ಬೆಂಗಳೂರು: ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮ ಧ್ವಜ (Hanuman Flag) ತೆರವುಗೊಳಿಸಿರುವುದನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದು ವಿರೋಧಿ ನೀತಿ ಮತ್ತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿಯು, ಕೆರಗೋಡು ಘಟನೆಯನ್ನು ಖಂಡಿಸಿ ಜ.29ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರೆ ನೀಡಿದ್ದಾರೆ.
ಇದನ್ನೂ ಓದಿ | Hanuman Flag: ಕೆರಗೋಡಿನಲ್ಲಿ ಉದ್ವಿಗ್ನ ಸ್ಥಿತಿ; ಆರ್.ಅಶೋಕ್ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ
ಸೋಮವಾರ ಬೆಳಗ್ಗೆ 10 ಗಂಟೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮಧ್ವಜವನ್ನು ಕೆಳಕ್ಕಿಳಿಸಿ ಹರಿದಿರುವುದನ್ನು ಖಂಡಿಸಲಾಗುವುದು. ರಾಷ್ಟ್ರಧ್ವಜವನ್ನು ಮಧ್ಯಾಹ್ನ 3 ಗಂಟೆಗೆ ಹಾರಿಸುವ ಮೂಲಕ ಧ್ವಜ ಸಂಹಿತೆ ಉಲ್ಲಂಘಿಸಿ ಅವಮಾನ ಮಾಡಲಾಗಿದೆ ಎಂದು ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಹನುಮ ಧ್ವಜ ತೆಗೆದು, ರಾಷ್ಟ್ರ ಧ್ವಜ ಹಾರಿಸಬೇಕಾ: ಸಿ.ಟಿ.ರವಿ ಪ್ರಶ್ನೆ
ಚಿಕ್ಕಮಗಳೂರು: ಕಾಂಗ್ರೆಸ್ಸಿಗರಿಗೆ ಮಾನ ಮರ್ಯಾದೆ ಇದೆಯಾ? ರಾಷ್ಟ್ರಧ್ವಜ ಹಾರಿಸಲು ಹೋದವರ ಮೇಲೆ ಹುಬ್ಬಳ್ಳಿಯಲ್ಲಿ ಗೋಲಿಬಾರ್ ಮಾಡಿ 5 ಜನ ಸಾಯ್ಸಿದ್ರಿ, ಇಂದು ಹನುಮ ಧ್ವಜ ತೆಗೆದು, ರಾಷ್ಟ್ರ ಧ್ವಜ ಹಾರಿಸಬೇಕಾ? ನಿಮಗೆ ಮತ್ತೊಂದು ಧ್ವಜಕಂಬ ಹಾಕಿ ಇನ್ನೂ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸೋ ಯೋಗ್ಯತೆ ಇಲ್ವಾ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಹನುಮಧ್ವಜ ತೆರವು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮಗೆ ರಾಷ್ಟ್ರಧ್ವಜದ ಮೇಲೆ ಗೌರವಿದೆ, ಆದರೆ, ಹನುಮ ಧ್ವಜ ತೆಗೆದೇ ಹಾರಿಸಬೇಕಾ? ಇದನ್ನು ನಾವು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ನಾವು ರಾಷ್ಟ್ರಧ್ವಜವನ್ನೂ ಎಲ್ಲಕ್ಕಿಂತ ಎತ್ತರದಲ್ಲಿ ಹಾರಿಸುತ್ತೇವೆ, ಹನುಮ ಧ್ವಜವನ್ನೂ ಹಾರಿಸುತ್ತೇವೆ
ಇದನ್ನೂ ಓದಿ | Hanuman Flag: ಹನುಮ ಧ್ವಜ ವಿವಾದ; ಶಾಸಕ ಗಣಿಗ ರವಿಕುಮಾರ್ ನಿವಾಸದ ಮುಂದೆ ಶ್ರೀರಾಮಸೇನೆ ಪ್ರೊಟೆಸ್ಟ್
ಜಿಲ್ಲಾಡಳಿತ ಯಾರ ಕೈಗೊಂಬೆ ಅಲ್ಲ, ಹನುಮ ಧ್ವಜ ತೆಗೆಯೋ ಅಧಿಕಾರ ಯಾರೂ ಕೊಟ್ಟಿಲ್ಲ, ಯಾವ ಆದೇಶದ ಮೇರೆಗೆ ತೆಗೆದಿರಿ? ಮರ್ಯಾದೆಯಿಂದ ನೀವೇ ಧ್ವಜ ಹಾರಿಸಬೇಕು. ಯಾರ ಓಲೈಕೆಗೆ ಹನುಮ ಧ್ವಜ ತೆರವು ಮಾಡಿದ್ದೀರಾ? ಶಾಲಾ ಕಾಲೇಜಿನಲ್ಲಿ ಹಿಜಾಬ್‌ಗೆ ಅವಕಾಶ ಮಾಡುತ್ತೀವಿ ಅಂತೀರಾ, ಇಲ್ಲಿ ಹನುಮಧ್ವಜ ಕಿತ್ತಾಕ್ತೀರಾ? ನಿಮ್ಮ ಸೆಕ್ಯೂಲರ್ ಸೋಗಲಾಡಿತನ ಇದೇ ಅಲ್ವಾ ಎಂದು ಕಿಡಿಕಾರಿದ್ದಾರೆ.