Site icon Vistara News

Hanuman Flag: ಧ್ವಜಸ್ತಂಭ ನಿರ್ಮಿಸಲು ಅನುಮತಿ; ಕೆರಗೋಡು ಪಿಡಿಒ ಸಸ್ಪೆಂಡ್

Hanuman Flag

ಮಂಡ್ಯ: ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದರಿಂದ (Hanuman Flag) ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕೆರಗೋಡು ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ. ಸರ್ಕಾರದ ನಿಯಮ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಪಿಡಿಒರನ್ನು ಅಮಾನತು ಮಾಡಿ ಸಿಇಒ ಶೇಕ್ ತನ್ವೀರ್ ಆಸೀಫ್ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಸ್ವತ್ತಿನಲ್ಲಿ ಖಾಸಗಿ ಧ್ವಜ ಸ್ತಂಭ ನಿರ್ಮಿಸಲು ನಿಯಮ ಬಾಹಿರ ಅನುಮತಿ ನೀಡಿದ್ದರಿಂದ ಗ್ರಾಮದಲ್ಲಿ ಸಂಘರ್ಷ ಉಂಟಾಗಲು ಕಾರಣವಾಗಿದೆ ಎಂದು ಪಿಡಿಒ ಜೀವನ್ ಬಿ.ಎಂ ಅವರನ್ನು ಅಮಾನತು ಮಾಡಲಾಗಿದೆ.

ಕೆರಗೋಡು ಪಿಡಿಒ ಜೀವನ್.ಬಿ.ಎಂ. ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯತೆ ತೋರಿ ಹಾಗೂ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿರುತ್ತದೆ. ಕೆರಗೋಡು ಶ್ರೀ ಗೌರಿಶಂಕರ ಸೇವಾಟ್ರಸ್ಟ್‌ಗೆ ಗ್ರಾಮ ಪಂಚಾಯಿತಿ ಜಾಗದಲ್ಲಿ ಅಂದರೆ ಸರ್ಕಾರಿ ಸ್ವತ್ತಿನಲ್ಲಿ ಖಾಸಗಿ ಸಂಸ್ಥೆಗೆ ಧ್ವಜಸ್ಥಂಭ ನಿರ್ಮಿಸಲು ನಿಯಮ ಬಾಹಿರವಾಗಿ ಅನುಮತಿ ನೀಡಿರುವುದು ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮ ಪ್ರಕಾರ ನಿಯಮಬಾಹಿರವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | Hanuman Flag : ಕೆರಗೋಡು ಹನುಮ ವಿವಾದ; ಫೆ. 9ರಂದು ಮಂಡ್ಯ ಬಂದ್‌ಗೆ ಬಿಜೆಪಿ ಕರೆ

ಸ್ಥಿರ ಸ್ವತ್ತನ್ನು ಯಾವುದೇ ಗುತ್ತಿಗೆ, ಮಾರಾಟ ಅಥವಾ ವರ್ಗಾವಣೆ ಮಾಡುವಾಗ ಸರ್ಕಾರ, ಜಿಲ್ಲಾ ಪಂಚಾಯತಿ ಅಥವಾ ತಾಲೂಕು ಪಂಚಾಯತಿ ಪೂರ್ವಾನುಮೋದನೆಯಿಲ್ಲದೇ ಯಾವುದೇ ಕ್ರಮವನ್ನು ಗ್ರಾಮ ಪಂಚಾಯತಿಗಳು ನಿರ್ವಹಿಸಬಾರದು. ಆದರೂ ಪಂಚಾಯಿತಿಗೆ ಸೇರಿದ ಸ್ವತ್ತನ್ನು ಖಾಸಗಿಯವರಿಗೆ ನೀಡುವ ಸಂದರ್ಭದಲ್ಲಿ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದರೂ ಸದರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಖಾಸಗಿ ಸಂಸ್ಥೆಯವರಿಗೆ ಧ್ವಜಸ್ಥಂಭ ನಿರ್ಮಿಸಲು ಅನುಮತಿ ನೀಡಿದ ಪರಿಣಾಮ ಗ್ರಾಮದಲ್ಲಿ ಸಂಘರ್ಷ ಉಂಟಾಗಲು ನೇರ ಕಾರಣಕರ್ತರಾಗಿರುವುದು ಕಂಡುಬಂದಿರುತ್ತದೆ.

ಡಿ.29ರಂದು ನಡೆದ ಸಾಮಾನ್ಯ ಸಭೆಯಲ್ಲಿಯೂ ಈ ಅಂಶವನ್ನು ಸಭೆಯ ಗಮನಕ್ಕೆ ತರದೇ ಹಾಗೂ ಸಭೆಯ ನಿರ್ಣಯವು ನಿಯಮಬಾಹಿರವಾಗಿರುವುದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮ 237ರನ್ವಯ ಸದರಿ ನಿಯಮ ಬಾಹಿರ ನಿರ್ಣಯದ ರದ್ದತಿಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸದೇ ನೇರವಾಗಿ ಜ.19ರಂದು ಧ್ವಜಸ್ತಂಭವನ್ನು ನಿರ್ಮಾಣ ಮಾಡಲು ಅನುಮತಿ ನೀಡಿ ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ, ಸರ್ಕಾರಿ ಸ್ವತ್ತಿನಲ್ಲಿ ಧ್ವಜಸ್ತಂಭವನ್ನು ನಿರ್ಮಿಸಲು ಅಧಿಕಾರ ವ್ಯಾಪ್ತಿ ಮೀರಿ ಅನುಮತಿ ನೀಡಿರುವುದು. ಅಲ್ಲದೇ, ಜ. 19ರಂದು ನೀಡಿರುವ ಅನುಮತಿ ಪತ್ರದಲ್ಲಿ ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಲು ಅನುಮತಿ ನೀಡಲಾದ ಷರತ್ತುಗಳನ್ನು ಉಲ್ಲಂಘಿಸಿರುವ ಸಂಬಂಧ ಯಾವುದೇ ಕ್ರಮವನ್ನು ಕೈಗೊಳ್ಳದೇ ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯತನ ತೋರಿಸಿ ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿದೆ.

ಇದನ್ನೂ ಓದಿ | Hanuman Flag: ರಾಜ್ಯಾದ್ಯಂತ ಹರಡಿದ ಹನುಮ ಧ್ವಜದ ಕಿಚ್ಚು;‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕೇಸರಿ ಪಡೆ ಆಕ್ರೋಶ

ಜ.28ರಂದು ಉಪವಿಭಾಗಾಧಿಕಾರಿ, ಅಪರ ಪೊಲೀಸ್ ಅಧೀಕ್ಷಕರು, ತಹಸೀಲ್ದಾರ್‌ ಅವರು ಧ್ವಜಸ್ತಂಭದ ಬಳಿಗೆ ಭೇಟಿ ನೀಡಿದಾಗ ಉಂಟಾದ ಪ್ರತಿಭಟನೆ ಹಾಗೂ ಗೊಂದಲ ಮತ್ತು ಕಾನೂನು ಸುವ್ಯವಸ್ಥೆಯನ್ನು ಕದಡಲು ಹಾಗೂ ಗ್ರಾಮದಲ್ಲಿ ಸಂಘರ್ಷ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ನೇರ ಕಾರಣರಾಗಿ ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿದೆ ಎಂದು ಪಿಡಿಒ ವಿರುದ್ಧ ಸಿಇಒ ಶೇಕ್ ತನ್ವೀರ್ ಆಸೀಫ್ ಶಿಸ್ತು ಕ್ರಮ ಕೈಗೊಂಡಿದ್ದಾರೆ.

Exit mobile version