ಮಂಡ್ಯ: ಹನುಮ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ಸ್ಥಳದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ ಸಂಕಲ್ಪದೊಂದಿಗೆ ಭಾನುವಾರ ಅದ್ಧೂರಿಯಾಗಿ ಹನುಮ ಸಂಕೀರ್ತನಾ ಯಾತ್ರೆ (Hanuma Sankirtana Yatra) ನಡೆಯಿತು. ಪೊಲೀಸ್ ಸರ್ಪಗಾವಲಿನಲ್ಲಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಭಾಗಿಯಾಗಿದ್ದರು.
ಹನುಮ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಸಂಪೂರ್ಣ ಕೇಸರಿಮಯವಾಗಿತ್ತು. ಯಾತ್ರೆ ಹಿನ್ನಲೆಯಲ್ಲಿ ಜಾಮಿಯಾ ಮಸೀದಿ ಬಳಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಗಂಜಾಂ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾದ ಯಾತ್ರೆ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಮುಕ್ತಾಯವಾಯಿತು.
ಇದನ್ನೂ ಓದಿ | ಬಿಜೆಪಿಗರು ಬ್ರಿಟಿಷರ ಬೂಟು ನೆಕ್ಕೋರು ಎಂದ ಹರಿಪ್ರಸಾದ್; ನೀವು ಇಟಲಿಯವರ ಬೂಟು ನೆಕ್ಕುತ್ತಿದ್ದೀರಾ ಎಂದ ಬಿಜೆಪಿ!
ಯಾತ್ರೆಯಲ್ಲಿ ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಗೆ ಭಕ್ತಿಭಾವದಿಂದ ಪೂಜೆ ನಡೆಸಲಾಯಿತು. ಬೃಹತ್ ಭಗವಾಧ್ವಜ, ಕೇಸರಿ ಧ್ವಜಗಳನ್ನು ಹಿಡಿದ ಹನುಮ ಮಾಲಾಧಾರಿಗಳು, ಡಿಜೆ, ತಮಟೆ, ಚಂಡೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಈ ವೇಳೆ ಜೈ ಶ್ರೀರಾಮ್, ಜೈ ಬಜರಂಗಿ ಘೋಷಣೆಗಳು ಮೊಳಗಿದವು. ಹನುಮ ಪಾದದ ಮೇಲಾಣೆ, ಮಸೀದಿ ಸ್ಥಳದಲ್ಲೇ ಮಂದಿರ ಕಟ್ಟುವೆವು ಎಂದು ಮಾಲಾಧಾರಿಗಳು ಶಪಥ ಮಾಡಿದರು.
ಮೆರವಣಿಗೆ ಜಾಮಿಯಾ ಮಸೀದಿ ಬಳಿ ಬರುತ್ತಿದ್ದಂತೆಯೇ ವೃತ್ತಕಾರದಲ್ಲಿ ಕರ್ಪೂರ ಹಚ್ಚಿದ ಹನುಮ ಭಕ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಜಾಮಿಯಾ ಮಸೀದಿ ಬಳಿ ಮಾಲಾಧಾರಿಗಳ ತಳ್ಳಾಟ, ನೂಕಾಟ ಉಂಟಾಗಿದ್ದರಿಂದ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು.
ಯಾತ್ರೆ ಆರಂಭದ ಸ್ಥಳದಲ್ಲಿ ಇದೇ ಮೊದಲ ಬಾರಿಗೆ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಹಿಂದು ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಹಿಂದು ಜಾಗರಣ ವೇದಿಕೆ ಸಂಚಾಲಕ ಮಾರ್ಕಂಡೇಯ, ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ, ಪ್ರಾಂತ ಸಂಚಾಲಕ ಕೇಶವಮೂರ್ತಿ, ಜಿಲ್ಲಾ ಸಹ ಸಂಚಾಲಕ ಚಂದನ್ ಮತ್ತಿತರರು ಭಾಗಿಯಾಗಿದ್ದರು.
ಇದನ್ನೂ ಓದಿ | Veerashaiva Lingayat: ವೀರಶೈವ ಲಿಂಗಾಯತ ಮಹಾಸಭಾದಿಂದ 8 ನಿರ್ಣಯ; ಜಾತಿ ಗಣತಿ ವರದಿ ತಿರಸ್ಕಾರಕ್ಕೆ ಆಗ್ರಹ
ಯಾತ್ರೆ ಸಾಗುವ ಮಾರ್ಗದಲ್ಲಿರುವ ಅನ್ಯ ಕೋಮಿನ ಮನೆಗಳಿಗೆ ಬ್ಯಾರಿಕೇಡ್ ಹಾಕಿ ಭದ್ರತೆ ಏರ್ಪಡಿಸಲಾಗಿತ್ತು.
ಕಳೆದ ವರ್ಷ ಅನ್ಯ ಕೋಮಿನವರ ಮನೆಯ ಮೇಲ್ಭಾಗದಲ್ಲಿದ್ದ ಹಸಿರು ಧ್ವಜವನ್ನು ಹನುಮಭಕ್ತರು ಕಿತ್ತು ಹಾಕಿದ್ದರು. ಜತೆಗೆ ಜಾಮಿಯಾ ಮಸೀದಿಗೆ ಮುತ್ತಿಗೆ ಹಾಕಲು ಹನುಮ ಮಾಲಾಧಾರಿಗಳು ಯತ್ನಿಸಿದ್ದರು. ಹೀಗಾಗಿ ಈ ಬಾರಿ ಮಸೀದಿ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸನ್ನು ನಿಯೋಜಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ