ಬೆಂಗಳೂರು: ಹಾಸನ ಟಿಕೆಟ್ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿಯಾಗಿ ಮತ್ತೊಮ್ಮೆ ಮಾತುಕತೆ ನಡೆಸಿದ್ದಾರೆ. ಟಿಕೆಟ್ ಇಲ್ಲ ಎಂಬ ಸಂದೇಶದ ಬಳಿಕವೂ ಪದ್ಮನಾಭ ನಗರದ ದೇವೇಗೌಡರ ನಿವಾಸಕ್ಕೆ ರೇವಣ್ಣ ತೆರಳಿ ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ (Karnataka Election) ಕೊಡಿಸಲು ಪ್ರಯತ್ನಿಸಿದ್ದಾರೆ.
ಹಾಸನ ಟಿಕೆಟ್‌ಗಾಗಿ ಕೊನೆ ಹಂತದಲ್ಲಿ ಕಸರತ್ತು ನಡೆಸಿರುವ ರೇವಣ್ಣ, ದೇವೇಗೌಡರ ಮುಂದೆ ಮತ್ತೊಂದು ದಾಳ ಉರುಳಿಸಿದ್ದಾರೆ. ಪತ್ನಿ ಭವಾನಿಗೆ ಹಾಸನದಲ್ಲಿ ಟಿಕೆಟ್ ನೀಡಬೇಕು, ಇಲ್ಲದಿದ್ದರೆ ಹಾಸನ ಹಾಗೂ ಹೊಳೆನರಸೀಪುರ ಎರಡೂ ಕಡೆ ತಮಗೇ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಸಭೆಯಲ್ಲಿ ಭವಾನಿಗೆ ಟಿಕೆಟ್ ಇಲ್ಲ ಎಂಬ ಸಂದೇಶದ ಬಳಿಕ ರೇವಣ್ಣ ಫ್ಯಾಮಿಲಿ ಬಂಡಾಯದ ಸಂದೇಶ ನೀಡಿತ್ತು. ಹೀಗಾಗಿ ರೇವಣ್ಣ ಜತೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಸಂಧಾನ ಸಭೆ ಕೂಡ ನಡೆಸಿದ್ದರು. ಆದರೆ, ಆ ಸಭೆ ವಿಫಲವಾಗಿತ್ತು. ಆದರೂ ಪಟ್ಟು ಸಡಿಲಿಸದ ರೇವಣ್ಣ ಮತ್ತೊಮ್ಮೆ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ.
ದೇವೆಗೌಡರ ಭೇಟಿ ಬಳಿಕ ಮಾತನಾಡಿದ ಎಚ್.ಡಿ.ರೇವಣ್ಣ, ಬೆಂಗಳೂರಿಗೆ ಬಂದಾಗೆಲ್ಲ ದೇವೆಗೌಡರನ್ನು ಭೇಟಿ ಮಾಡುತ್ತೇನೆ. ಅದರಲ್ಲಿ ಯಾವುದೇ ವಿಶೇಷತೆ ಇಲ್ಲ. ಹಾಸನ ಟಿಕೆಟ್ ವಿಚಾರ ದೇವೆಗೌಡರಿಗೆ ಬಿಟ್ಟದ್ದು. ದೇವೇಗೌಡರ ನಿರ್ಧಾರವೇ ಅಂತಿಮ. ಅವರು ಹೇಗೆ ಹೇಳುತ್ತಾರೋ ಹಾಗೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಶಕುನಿಗಳು ಬ್ರೈನ್‌ವಾಶ್ ಮಾಡಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಎಂದು ಹೇಳಿದರು. ಇದೇ ವೇಳೆ ಎರಡು ಕ್ಷೇತ್ರಗಳಲ್ಲಿ ನಿಲ್ಲುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದರ ಬಗ್ಗೆ ದೇವೇಗೌಡರು ನಿರ್ಣಯ ಮಾಡುತ್ತಾರೆ ಎಂದು ಹೇಳಿದರು.
ಹಾಸನ ಟಿಕೆಟ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವೇಗೌಡರ ಆಶೀರ್ವಾದದಿಂದ 5 ಬಾರಿ ಶಾಸಕನಾಗಿದ್ದೇನೆ. ಈಗ ದೇವೇಗೌಡರು ಏನು ಹೇಳುತ್ತಾರೋ ಅದೇ ಫೈನಲ್. ಭವಾನಿ ಹೆಸರು ಯಾಕೆ ಪದೇಪದೆ ತೆಗೆಯಬೇಕು. ಭವಾನಿ ನಮಗೆ ಮಾವ ಮುಖ್ಯ ಅಂತ ಹೇಳಿದ್ದಾರೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದೇ ಅಂತಿಮ ಅಂತ ಹೇಳಿದ್ದಾರೆ. ಹಾಸನ ರಾಜಕಾರಣ ದೇವೇಗೌಡರಿಗೆ ಚೆನ್ನಾಗಿ ಗೊತ್ತು. ಅವರು ಏನ್ ಹೇಳ್ತಾರೋ ಅದೇ ಫೈನಲ್ ಎಂದರು.
ಇದನ್ನೂ ಓದಿ | Karnataka Election: ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ
ಪಕ್ಷೇತರ ಸ್ಪರ್ಧೆ ಅಂತ ನಾನ್ ಹೇಳಿದ್ದೀನಾ? ನೀವೇ ಅಂದುಕೊಂಡಿರುವುದು, ಪಕ್ಷದಲ್ಲಿ ಯಾವ ಬಂಡಾಯವೂ ಇಲ್ಲ. ಕುಮಾರಸ್ವಾಮಿ, ರೇವಣ್ಣನನ್ನು ಯಾರೂ ಬೇರೆ ಮಾಡಲು ಸಾಧ್ಯವಿಲ್ಲ. ಎಲ್ಲ ದೇವೇಗೌಡರು ಹೇಳಿದಂತೆ ಫೈನಲ್ ಆಗುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಶಿವಲಿಂಗೇಗೌಡರ ವಿರುದ್ಧ ಕಿಡಿಕಾರಿದ ಅವರು, ಹದಿನೈದು ವರ್ಷ ಸಾಕಿದೆ, ಅವನು ರಾಗಿ ಕಳ್ಳ. ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿದ. ಈಗ ಬರಲಿ, ಅವನ ಬಂಡವಾಳ ಬಿಚ್ಚಿಡುತ್ತೇನೆ. ಇನ್ನು ಎ.ಟಿ.ರಾಮಸ್ವಾಮಿಗೆ ಕಾಂಗ್ರೆಸ್‌ನಲ್ಲಿ ಎರಡು ವರ್ಷದಿಂದ ಟಿಕೆಟ್ ಕೊಡುತ್ತೇವೆ ಎಂದು ಹೇಳುತ್ತಿದ್ದರು. ಕೊನೆಗೆ ಕೊಡಲಿಲ್ಲ, ಅದಕ್ಕೆ ಬಿಜೆಪಿಗೆ ಹೋದರು. ದೇವೇಗೌಡರನ್ನು ಬಿಟ್ಟು ಹೋದವರು ಯಾರು ಉದ್ಧಾರ ಆಗಿಲ್ಲ. ಇರಲಿ ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಉತ್ತರ ಕೊಡುತ್ತೇನೆ ಎಂದು ಹೇಳಿದರು.