ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿಯ (Hanuma Jayanti) ಅಂಗವಾಗಿ ಭಾನುವಾರ (ಡಿ. ೪) ನಡೆದಿದ್ದ ಸಂಕೀರ್ತನಾ ಯಾತ್ರೆ ವೇಳೆ ಮುಸ್ಲಿಮರೊಬ್ಬರಿಗೆ ಸೇರಿದ ಮನೆ ಮೇಲೆ ಹತ್ತಿದ ನಾಲ್ವರು ಹನುಮ ಮಾಲಾಧಾರಿಗಳು ಮೇಲಿದ್ದ ಹಸಿರು ಬಾವುಟವನ್ನು ಕಿತ್ತು ಹಾಕಿ ಕೇಸರಿ ಬಾವುಟವನ್ನು ಹಾರಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹನುಮ ಮಾಲಾಧಾರಿಗಳು ಗುಜರಾತ್ ಮಾದರಿ ದಾಳಿ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಮನೆ ಮಾಲೀಕ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ ಮುಸ್ಲಿಂ ಒಕ್ಕೂಟದ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಮನೆ ಮಾಲೀಕ ಸಯ್ಯದ್ ರೆಹಮಾನ್, ಕುಬ್ರ ಬಾನು ದಂಪತಿ ಈ ಆರೋಪ ಮಾಡಿದ್ದಾರೆ. ತಮ್ಮ ಮೇಲೆ ಗುಜರಾತ್ ಮಾದರಿ ದಾಳಿ ಮಾಡುತ್ತೇವೆ ಎಂದು ಹನುಮ ಭಕ್ತರು ಬೆದರಿಕೆ ಹಾಕಿದ್ದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವು ಮತ್ತೊಂದು ಸ್ವರೂಪವನ್ನು ಪಡೆಯು ಲಕ್ಷಣ ಗೋಚರಿಸುತ್ತಿದೆ.
ಕುಬ್ರ ಬಾನು ಆರೋಪವೇನು?
ಮನೆ ಯಜಮಾನಿ ಕುಬ್ರ ಬಾನು ಅವರು ಭಾನುವಾರದ ಘಟನೆ ಬಗ್ಗೆ ಮಾತನಾಡುತ್ತಾ, ಕೆಟ್ಟ ಕೆಟ್ಟ ಪದಗಳಿಂದ ಹನುಮ ಭಕ್ತ ವೇಷಧಾರಿಗಳು ನಿಂದಿಸಿದರು. ಅಂದು ಮನೆಯಲ್ಲಿ ನನ್ನ ಮಗಳ ಜತೆಗೆ ಒಬ್ಬಳೇ ಇದ್ದೆ. ಅಂದು ಆರಂಭವಾದ ಹನುಮ ಮಾಲೆಯ ಸಂಕೀರ್ತನಾ ಯಾತ್ರೆಯ ಮುಕ್ಕಾಲು ಪಾಲು ಜನ ಹಾಗೆಯೇ ಹೋದರು. ಯಾತ್ರೆ ಇನ್ನು ಕಾಲು ಭಾಗ ಇರುವಾಗ ಹನುಮ ಮಾಲೆ ಧರಿಸಿದ್ದ ವ್ಯಕ್ತಿಯೊಬ್ಬ ನಮ್ಮ ಮನೆ ಮೇಲೆ ಹತ್ತಿದ್ದರಿಂದ ಹೆಂಚಿನ ಚೂರು ನಮ್ಮ ಕೊಠಡಿಯೊಳಗೆ ಒಳಗೆ ಬಿದ್ದಿದೆ. ಗಾಬರಿಯಾಗಿ ನಾನು ಮನೆಯ ಹೊರಗೆ ಓಡಿ ಬಂದಾಗ ಮೇಲ್ಭಾಗದಲ್ಲಿ ಒಬ್ಬ ಹುಡುಗ ಹತ್ತಿರುವುದು ಕಂಡಿತು. ನೋಡ ನೋಡುತ್ತಿದ್ದಂತೆ ನಾವು ಮನೆ ಮೇಲ್ಭಾಗದಲ್ಲಿ ಹಾಕಲಾಗಿದ್ದ ಹಸಿರು ಬಾವುಟವನ್ನು ತೆಗೆದು ಹಾಕಿದ. ಅದನ್ನು ನಾನು ಪ್ರಶ್ನೆ ಮಾಡಿದಾಗ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು ಎಂದು ಆರೋಪಿಸಿದರು.
ನಿಮ್ಮನ್ನು ಸುಮ್ಮನೆ ಬಿಟ್ಟಿರುವುದೇ ಹೆಚ್ಚು, ಹೀಗೆಯೇ ಆಡುತ್ತಿದ್ದರೆ ಗುಜರಾತ್ ಮಾದರಿಯಲ್ಲೇ ಇಲ್ಲೂ ಮಾಡಬೇಕಾಗುತ್ತದೆ ಎಂದು ಆವಾಜ್ ಹಾಕಿದ್ದಾರೆ ಎಂದು ಆರೋಪ ಮಾಡಿರುವ ಕುಬ್ರ ಬಾನು, ಅದಕ್ಕೆ ನಾನು, ನಾವು ತರಕಾರಿ ಮಾರಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬದವರು. ಮನೆಯ ಚಾವಣಿ ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ನೀರು ಸೋರುತ್ತದೆ. ಮಳೆ ನೀರು ಸೋರಬಾರದು ಎಂಬ ಕಾರಣಕ್ಕೆ ನಾವು ಟಾರ್ಪಲ್ ಹೊದ್ದಿಸಿ ರಕ್ಷಣೆ ಪಡೆದುಕೊಂಡಿದ್ದೇವೆ. ನಮಗೆ ರಕ್ಷಣೆ ಕೊಡಿ ಎಂದು ಬಾನು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Narayana devalaya: ಕಣ್ಣಿನ ಉಚಿತ ಚಿಕಿತ್ಸೆ ಆಸ್ಪತ್ರೆ ಉದ್ಘಾಟನೆ, ಜಿಲ್ಲೆಯಲ್ಲೊಂದು ಹಾಸ್ಪಿಟಲ್ ಪ್ಲ್ಯಾನ್ ಸಕ್ಸಸ್ ಆಗಲಿ ಎಂದ ಸಿಎಂ