Site icon Vistara News

ಸಿದ್ದರಾಮಯ್ಯ ಕಾರ್ಯಕ್ರಮಕ್ಕಾಗಿ ಹಂಪಿ ದೇಗುಲಕ್ಕೆ ಮೊಳೆ; ರಾಜ್ಯ ಸರ್ಕಾರಕ್ಕೆ ಎಎಸ್‌ಐ ನೋಟಿಸ್

Hampi Virupaksha Temple

Hampi pillar disfigured for CM Siddaramaiah’s function, notice slapped by ASI

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ (Hampi Virupaksha Temple) ಕಂಬಗಳಿಗೆ ಮೊಳೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ದತ್ತಿ ಇಲಾಖೆಗೆ (Endowment Department) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನೋಟಿಸ್‌ ನೀಡಿದೆ. ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಕಂಬಗಳಿಗೆ ಮೊಳೆ ಹೊಡೆದ ಫೋಟೊಗಳು ವೈರಲ್‌ ಆದ ಬೆನ್ನಲ್ಲೇ ಎಎಸ್‌ಐ ನೋಟಿಸ್ ಜಾರಿಗೊಳಿಸಿದೆ.

ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಕನ್ನಡ ಜ್ಯೋತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಹಂಪಿಗೆ ತೆರಳಿದ್ದರು. ಇದೇ ವೇಳೆ ಧ್ವಜ ಕಟ್ಟಲು ವಿರೂಪಾಕ್ಷ ದೇವಾಲಯದ ಕಂಬಕ್ಕೆ ಮೊಳೆ ಹೊಡೆಯಲಾಗಿತ್ತು. ಡ್ರಿಲ್‌ನಿಂದ ಕೊರೆದು, ಕಂಬಕ್ಕೆ ಮೊಳೆ ಹೊಡೆಯಲಾಗಿತ್ತು. ದತ್ತಿ ಇಲಾಖೆಯಿಂದಲೇ ಮೊಳೆ ಹೊಡೆಸಲಾಗಿತ್ತು. ಆದರೆ, ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪುರಾತತ್ವ ಇಲಾಖೆಯು ದತ್ತಿ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿದೆ.

ದತ್ತಿ ಇಲಾಖೆಗೆ ಎಎಸ್‌ಐ ನೋಟಿಸ್

ದೇವಾಲಯದ ಉತ್ತರ ದಿಕ್ಕಿನಲ್ಲಿ ಗೇಟ್‌ ಕೂರಿಸಲು, ಭಕ್ತರು ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಬೇಕು ಎಂದು ದತ್ತಿ ಇಲಾಖೆಯಿಂದ ಮೊಳೆ ಹೊಡೆಯಲಾಗಿದೆ ಎಂದು ತಿಳಿದುಬಂದಿದೆ. ಮೊಳೆ ಹೊಡೆಯುವ ಮುನ್ನ ದತ್ತಿ ಇಲಾಖೆಯು ಪುರಾತತ್ವ ಇಲಾಖೆಯ ಅನುಮತಿ ಕೂಡ ಪಡೆದಿಲ್ಲ, ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ, ಹಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದತ್ತಿ ಇಲಾಖೆಯ ಅಧಿಕಾರಿಯನ್ನು ಕರೆಸಿ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಎಎಸ್‌ಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Hampi tourism: ಹಂಪಿ ಗ್ರಾಮ ಪಂಚಾಯತ್‌ಗೆ ಕೇಂದ್ರದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಪ್ರಶಸ್ತಿ

“ಹಂಪಿ ದೇವಾಲಯದ ಕಂಬವನ್ನು ವಿರೂಪಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ದೇವಾಲಯದ ಕಂಬಗಳಿಗೆ ಹಾನಿ ಮಾಡಿರುವ ಫೋಟೊಗಳನ್ನು ದಾಖಲೆಯಾಗಿ ಪರಿಗಣಿಸಲಾಗಿದೆ. ಹಂಪಿಯು ಯುನೆಸ್ಕೋ ಪಾರಂಪರಿಕ ತಾಣದ ಮಾನ್ಯತೆ ಪಡೆದಿದ್ದು, ಇದಕ್ಕೆ ಹಾನಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. 1986ರಲ್ಲಿಯೇ ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version