ಬೆಂಗಳೂರು: ಎಚ್3ಎನ್2 (H3N2 Influenza) ಎಂಬುದು ಶೀತಜ್ವರದ ಹೊಸ ರೂಪಾಂತರಿಯಾಗಿದ್ದು, ರಾಜ್ಯದಲ್ಲಿ ಈವರೆಗೆ 26 ಕೇಸ್‌ಗಳು ಪತ್ತೆ ಆಗಿದ್ದು, ಬೆಂಗಳೂರಿನ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಬೆಂಗಳೂರಲ್ಲಿ ತಿಳಿಸಿದ್ದಾರೆ.
H3N2 ವೈರಸ್ ಭೀತಿ (H3N2 Influenza) ಕುರಿತು ಎಚ್ಚರದಿಂದ ಇರುವಂತೆ ICMR (Indian Council of Medical Research) ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೋಮವಾರ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದ್ದರು.
ಸಭೆ ಬಳಿಕ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ H3N2 ಕೇಸ್‌ಗಳು ಪತ್ತೆ ಆಗಿವೆ. ಇದು ಸಾಂಕ್ರಾಮಿಕವಾಗಿ ಬಹುಬೇಗ ಹರಡಲಿದೆಯಾದರೂ ಹೆಚ್ಚಿನ ಅಪಾಯವನ್ನು ಹೊಂದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕೆಂದು ಆದೇಶಿಸಲಾಗಿದೆ. ಸೋಮವಾರ ಸಂಜೆಯೊಳಗೆ ಹೊಸ ವೈರಸ್ ಸಂಬಂಧ ಮಾರ್ಗಸೂಚಿ ಹೊರಡಿಸುತ್ತೇವೆ ಎಂದಿದ್ದಾರೆ. ಜನವರಿಯಿಂದ ಮಾರ್ಚ್‌ವರೆಗೆ ಎಚ್1ಎನ್1 ನ 20 ಪ್ರಕರಣಗಳು ಪತ್ತೆಯಾಗಿದ್ದರೆ, ಎಚ್3ಎನ್2 ನ 26 ಪ್ರಕರಣ ಪತ್ತೆಯಾಗಿದೆ. ಇನ್‌ಫ್ಲುಯೆಂಜ ಬಿ 10, ಅಡಿನೋ 69 ಪ್ರಕರಣ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
H3N2 ಸೋಂಕಿಗೆ ಆ್ಯಂಟಿ ಬಯೋಟಿಕ್ ಬೇಡ
ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಲಭ್ಯವಿದೆ. ವಾತಾವರಣದ ಬದಲಾವಣೆಯಿಂದ ಜನರ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತಿದೆ. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರ ಸಲಹೆ ಇಲ್ಲದೆ ಯಾವುದೇ ಕಾರಣಕ್ಕೂ ಆ್ಯಂಟಿ ಬಯೋಟಿಕ್ ತೆಗೆದುಕೊಳ್ಳಬೇಡಿ. ಬೇಸಿಗೆ ಕಾಲವಾಗಿರುವುದರಿಂದ ಇದು ಅಪಾಯಕಾರಿಯಾಗಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸಚಿವ ಸುಧಾಕರ್ ಸಲಹೆ ನೀಡಿದ್ದಾರೆ.
ಬಿಸಿಲಿನಲ್ಲಿ ಅನಗತ್ಯ ಓಡಾಟ ಬೇಡ
ವಾತಾವರಣದಲ್ಲಿ ಹಿಟ್ ವೇವ್ ಹೆಚ್ಚಿದ್ದು, ಜನರು ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಟ ಮಾಡುವುದು ನಿಲ್ಲಿಸಬೇಕು. ಮುಖ್ಯವಾಗಿ 11 ರಿಂದ 3 ಗಂಟೆವರೆಗೆ ಬಿಸಿಲಿಗೆ ಹೋಗುವುದು ಕಮ್ಮಿ ಮಾಡಬೇಕು. ಕನಿಷ್ಠ 2-3 ಲೀಟರ್ ನೀರು, ಮಜ್ಜಿಗೆ, ಎಳನೀರು, ಶರಬತ್ ಕುಡಿಯುವುದೊಳಿತು. ದೇಹದಲ್ಲಿ ನೀರು ಕಡಿಮೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಹೊಸ ವೈರಸ್‌ಗೆ ಮಕ್ಕಳು, ಗರ್ಭಿಣಿಯರೇ ಟಾರ್ಗೆಟ್
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದ್ದು, ಜತೆಗೆ ಶಾಲೆಯಲ್ಲಿದ್ದಾಗ ಹಲವರ ಸಂಪರ್ಕಕ್ಕೆ ಬರುತ್ತಾರೆ. ಅದರಲ್ಲೂ 15 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರಿಗೆ ಸುಲಭವಾಗಿ H3N3 ಸೋಂಕು ಹರಡುವ ಸಾಧ್ಯತೆ ಇದೆ. 60 ವರ್ಷ ಮೇಲ್ಪಟ್ಟವರು ರೋಗ ಲಕ್ಷಣದ ಕುರಿತು ಎಚ್ಚರ ವಹಿಸಬೇಕೆಂದು ಸಚಿವರು ಮಾಹಿತಿ ನೀಡಿದ್ದಾರೆ. ಈ ಸೋಂಕು ಬಂದರೆ 2-5 ದಿನದೊಳಗೆ ನಿವಾರಣೆಯಾಗುತ್ತದೆ. ಕೋವಿಡ್‌ಗೊಳಗಾದವರಿಗೆ ಸೋಂಕು ಬಂದರೆ ಹೆಚ್ಚು ಕೆಮ್ಮು ಇರುತ್ತದೆ. ಬೆಂಗಳೂರಿನಲ್ಲಿ ಈ ಸೋಂಕಿನ ಎರಡು ಪ್ರಕರಣಗಳು ಕಂಡುಬಂದಿವೆ ಎಂದರು.
ಇನ್‌ಫ್ಲುಯೆಂಜಗೆ ಪ್ರತಿ ವರ್ಷ ಲಸಿಕೆ
ಇನ್‌ಫ್ಲುಯೆಂಜಗೆ ಪ್ರತಿ ವರ್ಷ ಲಸಿಕೆ ನೀಡುತ್ತಿದ್ದು, ಇದನ್ನು ಎಲ್ಲಾ ಆರೋಗ್ಯ ಸಿಬ್ಬಂದಿ ಪಡೆಯಲು ಲಿಖಿತ ಸೂಚನೆ ನೀಡಲಾಗುವುದು. ಐಸಿಯುನಲ್ಲಿ ಕೆಲಸ ಮಾಡುವವರು ಸೇರಿದಂತೆ ಕೆಲ ನಿರ್ದಿಷ್ಟ ವೈದ್ಯರು, ಸಿಬ್ಬಂದಿಗೆ ಸರ್ಕಾರದಿಂದಲೇ ಲಸಿಕೆ ನೀಡಲಾಗುವುದು. 2019 ರವರೆಗೆ ಈ ಲಸಿಕೆ ನೀಡಲಾಗುತ್ತಿತ್ತು. ಕೋವಿಡ್ ಬಂದ ಬಳಿಕ ನೀಡಿಲ್ಲ. ಈಗ ಮತ್ತೆ ಅದನ್ನು 31 ಜಿಲ್ಲೆಗಳಲ್ಲಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರತಿ ವಾರ ಪರೀಕ್ಷೆ
ಪ್ರತಿ ವಾರ 25 ಪರೀಕ್ಷೆ ಮಾಡಬೇಕೆಂದು ಕೇಂದ್ರ ಸರ್ಕಾರ ಗುರಿ ನೀಡಿದೆ. ಬೆಂಗಳೂರಿನ ವಿಕ್ಟೋರಿಯಾ ಹಾಗೂ ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ಸಾರಿ ಹಾಗೂ ಐಎಲ್‌ಐ ಪ್ರಕರಣಗಳ ಪೈಕಿ 25 ಮಂದಿಗೆ ಈ ಪರೀಕ್ಷೆ ಮಾಡಿ ಯಾವ ಪ್ರಭೇದದ ವೈರಾಣು ಎಂದು ಪತ್ತೆ ಮಾಡಲಾಗುವುದು ಎಂದರು.
ದರ ನಿಯಂತ್ರಣಕ್ಕೆ ಸಮಿತಿ
ಹೊಸ ಸೋಂಕು ಪರೀಕ್ಷೆಯ ದರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಮಿತಿ ರಚಿಸಲು ಸೂಚಿಸಲಾಗಿದೆ. ಕಡಿಮೆ ದರದಲ್ಲಿ ಪರೀಕ್ಷೆ ಮಾಡುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಪರೀಕ್ಷೆಗೆ ದರ ನಿಗದಿ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.
ಅಪಾಯಕಾರಿ ವೈರಸ್ ಅಲ್ಲ- ಡಾ ಸುದರ್ಶನ್
ಸಭೆ ಬಳಿಕ ಆರೋಗ್ಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ಸೋಂಕು ಕಡಿಮೆಯಾದ ಬಳಿಕ H3N2 ಸೋಂಕು ಕಂಡು ಬರುತ್ತಿದೆ. ಕೊರೊನಾದಂತೆ ಈ ರೂಪಾಂತರಿ ಅಪಾಯಕಾರಿಯಲ್ಲ. ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಜನರು ಮುಂಜಾಗ್ರತೆ ವಹಿಸಬೇಕು. ಸದ್ಯಕ್ಕೆ H3N2 ಸೋಂಕಿಗೆ ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗಬಹುದು. ಕೋವಿಡ್‌ನಂತೆ H3N2 ಕೆಲ ಲಕ್ಷಣ ಹೊಂದಿರುತ್ತದೆ. ಹೀಗಾಗಿ ಮಕ್ಕಳು, ಗರ್ಭಿಣಿಯರು, ಹಿರಿಯರು ಹೆಚ್ಚು ಕಾಳಜಿ ವಹಿಸಬೇಕು.
H3N2 ಲಕ್ಷಣಗಳು ಏನು?
ದೀರ್ಘಕಾಲದ ಕೆಮ್ಮು, ವಾಕರಿಕೆ, ವಾಂತಿ, ಗಂಟಲು ನೋವು ಹಾಗೂ ಸ್ನಾಯು ಸೆಳೆತ ಕಂಡು ಬರುತ್ತದೆ.
ಇದನ್ನೂ ಓದಿ: Suicide Case: ಪತಿಯಿಂದ ವರದಕ್ಷಿಣೆ ಕಿರುಕುಳ; ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ
ಸುರಕ್ಷತೆ ಹೇಗಿರಬೇಕು?
- ಆಗಾಗ ಕೈಗಳನ್ನು ತೊಳೆಯಬೇಕು
- ಮಾಸ್ಕ್ ಧರಿಸಿ, ಜನ ಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ
- ಪದೇ ಪದೇ ಮೂಗು, ಬಾಯಿ ಮುಟ್ಟಬೇಡಿ
- ನೀರನ್ನು ಜಾಸ್ತಿ ಸೇವಿಸಿ
- ಜ್ವರ, ಮೈ-ಕೈ ನೋವು ಇದ್ದರೆ ನಿರ್ಲಕ್ಷ್ಯ ಮಾಡದೇ ವೈದ್ಯರ ತಪಾಸಣೆ ಮಾಡಿಸಿ
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ