ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನ ಶನಿವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಆರಂಭಗೊಂಡಿದೆ. ಒಂದು ಕಡೆ ಮನೆ ಮನೆಗಳಲ್ಲೂ ಜನರು ತ್ರಿವರ್ಣ ಧ್ವಜ ಹಾರಿಸುತ್ತಿದ್ದರೆ, ಇತ್ತ ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನ ಸೌಧದ ಮುಂದೆ ಯುವ ಶಕ್ತಿಯ ಸಮಾಗಮದೊಂದಿಗೆ ತ್ರಿವರ್ಣ ವೈಭವ ಕಣ್ಮನ ಸೆಳೆಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧ ಮಹಾ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮವನ್ನು ಬಲೂನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
ಯುವಜನರನ್ನು ನೋಡಿ ಸಂಭ್ರಮದಿಂದ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ʻʻಇಂದು ನಿಮ್ಮನ್ನೆಲ್ಲ ನೋಡಿದ ಮೇಲೆ ನನ್ನ ವಯಸ್ಸು 25 ವರ್ಷ ಕಡಿಮೆಯಾಗಿದೆ. ನೀವೆಲ್ಲರೂ ಭಾರತದ ಭವಿಷ್ಯ. 75 ವರ್ಷ ಎನ್ನುವುದು ಮನುಷ್ಯನಿಗೆ ವೃದ್ಧಾಪ್ಯ. ಆದರೆ, ಒಂದು ದೇಶಕ್ಕೆ ಅದು ಯೌವನ. ವಿಶ್ವದಲ್ಲೇ ಅತಿ ಹೆಚ್ಚು ಯುವಕರು ಇರುವುದು ಭಾರತದಲ್ಲಿ. ಹೀಗಾಗಿ ನಮ್ಮದು ಯುವಕರ ದೇಶʼʼ ಎಂದರು.
ಸರಕಾರದಿಂದಲೇ ಧ್ವಜ
ʻʻಕನ್ನಡನಾಡಿನಲ್ಲಿ ಸರ್ಕಾರದ ವತಿಯಿಂದ 1 ಕೋಟಿ 8 ಲಕ್ಷ ಧ್ವಜ ಕೊಟ್ಟಿದ್ದೇವೆ. ಜನ ಸ್ವಪ್ರೇರಣೆಯಿಂದ ಅವರೇ ಧ್ವಜ ಸ್ವೀಕರಿಸಿ ಧ್ವಜಾರೋಹಣ ಮಾಡುತ್ತಿದ್ದಾರೆ. ಪ್ರತಿ ಹಳ್ಳಿ, ಪ್ರತಿ ಮನೆಯಲ್ಲೂ ಧ್ವಜ ಹಾರುತ್ತಿದೆʼʼ ಎಂದು ಹೇಳಿದರು ಬೊಮ್ಮಾಯಿ.
ಈಗ ರಕ್ತ ಕೊಡಬೇಕಿಲ್ಲ, ಬೆವರು ಕೊಡೋಣ
ʻದೇಶದ ಸ್ವಾತಂತ್ರ್ಯಕ್ಕೆ 75 ವರ್ಷ ಆದಾಗ ಮೋದಿ ಅವರು ಪ್ರಧಾನಿ ಆಗಿರುವುದು ಭಾಗ್ಯ. ಸಶಕ್ತ ಭಾರತ, ಸಂಪದ್ಭರಿತ ಭಾರತ, ಆತ್ಮನಿರ್ಭರ ಭಾರತ ನಿರ್ಮಾಣ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2047 ಕ್ಕೆ ಭಾರತಕ್ಕೆ 100 ವರ್ಷ ತುಂಬಲಿದೆ. ಇನ್ನುಳಿದ 25 ವರ್ಷ ದೇಶದ ಅಮೃತ ಕಾಲ ಎಂದು ಮೋದಿ ಹೇಳಿದ್ದಾರೆ. ಹೀಗಾಗಿ ಭವ್ಯ ಭಾರತ ಕಟ್ಟಲು ನಾವೆಲ್ಲ ಸಂಕಲ್ಪ ಮಾಡೋಣ ಎಂದರು ಬೊಮ್ಮಾಯಿ.
ಈಗ ನಾವು ದೇಶಕ್ಕಾಗಿ ಪ್ರಾಣ ಕೊಡುವ ಅವಶ್ಯಕತೆ ಇಲ್ಲ. ಆದರೆ ದೇಶಕ್ಕಾಗಿ ಬದುಕಬೇಕು. ದೇಶಕ್ಕಾಗಿ ರಕ್ತ ಕೊಡಬೇಕಿಲ್ಲ, ದೇಶಕ್ಕಾಗಿ ನಮ್ಮ ಬೆವರಿನ ಹನಿ ಕೊಡಬೇಕು. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡೋಣ ಎಂದು ಬೊಮ್ಮಾಯಿ ಹೇಳಿದರು. ಭಾರತದ ಐದು ಟ್ರಿಲಿಯನ್ ಅರ್ಥಿಕತೆ ಕನಸಿಗೆ ಕರ್ನಾಟಕವೂ ಬೆಂಗಾವಲಾಗಿ ನಿಲ್ಲಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಅಬಕಾರಿ ಸಚಿವ ಕೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಡಾ. ಶಾಲಿನಿ ರಜನೀಶ್ ಮತ್ತು ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ| Har Ghar Tiranga | ಆರ್‌ಎಸ್‌ಎಸ್ ಕಚೇರಿ ಕೇಶವಕೃಪಾ ಮೇಲೆ ತ್ರಿವರ್ಣ ಧ್ವಜಾರೋಹಣ