Site icon Vistara News

Hanuman Flag: ಕೆರಗೋಡು ಹನುಮ ಧ್ವಜ ವಿವಾದ; ಅಪ್ರಾಪ್ತನ ಕರೆದೊಯ್ದಿದ್ದು ಪೊಲೀಸರ ವಿಚಾರಣೆ

Keragodu Hanuman flag controversy minor was taken away for questioning by the police

ಮಂಡ್ಯ: ಕೆರಗೋಡು ಹನುಮ ಧ್ವಜ ವಿವಾದವು (Hanuman Flag) ಬೂದಿಮುಚ್ಚಿದ ಕೆಂಡದಂತಾಗಿದೆ. ಈ ನಡುವೆ ಕೆರಗೋಡು ಗ್ರಾಮದ ಅಪ್ರಾಪ್ತನನ್ನು ಕರೆದೊಯ್ದಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಾಲಕನ ಜತೆಗೆ ತಂದೆ ಪಾಪಣ್ಣನನ್ನು ವಿಚಾರಣೆ ನಡೆಸಿ ವಾಪಾಸ್ ಕಳುಹಿಸಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ನಿಯೋಗವು ಬಾಲಕನ ಮನೆಗೆ ಆಗಮಿಸಿತ್ತು. ಈ ವೇಳೆ ಅವರನ್ನು ತಡೆದ ಬಾಲಕನ ತಂದೆ ಪಾಪಣ್ಣ, ಬಾಗಿಲು ಹಾಕಿ ನೀವೂ ಮನೆಗೆ ಬರುವುದು ಬೇಡ, ನಮಗೆ ಯಾವುದೇ ರಾಜಕೀಯ ಬೇಡ. ಯಾವ ಧ್ವಜವಾದರೂ ಹಾರಾಡಲಿ ಎಂದು ಅಸಮಾಧಾನ ಹೊರಹಾಕಿದರು. ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ಪಾಪಣ್ಣ ಅವರನ್ನು ಸಮಾಧಾನಪಡಿಸಿ ಧೈರ್ಯ ಹೇಳಿದರು. ನಾವೇನು ಅತ್ಯಾಚಾರ ಅಥವಾ ದರೋಡೆ ಮಾಡಿಲ್ಲ. ಬದಲಿಗೆ ನ್ಯಾಯಕ್ಕಾಗಿ ಹೋರಾಡಿದ್ದೇವೆ, ಧೈರ್ಯವಾಗಿರಿ, ನಿಮ್ಮೊಂದಿಗೆ ನಾವು ಇದ್ದೇವೆ ಎಂದರು.

ಮಂಡ್ಯದ ಕೆರಗೋಡು ಗ್ರಾಮದಲ್ಲಿ ತೆರವು ಮಾಡಲಾದ ಹನುಮ ಧ್ವಜ (Hanuman Flag)ವನ್ನು ಮತ್ತೆ ಅದೇ ಜಾಗದಲ್ಲಿ ಮರುಸ್ಥಾಪನೆ ಮಾಡಬೇಕೆಂದು ಒತ್ತಾಯಿಸಲಾಗಿತ್ತು. ಹೀಗಾಗಿ ಜ.29ರಂದು ಹಿಂದೂ ಭಕ್ತರ ಬೃಹತ್‌ ಪಾದಯಾತ್ರೆ (Hindu devotees Padayatra) ನಡೆದಿತ್ತು. ಕೋದಂಡರಾಮ ದೇವಾಲಯದಿಂದ ಆರಂಭವಾಗಿ 15 ಕಿ.ಮೀ. ದೂರದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪಾದಯಾತ್ರೆಯಲ್ಲಿ (Protest in front of DC Office) ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಭಾಗವಹಿಸಿದ್ದರು. ಈ ವೇಳೆ ರೊಚ್ಚಿಗೆದ್ದ ಕೆಲವರು ಕಾಂಗ್ರೆಸ್ ಶಾಸಕರ ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದರು. ಹೀಗಾಗಿ ಕೆಲವರನ್ನು ಕರೆದು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಗಾಯಾಳುಗಳ ಕ್ಷೇಮ ವಿಚಾರಿಸಿದ ಬಿಜೆಪಿ ನಾಯಕರು

ಮಂಡ್ಯದ ಕೆರಗೋಡು ಹನುಮ ಧ್ವಜ ತೆರವು ವಿವಾದ ಮುಂದುವರಿದಿದೆ. ಹನುಮ ಧ್ವಜ ತೆರವು ಹಿನ್ನೆಲೆ ಉದ್ವಿಗ್ನಗೊಂಡಿರುವ ಮಂಡ್ಯದ ಕೆರಗೋಡು ಗ್ರಾಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್‌ ನೇತೃತ್ವದ ನಿಯೋಗ ಬುಧವಾರ (ಜ.31) ಭೇಟಿ ಕೊಟ್ಟಿದೆ. ಕೆರಗೋಡು ಹನುಮ ಧ್ವಜ ತೆರವು ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಿಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದರು. ಈ ವೇಳೆ ಸಿಕ್ಕ ಸಿಕ್ಕವರನ್ನು ಅಟ್ಟಾಡಿಸಿ ಪೊಲೀಸರು ಲಾಠಿ ಏಟು ಕೊಟ್ಟಿದ್ದರು. ಹೀಗಾಗಿ ಗಾಯಾಳುಗಳ ಕ್ಷೇಮ ವಿಚಾರಿಸಲು ಬಿಜೆಪಿ ನಾಯಕರು ಬುಧವಾರ ಭೇಟಿ ನೀಡಿದರು.

ನಾವು ಮಾತಾಡ್ಸೋಕೆ ಹೋದ್ರೆ ಬಾಗಿಲು ಹಾಕ್ಕೋಳ್ತಿದ್ದಾರೆ!

ನಾವು ಮಾತಾಡಿಸಲು ಹೋದರೆ ಜನರು ಬಾಗಿಲು ಹಾಕಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣವನ್ನು ನಿರ್ಮಿಸಿ, ಬ್ರಿಟಿಷ್‌ ಸರ್ಕಾರದ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್‌ ಕಿಡಿಕಾರಿದರು. ಕೆರಗೋಡಲ್ಲಿ ಲಾಠಿ ಏಟು ತಿಂದವರು ಬಂಧನ ಮಾಡುತ್ತಾರೆ ಎಂದು ಊರು ಬಿಟ್ಟಿದ್ದಾರೆ.

ಹೊರಗಿನ ಜಿಲ್ಲೆಯಿಂದ ಬಂದು ಗಲಾಟೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಕೆರಗೋಡು ಗ್ರಾಮಸ್ಥರಿಂದಲೇ ಪ್ರತಿಭಟನೆ ಮಾಡಲಾಗಿತ್ತು. ಬೇರೆ ಜಿಲ್ಲೆಯಿಂದ ಪೊಲೀಸರನ್ನು ಕರೆಸಿ ಸರ್ಕಾರ, ಜಿಲ್ಲಾಡಳಿತವು ದೊಂಬಿ ಎಬ್ಬಿಸಿದ್ದಾರೆ. ಮುಂದೆ ಏನು ಆಗುತ್ತೋ ಎಂದು ಜನರು ಭಯದಿಂದ ಹೊರಗಡೆಯೇ ಬಂದಿಲ್ಲ. ಪಾನಿಪುರಿ ಹಾಕುವ ಬಡವನ ಮಗನ ಮೇಲೂ ಹಲ್ಲೆ ಮಾಡಿದ್ದಾರೆ. ಅಪ್ರಾಪ್ತನನ್ನು ಬೆಳಗಿನ ಜಾವ ಠಾಣೆಗೆ ಕರೆಸಿದ್ದಾರೆ. ಅಷ್ಟೊತ್ತಿಗೆ ಠಾಣೆಗೆ ಕರೆಸಿ ಹೇಳಿಕೆ ಪಡೆಯುವುದು ಏನಿದೆ? ಎಂದು ಆಕ್ರೋಶ ಹೊರಹಾಕಿದರು. ಮಂಡ್ಯದಲ್ಲಿ ಬಿಜೆಪಿ ನಾಯಕರ ಸುದ್ದಿಗೋಷ್ಠಿ ವೇಳೆ ಉಪಸ್ಥಿತರಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಫುಲ್ ಗರಂ ಆಗಿದ್ದರು.

ಫೆ.2ರಿಂದ ಕೇಸರಿ ಧ್ವಜ ಅಭಿಯಾನ

ಮಂಡ್ಯದ ಕೆರಗೋಡು ಹನುಮಧ್ವಜ ತೆರವು ವಿರೋಧಿಸಿ ಕೇಸರಿಧ್ವಜ ಅಭಿಯಾನಕ್ಕೆ ಬಿಜೆಪಿ ನಿರ್ಧಾರಿಸಿದೆ. ಆದರೆ ಬಿಜೆಪಿ ಅಭಿಯಾನಕ್ಕೂ ಮುನ್ನವೇ ಸ್ವಯಂಪ್ರೇರಿತರಾಗಿ ತಮ್ಮ ಮನೆಗಳ ಮೇಲೆ ಕೇಸರಿಧ್ವಜವನ್ನು ಗ್ರಾಮಸ್ಥರು ಹಾರಿಸಿದ್ದಾರೆ. ಕೆರಗೋಡು ಗ್ರಾಮದ ಮನೆಗಳ ಮೇಲೆ ಕೇಸರಿಧ್ವಜ ರಾರಾಜಿಸುತ್ತಿದೆ. ಫೆ.2ರಿಂದ ಮನೆ ಮನೆಗೆ ಹನುಮಧ್ವಜ ಅಭಿಯಾನ ಆರಂಭಿಸಲು ಬಿಜೆಪಿ ನಿರ್ಧಾರಿಸಿದ್ದು, ಆದರೆ ಕೆರಗೋಡು ಗ್ರಾಮಸ್ಥರು ಮನೆಗಳ ಮೇಲೆ ಕೇಸರಿಧ್ವಜ ಹಾರಿಸಿದ್ದಾರೆ.

ಇದನ್ನೂ ಓದಿ: Hanuman Flag: ಧ್ವಜಸ್ತಂಭವನ್ನು ನಿರ್ಮಿಸಿದ್ದೇ ಹನುಮಾನ್‌ ಧ್ವಜ ಹಾರಿಸಲು; ಕಾಂಗ್ರೆಸ್‌ ಜನರ ಕ್ಷಮೆ ಕೇಳಲಿ: ವಿಜಯೇಂದ್ರ

ಏನಿದು ಮಂಡ್ಯದ ಹನುಮಧ್ವಜ ಕೇಸ್?‌

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಗ್ರಾಮದ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಇದರ ನೆನೆಪಾಗಿ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರ ಧ್ವಜಸ್ತಂಭದ ಮೇಲೆ ಹನುಮ ಧ್ವಜ ಹಾರಿಸಲು ಗ್ರಾಮಸ್ಥರು ನಿರ್ಧರಿಸಿದ್ದರು. ಧ್ವಜ ಹಾರಿಸಲು ನಿಶ್ಚಯಿಸಿದ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ್ದರಿಂದ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ, ಗ್ರಾಮ ಪಂಚಾಯಿತಿ “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲವೆಂದು ಅನುಮತಿಯನ್ನು ನಿರಾಕರಣೆ ಮಾಡಿತ್ತು.

ಆದರೂ ಗ್ರಾಮಸ್ಥರು ಮತ್ತು ಹಿಂದು ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಇದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಈ ವಿಚಾರ ಮತ್ತೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿದೆ. ಅಲ್ಲಿ 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದವನ್ನು ಇತ್ಯರ್ಥ ಪಡಿಸಿದ್ದರು.

ಆದರೆ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ಮೌಖಿಕ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ತೆರವುಗೊಳಿಸಲು ಮುಂದಾದರು. ಇದಕ್ಕೆ ಗ್ರಾಮಸ್ಥರು ಅಡ್ಡಿ ಪಡಿಸಿ ಪ್ರತಿಭಟಿಸಿದ್ದರು. ಹೀಗಾಗಿ ಅಲ್ಲಿಂದ ನಿರ್ಗಮಿಸಿದ್ದ ಅಧಿಕಾರಿಗಳು ಶನಿವಾರ (ಜ.27) ರಾತ್ರಿ ಪುನಃ ಬಂದು ಹನುಮ ತೆರವಿಗೆ ಮುಂದಾದರು. ಮುಂಜಾನೆ 3 ಗಂಟೆ ಹೊತ್ತಿಗೆ ಮಂಡ್ಯ ಎಸಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ತೆರವಿಗೆ ಮುಂದಾಗುತ್ತಿದ್ದಂತೆ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದು ಗಲಾಟೆ ಮಾಡಿದ್ದರು. ಈ ವೇಳೆ ಪೊಲೀಸರು ಸಹ ಸ್ಥಳದಲ್ಲಿದ್ದರು. ಪ್ರತಿಭಟನೆಯನ್ನೂ ಮಾಡಲಾಯಿತು. ಇದೀಗ‌ ಧ್ವಜ ಮರು ಸ್ಥಾಪನೆಗೆ ಆಗ್ರಹಿಸಿ ಪಾದಯಾತ್ರೆ ನಡೆದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version