Site icon Vistara News

Hampi utsav 2023: ವೈಭವದ ಹಂಪಿ ಉತ್ಸವಕ್ಕೆ ಇಂದು ಮುಖ್ಯಮಂತ್ರಿ ಚಾಲನೆ

hampi utsav 2023

hampi utsav 2023

ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಂಜೆ 6 ಗಂಟೆಗೆ ಚಾಲನೆ ನೀಡಲಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಕಲೆ, ವಾಸ್ತುಶಿಲ್ಪ, ಸಾಹಿತ್ಯದ ಇತಿಹಾಸ ಸಾರುವ ಹಂಪಿ ಉತ್ಸವ ಇಂದಿನಿಂದ ಮೂರು ದಿನಗಳ ಕಾಲ (ಜ.27, 28 ಹಾಗೂ 29) ನಡೆಯಲಿದೆ. ಕೊರೊನಾ ಬಳಿಕ ನಡೆಯುತ್ತಿರುವ ಮೊದಲ ಹಂಪಿ ಉತ್ಸವ ಇದಾಗಿದೆ. ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಯವರು ಹಂಪಿಯಲ್ಲಿ ಠಿಕಾಣಿ ಹೂಡಿ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಹಂಪಿ ಬೈ ಸ್ಕೈ, ಸೌಂಡ್ ಆಂಡ್ ಲೈಟ್ಸ್ ಸೇರಿದಂತೆ ಸಾಹಸ ಕ್ರೀಡೆಗಳು, ಜಲ ಕ್ರೀಡೆಗಳು, ಕುಸ್ತಿ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಸೌಂಡ ಆಂಡ್ ಲೈಟ್ಸ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಕುರಿತು ವಿಶೇಷ ಕಾರ್ಯಕ್ರಮ ಗಮನ ಸೆಳೆಯಲಿದೆ. ಹಾಲಿವುಡ್, ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಆಗಮಿಸಿ ಸಂಗೀತದ ರಸದೌತಣ ಉಣಬಡಿಸಲಿದ್ದಾರೆ. ಖ್ಯಾತ ಸಂಗೀತಗಾರರಾದ ಕೈಲಾಶ್ ಕೇರ್, ಅರ್ಮಾನ್ ಮಲೀಕ್, ಅಂಕಿತ್ ತೀವಾರಿ ಆಗಮಿಸಲಿದ್ದಾರೆ. ಹಾಗೆಯೇ ಕನ್ನಡದ ಖ್ಯಾತ ಸಂಗೀತಗಾರರಾದ ಅರ್ಜುನ್ ಜನ್ಯ, ರಘು ದೀಕ್ಷಿತ್, ವಿಜಯ್ ಪ್ರಕಾಶ್ ಸೇರಿದಂತೆ ಅನೇಕ ಕಲಾವಿದರಿಂದ ಸಂಗೀತ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ಹಂಪಿ ಉತ್ಸವಕ್ಕಾಗಿ ನಾಲ್ಕು ವೇದಿಕೆಗಳ ನಿರ್ಮಾಣ ಮಾಡಲಾಗಿದೆ. ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆ, ಎದುರಿನ ಬಸವಣ್ಣ, ವಿರೂಪಾಕ್ಷ ದೇಗುಲ, ಸಾಸಿವೆಕಾಳು ಗಣಪ ದೇಗುಲ ಬಳಿ ಒಂದೊಂದು ವೇದಿಕೆ ನಿರ್ಮಿಸಲಾಗಿದೆ. ಈ ಬಾರಿಯ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ವಿಶೇಷ ಕಾರ್ಯಕ್ರಮಗಳ ವಿವರ

ಹಂಪಿ ಬೈ ಸ್ಕೈ: ಬೆಳಿಗ್ಗೆ 10 ಗಂಟೆಯಿಂದ ಕಮಲಾಪುರದ ಹೋಟಲ್ ಮಯೂರ ಭುವನೇಶ್ವರಿ ಆವರಣದಿಂದ ಆರಂಭವಾಗುತ್ತದೆ.

ಫಲಪುಷ್ಪ ಪ್ರದರ್ಶನ: ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ನಡೆಯಲಿದೆ.

ಆಹಾರ ಮೇಳ: ಮುಖ್ಯ ವೇದಿಕೆ ಗಾಯತ್ರಿ ಪೀಠ ಹಾಗೂ ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದ ಹತ್ತಿರ ನಡೆಯಲಿದೆ.

ಕೃಷಿ, ಕರಕುಶಲ, ಕೈಗಾರಿಕೆ ಹಾಗೂ ಪುಸ್ತಕ ಪ್ರದರ್ಶನ: ಹಂಪಿ ಗ್ರಾಮ ಪಂಚಾಯತಿ ಮುಂಭಾಗದ ಮಾತಂಗ ಪರ್ವತ ಮೈದಾನದಲ್ಲಿ ನಡೆಯಲಿವೆ.

ಗ್ರಾಮೀಣ ಕ್ರೀಡೆಗಳು (ಕುಸ್ತಿ, ಗುಂಡು/ಚೀಲ ಎತ್ತುವುದು ಹಾಗೂ ಇತರೆ ಕ್ರೀಡೆಗಳು): ಹೊಸ ಮಲಪನಗುಡಿ ಗ್ರಾಮದ ವಿದ್ಯಾರಣ್ಯ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಯಲಿವೆ.

ಸಾಹಸ ಕ್ರೀಡೆಗಳು: ಸಾಸಿವೆ ಕಾಳು ಗಣಪತಿ ಮಂಟಪದ ಮುಂಭಾಗದಲ್ಲಿ ನಡೆಯಲಿವೆ.

ಧ್ವನಿ ಮತ್ತು ಬೆಳಕು ಪ್ರದರ್ಶನ: ಸಂಜೆ 7 ಗಂಟೆಗೆ ಕಮಲಮಹಲ್ ಸಮೀಪದ ಗಜಶಾಲೆ ಆವರಣದಲ್ಲಿ ನಡೆಯಲಿದೆ.

ಜಲ ಕ್ರೀಡೆಗಳು : ಕಮಲಾಪುರ ಕೆರೆಯಲ್ಲಿ ನಡೆಯಲಿವೆ.

Exit mobile version