ್ವಾಮಿ ಕಾಲು ಮುಟ್ಟಿ ಆಶೀರ್ವಾದ ಪಡೆದ ಮೊಮ್ಮಗ ಅವ್ಯಾನ್

#image_title

ಬೆಂಗಳೂರು: ರಾಜ್ಯದೆಲ್ಲೆಡೆ ಹಿಂದುಗಳ ಹೊಸ ವರ್ಷಾಚರಣೆ ಯುಗಾದಿ ಹಬ್ಬವನ್ನು (Ugadi 2023) ಬುಧವಾರ ಸಂಭ್ರಮದಿಂದ ಆಚರಿಸಲಾಗಿದೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಈ ವೇಳೆ ಕುಮಾರಸ್ವಾಮಿ ಅವರ ಕಾಲುಗಳನ್ನು ಮುಟ್ಟಿ ಮೊಮ್ಮಗ ಆಶೀರ್ವಾದ ಪಡೆದಿರುವುದು ಗಮನ ಸೆಳೆದಿದೆ.

ಮನೆಯಲ್ಲಿ ಅನಿತಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರು ದೇವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ತಾತನ ಕಾಲಿಗೆ ಬಿದ್ದು ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ದೇವ್ ಆಶೀರ್ವಾದ ಪಡೆದಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮಕ್ಕಳಿಗೆ ಸಂಸ್ಕಾರ ಕಲಿಸಿದಲ್ಲಿ ಮುಂದಿನ ಜೀವನ ಉತ್ತಮವಾಗಿರುತ್ತದೆ. ಕುಮಾರಸ್ವಾಮಿ ಅವರ ಕುಟುಂಬದಲ್ಲಿ ಇದೇ‌ ಸಂಸ್ಕಾರ ಗುಣ ಇಷ್ಟವಾಗುವುದು ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ | Ugadi 2023: ಹಬ್ಬಗಳೆಂಬ ಸಂಭ್ರಮ: ಹೆಚ್ಚು ತಿನ್ನುವುದಕ್ಕೆ ಕಡಿವಾಣ ಹೇಗೆ?

ಇದನ್ನೂ ಓದಿ | Ugadi Horoscope 2023 : ಯುಗಾದಿ ಭವಿಷ್ಯ; ಹೊಸ ಸಂವತ್ಸರದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭಾಶುಭ ಫಲಗಳಿವೆ?

ಬೆಂಗಳೂರಿನ ದೇವಾಲಯಗಳಲ್ಲಿ ವಿಶೇಷ ಪೂಜೆ

ಬೆಂಗಳೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಐತಿಹಾಸಿಕ ಬಸವನಗುಡಿಯ ದೊಡ್ಡ ಗಣೇಶ ಹಾಗೂ ಗವಿಗಂಗಾಧರೇಶ್ವರ ದೇವಸ್ಥಾನ ಸೇರಿ ನಗರದ ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಪೂಜೆಗಳು ನೆರವೇರಿದವು. ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳು ಭಕ್ತರಿಂದ ತುಂಬಿತುಳುಕುತ್ತಿದ್ದವು.

ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆಯಿಂದಲೇ ಸಾವಿರಾರರು ಭಕ್ತರು ಆಗಮಿಸಿ ದರ್ಶನ ಪಡೆದರು. ಯುಗಾದಿ ಹಿನ್ನೆಲೆಯಲ್ಲಿ ದೊಡ್ಡ ಗಣೇಶನಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಇನ್ನು ಗವಿಗಂಗಾಧರೇಶ್ವರ ದೇವಸ್ಥಾನದಲ್ಲೂ ಯುಗಾದಿ ಸಂಭ್ರಮ ಜೋರಾಗಿತ್ತು. ಗವಿ ಗಂಗಾಧರೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಹೋಮ ಹವನ ನೆರವೇರಿಸಲಾಯಿತು. ವರ್ಷಾರಂಭದ ದಿನ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ತ್ರಿವೇಣಿ ಸಂಗಮ ತಿ.ನರಸೀಪುರದಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ

ಮೈಸೂರು: ತ್ರಿವೇಣಿ ಸಂಗಮ ತಿ.ನರಸೀಪುರದಲ್ಲಿ ಯುಗಾದಿ ಸಂಭ್ರಮ ಕಳೆಗಟ್ಟಿತ್ತು. ತ್ರಿವೇಣಿ ಸಂಗಮಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ತ್ರಿವೇಣಿ ಸಂಗಮದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಿ.ನರಸೀಪುರದ ತ್ರಿವೇಣಿ ಸಂಗಮಕ್ಕೆ ಆಗಮಿಸಿದ್ದ ಭಕ್ತರು

ಶಿವಮೊಗ್ಗ ತುಂಗಭದ್ರಾ ಸಂಗಮದಲ್ಲಿ ಪುಣ್ಯ ಸ್ನಾನ

ಶಿವಮೊಗ್ಗದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದಲ್ಲಿರುವ ತುಂಗಭದ್ರಾ ಸಂಗಮದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ಸುತ್ತಮುತ್ತಲ 200 ಗ್ರಾಮಗಳ ಭಕ್ತರು ಪುಣ್ಯ ಸ್ನಾನ ಮಾಡಿದರು. ಗ್ರಾಮ ದೇವರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ತಂದು ಸ್ವಚ್ಛ ಗೊಳಿಸುವ ಸಂಪ್ರದಾಯ ಇಲ್ಲಿದೆ. ಅದರಂತೆ ದೇವರ ಮೂರ್ತಿಗಳನ್ನು ಕರೆತಂದು ಪೂಜಿಸಲಾಯಿತು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಪ್ರಕೃತಿ ನಳನಳಿಸುವ ಸಂಭ್ರಮ, ನಮ್ಮೆಲ್ಲರ ಬದುಕಲ್ಲೂ ಹೊಸ ಯುಗಾರಂಭವೇ ಯುಗಾದಿ

ಇಟಗಿ ಮಹಾದೇವ ದೇಗುಲ, ಕೋಳೂರಿನಲ್ಲಿ ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ

ಕೊಪ್ಪಳ/ ಹಾವೇರಿ: ಯುಗಾದಿ ದಿನದಂದು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಇಟಗಿಯ ಮಹಾದೇವ ದೇವಾಲಯ ಹಾಗೂ ಹಾವೇರಿಯ ಕೋಳೂರು ಕೊಡಗೂಸು ದೇವಸ್ಥಾನದಲ್ಲಿ ಸೂರ್ಯ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿದವು. ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ಬೀಳುವುದನ್ನು ಭಕ್ತರು ಕಣ್ತುಂಬಿಕೊಂಡರು.

ಇಟಗಿ ಮಹಾದೇವ ದೇವಾಲಯ

ಇಟಗಿಯಲ್ಲಿ ಯುಗಾದಿ ದಿನದಂದು ಮಾತ್ರ ಮಹಾದೇವ ದೇವರ ವಿಗ್ರಹದ ಮೇಲೆ ಸೂರ್ಯ ಕಿರಣಗಳು ಬೀಳುವುದು ವಿಶೇಷವಾಗಿದೆ. ದೇವಾಲಯಗಳ ಚಕ್ರವರ್ತಿ ಎಂಬ ಖ್ಯಾತಿ ಹೊಂದಿರುವ ಮಹಾದೇವ ದೇವಾಲಯ ಕಲ್ಯಾಣ ಚಾಲುಕ್ಯರ ಕಾಲದ ಸುಂದರ ದೇವಾಲಯವಾಗಿದೆ. ಯುಗಾದಿ ಮೊದಲ ದಿನ ಮೊದಲ ಸೂರ್ಯ ಕಿರಣ ಬುಧವಾರ ಬೆಳಗ್ಗೆ 6.22 ರಿಂದ 6.25 ರವರೆಗೆ ಮಹಾದೇವ ದೇವರನ್ನು ಸ್ಪರ್ಶಿಸಿತು.

ಇನ್ನೂ ಹಾವೇರಿಯ ಕೋಳೂರು ಗ್ರಾಮದಲ್ಲಿರುವ ಐತಿಹಾಸಿಕ ಶಿವ ದೇವಾಲಯದಲ್ಲಿ ಸೂರ್ಯಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿದವು. ಚಾಲುಕ್ಯರ ಕಾಲದ ಈ ಐತಿಹಾಸಿಕ ದೇಗುಲದ ಶಿವಲಿಂಗದಲ್ಲಿ ಬಾಲೆ ಸತ್ಯಭಾಷಿಣಿ ಐಕ್ಯಳಾಗಿದ್ದಳು. ಅಂದಿನಿಂದ ಕೋಳೂರು ಕೊಡಗೂಸು ಎಂದೆ ಈ ದೇಗುಲ ಖ್ಯಾತಿಯಾಗಿದೆ. ವರ್ಷಕ್ಕೆ ಒಮ್ಮೆ ಮಾತ್ರ ಶಿವಲಿಂಗವನ್ನು ಸೂರ್ಯನ ಕಿರಣಗಳು ಸ್ಪರ್ಶಿಸುವುದು ಇಲ್ಲಿ ವಿಶೇಷವಾಗಿದೆ.

Exit mobile version