Site icon Vistara News

Halal Boycott | ಹಲಾಲ್‌ ಮಾರ್ಕ್‌ ಇರುವ ವಸ್ತುಗಳ ಖರೀದಿ ವಿರುದ್ಧ ಜಾಗೃತಿ, ಮೆಕ್‌ಡೊನಾಲ್ಡ್‌, ಕೆಎಫ್‌ಸಿ ಎದುರು ಪ್ರತಿಭಟನೆ

halal mukt deepavali

ಬೆಂಗಳೂರು: ರಾಜ್ಯದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆರಂಭಿರುವ ಹಲಾಲ್‌ ಮುಕ್ತ ದೀಪಾವಳಿ ಅಭಿಯಾನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಸ್ಲಾಮಿಕ್‌ ನಿಯಮಗಳಂತೆ ಸಿದ್ಧಪಡಿಸಿರುವ ಹಲಾಲ್‌ ಮಾರ್ಕ್‌ ಹೊಂದಿರುವ ಮಾಂಸ ಮತ್ತು ಇತರ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಧಾನ ಉದ್ದೇಶ. ಈ ನಿಟ್ಟಿನಲ್ಲಿ ಹಲವು ಸಂಘಟನೆಗಳು ಕೈ ಜೋಡಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ, ಅಭಿಯಾನಗಳು ನಡೆಯುತ್ತಿವೆ. ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್‌ ಮುತಾಲಿಕ್‌ ಕೂಡಾ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಹಲಾಲ್‌ ಎನ್ನುವುದು ಕೇವಲ ಮುಸ್ಲಿಮರಿಗೆ ಸೀಮಿತವಾಗಿರುವ ಆಚರಣೆ, ಅದನ್ನು ಹಿಂದುಗಳ ಮೇಲೆ ಹೇರಲಾಗುತ್ತಿದೆ. ಈ ಹೇರಿಕೆಯು ಹಿಂದೂಗಳ ಮೇಲಿನ ದಬ್ಬಾಳಿಕೆ ಮಾತ್ರವಲ್ಲ, ಅಪಮಾನವೂ ಹೌದು. ಹೀಗಾಗಿ ಹಲಾಲ್‌ ಮಾರ್ಕ್‌ ಇರುವ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದು ಎನ್ನುವುದು ಆಗ್ರಹ. ಈ ನಡುವೆ, ದೀಪಾವಳಿ ಹಬ್ಬಕ್ಕೆ ಮುಸ್ಲಿಮರ ಅಂಗಡಿಗಳಿಂದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಾರದು ಎಂಬ ಆಗ್ರಹವೂ ಕೇಳಿಬಂದಿದೆ.

ಕೆಎಫ್‌ಸಿ, ಮೆಕ್‌ಡೊನಾಲ್ಡ್‌ ಮುಂದೆ ಜಾಗೃತಿ
ಹಿಂದೂ ಜನಜಾಗೃತಿ ವೇದಿಕೆ ವತಿಯಿಂದ ಬೆಂಗಳೂರಿನ ಮೆಕ್‌ಡೊನಾಲ್ಡ್‌ ಮತ್ತು ಕೆಎಫ್‌ಸಿ ಮಳಿಗೆಗಳಿಗೆ ತೆರಳಿ ಹಲಾಲ್‌ ಮಾಡಿದ ಮಾಂಸ ಮಾರಾಟದ ವಿರುದ್ಧ ಎಚ್ಚರಿಕೆ ನೀಡಿದರು. ಈ ಸಂಸ್ಥೆಗಳ ರೆಸ್ಟೋರೆಂಟ್‌ಗಳಲ್ಲಿ ತಮ್ಮಲ್ಲಿ ಮಾರಾಟ ಮಾಡುವ ಆಹಾರ ವಸ್ತುಗಳಲ್ಲಿ ಬಳಸುವ ಮಾಂಸವನ್ನು ಹಲಾಲ್‌ ಮಾಡಲಾಗಿದೆ ಎಂದು ಅಧಿಕೃತ ಪ್ರಮಾಣಪತ್ರವನ್ನೇ ಇಡಲಾಗಿರುತ್ತದೆ.

ಕೆಎಫ್‌ಸಿ ಮತ್ತು ಮೆಕ್‌ಡೊನಾಲ್ಡ್‌ ಮಳಿಗೆಗಳಿಗೆ ಹೋಗಿ ಜಾಗೃತಿ ಮೂಡಿಸಲಾಯಿತು.

ಮಂಗಳವಾರ ಬಸವೇಶ್ವರ ನಗರದ ಮೆಕ್‌ಡೊನಾಲ್ಡ್‌ ಮಳಿಗೆಗೆ ಭೇಟಿ ನೀಡಿ ಹಲಾಲ್‌ ಮಾಡಿದ ಆಹಾರ ವಸ್ತುಗಳನ್ನು ಮಾರಾಟ ಮಾಡದಂತೆ ಮನವಿ ಮಾಡಿದರು. ಜತೆಗೆ ಅಲ್ಲಿಗೆ ಬರುವ ಗ್ರಾಹಕರು, ಸಾರ್ವಜನಿಕರಿಗೆ ಯಾವ ಕಾರಣಕ್ಕೂ ಹಲಾಲ್‌ ಮಾಡಿದ ಆಹಾರ ವಸ್ತುಗಳನ್ನು ಹಿಂದುಗಳು ಬಳಸಬಾರದು ಎಂದು ಮನವಿ ಮಾಡಿದರು. ಈ ಪ್ರತಿಭಟನೆಯ ಪ್ರಭಾವ ಎಷ್ಟಿತ್ತೆಂದರೆ ಸ್ವಲ್ಪ ಹೊತ್ತಿನಲ್ಲಿ ಈ ಮಳಿಗೆಯನ್ನೇ ಅಲ್ಪ ಕಾಲ ಮುಚ್ಚಲಾಯಿತು. ಸಿಬ್ಬಂದಿಯೂ ಹೊರಗೆ ಬಂದು ನಿಂತಿದ್ದರು. ಮುಂಜಾಗೃತಾ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಕಳೆದ ಬಾರಿಯೂ ನಡೆದಿತ್ತು ಅಭಿಯಾನ
ಹಿಂದೂ ಜಾಗೃತಿ ಜನಜಾಗೃತಿ ವೇದಿಕೆಯು ಕಳೆದ ಬಾರಿಯೂ ಇದೇ ರೀತಿಯ ಅಭಿಯಾನವನ್ನು ಹಮ್ಮಿಕೊಂಡಿತ್ತು. ಹಲಾಲ್‌ ಮುಕ್ತ ದೀಪಾವಳಿ ಅಭಿಯಾನ ಸಾಕಷ್ಟು ಯಶಸ್ಸು ಕಂಡಿತ್ತು. ಈ ಬಾರಿಯೂ ಮನೆ ಮನೆಗೆ ತೆರಳಿ ಹಲಾಲ್‌ ಮುಕ್ತ ದೀಪಾವಳಿ ಆಚರಣೆ ಮಾಡುವಂತೆ ಮನವಿ ಮಾಡಲಾಯಿತು. ಹಿಂದೂಗಳಿಂದ ಖರೀದಿ ಮಾಡಿದ ವಸ್ತುಗಳಿಂದ ಮಾಡಿದ ಮಾತ್ರ ದೀಪಾವಳಿ ಪೂಜೆ ನಡೆಸಿ ಎಂದು ಜಾಗೃತಿ ಮೂಡಿಸಲಾಯಿತು.

ಇದರ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ, ಭಿತ್ತಿಪತ್ರಗಳನ್ನು ಹಂಚುವುದು, ಹೋಟೆಲ್ ಮಾಲೀಕರೊಂದಿಗೆ ಸಭೆ, ದೇವಾಲಯಗಳಿಗೆ ಹೋಗಿ ಜಾಗೃತಿ ಮೂಡಿಸುವ ಕೆಲಸಗಳನ್ನು ಸಂಘಟನೆ ಮಾಡುತ್ತಿದೆ.

ಪ್ರಮೋದ್‌ ಮುತಾಲಿಕ್‌ ಹೇಳಿದ್ದೇನು?
‘ಪ್ರಸ್ತುತ ದೀಪಾವಳಿ ಸಂದರ್ಭದಲ್ಲಿ ಹಲಾಲ್ ಗುರುತು ಇರುವ ವಸ್ತುಗಳನ್ನು ನಿರಾಕರಿಸಿ ಹಲಾಲ್ ಮುಕ್ತ ದೀಪಾವಳಿ ಹಬ್ಬ ಆಚರಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ʻʻಹಲಾಲ್‌ ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಗೆ ವಿರೋಧ. ಹಿಂದೂ ವ್ಯಾಪಾರಸ್ಥರಿಂದಲೇ ಖರೀದಿಸಿ ಶಾಸ್ತ್ರೋಕ್ತವಾಗಿ ಹಬ್ಬ ಆಚರಿಸಬೇಕುʼʼ ಎಂದು ಹೇಳಿದ್ದಾರೆ.

ʻʻಹಲಾಲ್ ಪ್ರಮಾಣ ಪತ್ರಕ್ಕೆ ಸರ್ಕಾರದಿಂದ ಮಾನ್ಯತೆಯಿಲ್ಲ. ಆದರೂ ಜಮಾತ್ ಉಲೇಮಾ ಹಿಂದ್ ಹಲಾಲ್ ಟ್ರಸ್ಟ್ ಸೇರಿದಂತೆ ಕೆಲವು ಸಂಘಟನೆಗಳು ಔಷಧಿ, ಆಹಾರೋತ್ಪನ್ನ ಹಾಗೂ ಇನ್ನಿತರ ವಸ್ತುಗಳ ಮೇಲೆ ಹಲಾಲ್ ಗುರುತು ಹಾಕಲು‌ ಪ್ರಮಾಣ ಪತ್ರ ನೀಡುತ್ತಿದೆʼʼ ಎಂದಿದ್ದಾರೆ.

ʻʻಹಲಾಲ್ ಉತ್ಪನ್ನದಿಂದ ಬರುವ ಆದಾಯ ಜಗತ್ತಿನಲ್ಲಿಯೇ ಆತಂಕ ಸೃಷ್ಟಿಸಿದೆ. ಅದರಿಂದ ಬಂದ ಹಣವನ್ನು ಭಯೋತ್ಪಾದನೆಗೆ ಹಾಗೂ ದೇಶದ್ರೋಹಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಹುಬ್ಬಳ್ಳಿ ಗಲಭೆಗೆ, ಕೆಜಿ ಹಳ್ಳಿ ಧಂಗೆಗೂ ಅಲ್ಲಿಂದಲೇ ಹಣ ಬಂದಿದೆ’ ಎಂದು ಮುತಾಲಿಕ್‌ ಆರೋಪಿಸಿದ್ದಾರೆ.

Exit mobile version