ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಧ್ವಜಸ್ತಂಭದಲ್ಲಿ ಹನುಮ ಧ್ವಜ (Hanuman Flag) ತೆರವು ಮಾಡಿದ್ದರಿಂದ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ನಡುವೆ ಗ್ರಾಮದಲ್ಲಿ ಮನೆ ಮನೆ ಮೇಲೆ ಕೇಸರಿ ಧ್ವಜ ಅಭಿಯಾನಕ್ಕೆ ಬಿಜೆಪಿ ಚಾಲನೆ ನೀಡಿದೆ. ಹನುಮ ಧ್ವಜ ಇಳಿಸಿದ್ದಕ್ಕೆ ಅಭಿಯಾನದ ಮೂಲಕ ಹೋರಾಟ ಆರಂಭಿಸಿರುವ ಬಿಜೆಪಿ ಮುಖಂಡರು, ಗ್ರಾಮದಲ್ಲಿ ಮತ್ತೆ ಹನುಮ ಧ್ವಜ ಹಾರಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕೆರಗೋಡು ಗ್ರಾಮದ ಹನುಮ ದೇವಾಲಯದಲ್ಲಿ ಶನಿವಾರ ಪೂಜೆ ಸಲ್ಲಿಸುವ ಮೂಲಕ ಕೇಸರಿ ಧ್ವಜ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಅವರ ನೇತೃತ್ವದಲ್ಲಿ ಮನೆ ಮನೆಗೆ ಕೇಸರಿ ಧ್ವಜ ನೀಡಲಾಯಿತು.
ಜಿಲ್ಲಾಡಳಿತ ನಡೆಸಿದ ಎರಡೂ ಶಾಂತಿ ಸಭೆ ವಿಫಲ
ಕೆರಗೋಡು ಧ್ವಜ ಇಳಿಸಿದ ಪ್ರಕರಣ ಸಂಬಂಧ ಜಿಲ್ಲಾಡಳಿತ ನಡೆಸಿರುವ ಎರಡೂ ಶಾಂತಿ ಸಭೆಗಳೂ ವಿಫಲವಾಗಿವೆ.
ಶುಕ್ರವಾರ ಮಂಡ್ಯ ಡಿಸಿ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆದಿತ್ತು. ಮೊನ್ನೆ ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ಐಯಪ್ಪಸ್ವಾಮಿ ದೇವಾಲಯದ ಬಳಿ ಶಾಂತಿ ಸಭೆ ನಡೆದಿತ್ತು. ಸಭೆಯಲ್ಲಿ ಗ್ರಾಮದ 100ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಇದನ್ನೂ ಓದಿ | LK Advani: ಬಿಜೆಪಿಯ ಗುರು ಶಿಷ್ಯರಾದ ಅಡ್ವಾಣಿ- ಮೋದಿ ನಡುವಿನ ಬಾಂಧವ್ಯದ ಕ್ಷಣಗಳು ಇಲ್ಲಿವೆ ನೋಡಿ
ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಿ ನಂತರ ಶಾಂತಿ ಸಭೆಗೆ ಬನ್ನಿ ಎಂದು ಬೇಡಿಕೆಯನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದಿಟ್ಟಿದ್ದಾರೆ. ಆದರೆ, ಗ್ರಾಮಸ್ಥರ ಬೇಡಿಕೆಗೆ ಅಧಿಕಾರಿಗಳು ಮೌನ ವಹಿಸಿದ್ದಾರೆ. ಮಂಡ್ಯ ಬಂದ್(ಫೆ.7 ಮತ್ತು 9) ನಂತರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಅಧಿಕಾರಿಗಳ ಮಟ್ಟದಲ್ಲಿ ನಿರ್ಧಾರವಾಗದಿದ್ದರೆ ಕೋರ್ಟ್ ಮೆಟ್ಟಿಲೇರಲು ಗ್ರಾಮಸ್ಥರು ಮುಂದಾಗುತ್ತಾರೆ ಎಂದು ಗ್ರಾಮದ ಮುಖಂಡ ಕೆಂಪರಾಜು ಹೇಳಿದ್ದಾರೆ.
ಧ್ವಜ ಹಾರಿಸಲು ಯಾವ ಲೈಸೆನ್ಸ್ ಬೇಕಿಲ್ಲ: ಸಿ.ಟಿ.ರವಿ
ಹಾಸನ: ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಅಭಿಯಾನದ ಬಗ್ಗೆ ಮಾಜಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿ, ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸುತ್ತೇವೆ, ಇದಕ್ಕೆ ಯಾವ ಲೈಸೆನ್ಸ್‌ನ ಅವಶ್ಯಕತೆ ಇಲ್ಲ. ನನ್ನ ಮನೆ ಮೇಲೆ ಹನುಮ ಧ್ವಜ ಹಾರಿಸಲು ಯಾರದ್ದಾದರೂ ಅಪ್ಪಣೆ ಬೇಕೇ? ಅಪ್ಪಣೆ ಅವಶ್ಯಕತೆ ಇಲ್ಲಾ, ಹನುಮಧ್ವಜ ಹಾರಿಸುತ್ತೇವೆ. ಈ ಮೂಲಕ ಒಂದು ಸಂದೇಶವನ್ನು ಕೊಡುತ್ತೇವೆ ಎಂದು ಹೇಳಿದರು.
ರಾಮಮಂದಿರ ರೀತಿ ಉಳಿದ ದೇವಾಲಯಗಳಿಗೆ ಅನುದಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನೂರಲ್ಲ ಸಾವಿರ ಕೋಟಿ ಕೊಡಲಿ, ಸಾವಿರ ಕೋಟಿ ಕೊಟ್ಟರೂ ಕಡಿಮೆಯೇ. ಹೊಯ್ಸಳ ಕಾಲದ ದೇವಾಯಗಳು ಇವೆ, ನೂರು ಕೋಟಿ ಅಲ್ಲ, ಸಾವಿರ ಕೋಟಿ ಕೊಡಬೇಕು.
ಒಂದು ಸಾವಿರ ಅಲ್ಲ, ಹತ್ತು ಸಾವಿರ ಕೋಟಿ ಕೊಟ್ಟರೂ ಬೇಲೂರುನಲ್ಲಿರುವಂತಹ ದೇವಸ್ಥಾನ ಕಟ್ಟಲು ಆಗುತ್ತಾ? ಎಲ್ಲಾ ದೇವಾಲಯಗಳನ್ನು ಉಳಿಸಿಕೊಳ್ಳಬೇಕು. ಇಷ್ಟು ವರ್ಷ ಹುಂಡಿ ಹಣವನ್ನು ಲೂಟಿ ಹೊಡೆದಿದ್ದೀರಿ, ಆ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪ್ರತಿವರ್ಷ ದೇವಾಲಯಗಳಿಗೆ ಸಾವಿರ ಕೋಟಿ ಹಣ ಕೊಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಂಡ್ಯ ಬಂದ್‌ಗೆ ಬೆಂಬಲ ನೀಡದ ಆಟೋಚಾಲಕರು, ವರ್ತಕರು
ಮಂಡ್ಯ: ಫೆ.7 ಹಾಗೂ ಫೆ.9 ರಂದು ಸಮಾನ ಮನಸ್ಕರ ವೇದಿಕೆ ಮತ್ತು ಬಿಜೆಪಿ ಪ್ರತ್ಯೇಕವಾಗಿ ಮಂಡ್ಯ ಬಂದ್‌ಗೆ ಕರೆ ನೀಡಿವೆ. ಆದರೆ, ಬಂದ್‌ಗೆ ಬೆಂಬಲ ನೀಡದಿರಲು ಆಟೋಚಾಲಕರ ಸಂಘ ಹಾಗೂ ವರ್ತಕರು ಸಂಘ ನಿರ್ಧರಿಸಿವೆ. ಫೆ.7 ರಂದು ಶಾಂತಿ ಸೌಹಾರ್ದತೆಗಾಗಿ ಸಮಾನ ಮನಸ್ಕರ ವೇದಿಕೆ ಬಂದ್ ಕರೆ ನೀಡಿದ್ದರೆ, ಫೆ.9 ರಂದು ಕೆರಗೋಡು ಹನುಮ ಧ್ವಜದ ವಿವಾದ ಖಂಡಿಸಿ ಭಜರಂಗದಳ ಹಾಗೂ ಬಿಜೆಪಿ, ಮಂಡ್ಯ ಬಂದ್‌ಗೆ ಕರೆ ನೀಡಿವೆ.
ಇದನ್ನೂ ಓದಿ | SSLC Preparatory Exam : ವಿದ್ಯಾರ್ಥಿಗಳಿಂದಲೇ ಪರೀಕ್ಷಾ ವೆಚ್ಚ ವಸೂಲಿ; ಗತಿಗೆಟ್ಟ ಸರಕಾರ ಎಂದು ಹೆಚ್‌ಡಿಕೆ ಕಿಡಿ
ಮಂಡ್ಯ ಬಂದ್‌ಗೆ ಯಾವುದೇ ಬೆಂಬಲ ನೀಡಲ್ಲ, ವಾಣಿಜ್ಯ ಮಂಡಳಿಯಿಂದಲೂ ಬೆಂಬಲ ಘೋಷಣೆ ಮಾಡಲ್ಲ. ಇದು ರಾಜಕೀಯ ಪ್ರೇರಿತ ಬಂದ್ ಆಗಿದೆ, ಹಾಗಾಗಿ ನಾವು ಬೆಂಬಲ ನೀಡಲ್ಲ. ಎಂದಿನಂತೆ ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ. ಆಟೋಗಳ ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ಇರುತ್ತದೆ ಎಂದು
ಆಟೋಚಾಲಕರ ಸಂಘದ ಅಧ್ಯಕ್ಷ ಕೃಷ್ಣ ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷ ಪ್ರಭಾಕರ್ ತಿಳಿಸಿದ್ದಾರೆ.