Site icon Vistara News

Hampi Utsav 2024: ಹಂಪಿ ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

Cm Siddaramaiah inaugurates Hampi Utsav

ಹೊಸಪೇಟೆ: ವಿಜಯನಗರ ಸಾಮಾಜ್ಯದ ಗತವೈಭವ ಸಾರುವ ʼಹಂಪಿ ಉತ್ಸವʼಕ್ಕೆ (Hampi Utsav 2024) ಶುಕ್ರವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮೂರು ದಿನಗಳ ಉತ್ಸವದಲ್ಲಿ ಏಕಕಾಲದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಂಪಿ ಉತ್ಸವ ವೀಕ್ಷಣೆಗಾಗಿ ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸಿದ್ದರು.

ಇದೇ ವೇಳೆ ಹಂಪಿಯ ಆನೆಲಾಯದ ಬಳಿ ಏರ್ಪಡಿಸಿರುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ವೇದಿಕೆಯಲ್ಲಿ ಸಿಎಂ ಚಾಲನೆ ನೀಡಿದರು. ವಿಜಯನಗರ ಸಾಮ್ರಾಜ್ಯದ ವೈಭವ ಬಿಂಬಿಸುವ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ ಫೆ. 8 ರವರೆಗೆ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌, ಸಚಿವ ಬಿ. ನಾಗೇಂದ್ರ, ಪದ್ಮಶ್ರೀ ಮಂಜಮ್ಮ ಜೋಗತಿ, ಹೊಸಪೇಟೆ ಶಾಸಕ ಗವಿಯಪ್ಪ, ಬಳ್ಳಾರಿ ಶಾಸಕ ನಾರಾ ಭರತ್‌ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ನೇಮಿರಾಜ ನಾಯ್ಕ, ಕೆ. ರಾಘವೇಂದ್ರ ಹಿಟ್ನಾಳ್, ಎನ್.ಟಿ. ಶ್ರೀನಿವಾಸ, ಕೃಷ್ಣಾ ನಾಯಕ್, ಎಂ.ಪಿ. ಲತಾ ಮಲ್ಲಿಕಾರ್ಜುನ್, ಪಿ. ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಮೂರು ದಿನಗಳ (ಫೆಬ್ರವರಿ 2, 3 ಮತ್ತು 4 ರಂದು) ಹಂಪಿ ಉತ್ಸವದ ಭಾಗವಾಗಿ ಗ್ರಾಮೀಣ ಕ್ರೀಡೆಗಳು, ರಂಗೋಲಿ ಸ್ಪರ್ಧೆಗಳು, ಸಂಗೀತ, ಸಾಹಸ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಏಕಕಾಲದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಾಲ್ಕು ದೊಡ್ಡ ವೇದಿಕೆಗಳನ್ನು ರಚಿಸಲಾಗಿದೆ. ಹಂಪಿ ಉತ್ಸವದಲ್ಲಿ ನಡೆಯುವ ಗಾಯನ, ಸಂಗೀತ, ನೃತ್ಯ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಗಾಯಕರು, ಸಂಗೀತಗಾರರು ಸೇರಿ ವಿವಿಧ ಕಲಾವಿದರು ಭಾಗವಹಿಸಲಿದ್ದಾರೆ. ಪ್ರತಿಭೆ ಪ್ರದರ್ಶಿಸಲು ವಿವಿಧ ಸಾಂಸ್ಕೃತಿಕ ತಂಡಗಳನ್ನು ನಿಯೋಜಿಸಲಾಗಿದೆ. ಹೊಸಪೇಟೆಯ ರಸ್ತೆಗಳಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.

ಇದನ್ನೂ ಓದಿ | Sadguru Column : ಬದುಕಿನಲ್ಲಿ ಆಟವಾಡುವುದರ ಮಹತ್ವ ತುಂಬ ದೊಡ್ಡದು

ರಾಸುಗಳ ಪ್ರದರ್ಶನಕ್ಕೆ ಚಾಲನೆ ನೀಡಿದ ಸಚಿವ ಜಮೀರ್ ಅಹ್ಮದ್

ಹಂಪಿ ಉತ್ಸವದ ಭಾಗವಾಗಿ ಆಯೋಜಿಸಿರುವ ಆಕರ್ಷಕ ರಾಸುಗಳ ಪ್ರದರ್ಶನಕ್ಕೆ ಸಚಿವ ಜಮೀರ್ ಅಹ್ಮದ್ ಅವರು ಶುಕ್ರವಾರ ಮಧ್ಯಾಹ್ನ ಚಾಲನೆ ನೀಡಿದರು. ಹಂಪಿಯ ಹವಾಮಾ ಕಚೇರಿ ಹಿಂಭಾಗದಲ್ಲಿ ವಿಜಯನಗರ ಜಿಲ್ಲಾಡಳಿತ, ಪಶುಸಂಗೋಪನೆ ಇಲಾಖೆಯಿಂದ ಅತ್ಯುತ್ತಮ ತಳಿಯ 50 ಜೋಡಿ ರಾಸುಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಕಿಲಾರಿ, ಅಮೃತ್ ಮಹಲ್ ತಳಿಯ ರಾಸುಗಳ ಪ್ರದರ್ಶನ ನಡೆಯಿತು. ವಿದೇಶಿ ಪ್ರಜೆಗಳೂ ರಾಸುಗಳ ಪ್ರದರ್ಶನ ಕಣ್ತುಂಬಿಕೊಂಡು, ಫೋಟೊ ಸೆರೆಹಿಡಿದುಕೊಂಡರು.ಪ್ರದರ್ಶನದಲ್ಲಿ ಮೊದಲ ಬಹುಮಾನ ಪಡೆದ ರಾಸುಗಳ ಜೋಡಿಗೆ 50,000 ರೂ. ನಗದನ್ನು ಜಮೀರ್ ನೀಡಿದರು.

ಸಾವಯವ ಮತ್ತು ಸಿರಿಧಾನ್ಯಗಳ ವಸ್ತು ಪ್ರದರ್ಶನ

ಕೃಷಿ ಇಲಾಖೆಯಿಂದ ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಏರ್ಪಡಿಸಿದ್ದ ಸಾವಯವ ಮತ್ತು ಸಿರಿಧಾನ್ಯಗಳ ವಸ್ತು ಪ್ರದರ್ಶನವು ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು.

ಇದಕ್ಕೂ ಮುನ್ನಾ ವಸಂತ ವೈಭವ ಮೆರವಣಿಗೆಗೆ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಚಾಲನೆ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಹಂಪಿ ಉತ್ಸವಕ್ಕೆ ಮೆರಗು ನೀಡಿದವು.

ಹೆಲಿ ರೈಡ್ ವ್ಯವಸ್ಥೆ

ವಿಜಯನಗರ ಸಾಮ್ರಾಜ್ಯದ ಕುರುಹುಗಳನ್ನು ಆಕಾಶದಿಂದ ನೋಡಿ ಆನಂದಿಸಲು ಇಚ್ಛಿಸುವ ಪ್ರವಾಸಿಗರಿಗೆ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪ್ರಯಾಣಿಕರಿಗೆ 4,229 ರೂ. ಟಿಕೆಟ್ ನಿಗದಿಪಡಿಸಲಾಗಿದೆ. ಹೆಲಿಕಾಪ್ಟ‌ರ್ ರೈಡ್‌ಗೆ ಪ್ರತಿ ಬಾರಿ ಐದರಿಂದ ಆರು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇನ್ನು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಹೊಸಪೇಟೆಯಿಂದ ಸಮೀಪದ ಹಳ್ಳಿಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ವಿಶೇಷ ಬಸ್‌ ಸೇವೆ ಪ್ರಾರಂಭಿಸಿದೆ.

ಪೊಲೀಸ್‌ ಬಿಗಿ ಬಂದೋಬಸ್ತ್‌

ಹಂಪಿ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್‌ ಏರ್ಪಡಿಸಿದ್ದು, ಭದ್ರತೆಗಾಗಿ 2,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ನಾಲ್ಕು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು,, ಎಂಟು ಡಿಎಸ್.ಪಿ, ನಾಲ್ಕು ಎಎಸ್‌ಪಿ, 33 ಪಿಎಸ್ಐ, ನಾಲ್ಕು ಸಬ್ ಇನ್‌ಸ್ಪೆಕ್ಟರ್‌, 170 ಜನ ಅಸಿಸ್ಟೆಂಟ್ ಇನ್‌ಸ್ಪೆಕ್ಟರ್‌, 914 ಕಾನ್‌ಸ್ಟೇಬಲ್, 100 ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಜತೆಗೆ ಹಂಪಿಯ ವಿವಿಧ ಭಾಗಗಳಲ್ಲಿ 500 ಜನ ಹೋಮ್‌ ಗಾರ್ಡ್‌ಗಳ ನೇಮಕ ಮಾಡಲಾಗಿದ್ದು, ನಾಲ್ಕು KSRP ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | ದಶಮುಖ ಅಂಕಣ: ಬಾಗಿಲನು ತೆರೆದು…

2 ಜಿಲ್ಲಾ ಆರ್ಮಿ ತಂಡ, ಡಾಗ್ ಸ್ಕ್ವಾಡ್ ಕೂಡ ಕಾರ್ಯನಿರ್ವಹಣೆ ಮಾಡಲಿದ್ದು, ಎಮರ್ಜೆನ್ಸಿ ರೆಸ್ಪಾನ್ಸ್ 112 ಹೆಲ್ಪ್‌ಲೈನ್ ಕರೆ ಮಾಡಲು ಐದು ಕಡೆಗೆ ಜಾಗ ಗುರುತು‌ ಮಾಡಲಾಗಿದ್ದು, ಹಂಪಿ, ಮಕಲಾಪೂರ ಭಾಗದ 19 ಕಡೆ ಪಾರ್ಕಿಂಗ್ ಜಾಗ ಗುರುತಿಸಲಾಗಿದೆ. ಕಡ್ಡಿರಾಂಪೂರ, ಕಮಲಾಪೂರ ಏರಿಯಾಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, 7 ರಿಂದ 8 ಸಾವಿರ ವಾಹನಗಳು ಏಕಕಾಲದಲ್ಲಿ ನಿಲುಗಡೆಗೆ ವ್ಯವಸ್ಥೆ ಇದೆ. ಹಂಪಿಯಲ್ಲಿ 150 ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದ್ದು, ಹೊಸಪೇಟೆ ಸಿಟಿಯಲ್ಲೂ ಸೂಕ್ಷ್ಮ ವಲಯಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಾಗಿದೆ.

Exit mobile version