ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಾಗರಿಕರು ಗುಜರಾತ್‌ನ ನಿವೃತ್ತ ಬಿ.ಎಸ್.ಎಫ್. ಯೋಧನಿಂದ ಮನೆ ಮೇಲೆ ಭಾರತದ ಬಾವುಟ ಕಟ್ಟಿಸಿ ಹರ್ ಘರ್ ತಿರಂಗಾ (Har Ghar Tiranga) ಆಚರಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಗುಜರಾತ್ ಮೂಲದ ಬ್ರಿಜೇಶ್ ಶರ್ಮಾ ದೇಶಾದ್ಯಂತ ಸೈಕಲ್ ಜಾಥಾ ಮಾಡುತ್ತಿದ್ದಾರೆ. ಹೀಗೆ ಬಂದವರು ಚಿಕ್ಕಮಗಳೂರು ಜಿಲ್ಲೆಗೂ ಭೇಟಿ ನೀಡಿದ್ದರು. ಈ ವೇಳೆ ಮಲೆನಾಡಿಗರು ಗುಜರಾತ್ ಮೂಲದ ಮಾಜಿ ಯೋಧನ ಜತೆ ಹರ್ ಘರ್ ತಿರಂಗಾ ಅಭಿಯಾನ ಆಚರಿಸಿದ್ದಾರೆ. ಅವರ ಕೈಯಲ್ಲೇ ಮನೆ ಮೇಲೆ ಬಾವುಟ ಕಟ್ಟಿಸಿ ಮತ್ತಷ್ಟು ಸಂಭ್ರಮಿಸಿದ್ದಾರೆ.
ಗುಜರಾತ್ ಮೂಲದ ಮಾಜಿ ಯೋಧ ಬ್ರಿಜೇಶ್ ಶರ್ಮಾ ಕಳೆದ ಮೂರು ವರ್ಷಗಳಿಂದ ಸೈಕಲ್ ಜಾಥಾ ಮಾಡುತ್ತಿದ್ದು, ಈವರೆಗೆ 36 ಸಾವಿರ ಕಿ.ಮೀ. ಸೈಕಲ್ ತುಳಿದಿದ್ದಾರೆ. ಅವರ ಜಾಥಾ ಇಂದಿಗೂ ನಿಂತಿಲ್ಲ. 3 ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ದಿನದಂದು ಸೈಕಲ್ ಜಾಥಾ ಆರಂಭಿಸಿದ್ದಾರೆ. ಏಕ ಬಳಕೆ (ಸಿಂಗಲ್ ಯೂಸ್) ಪ್ಲಾಸ್ಟಿಕ್‍ನಿಂದ ಏನೇನು ತೊಂದರೆಯಾಗಲಿದೆ ಎಂಬುದನ್ನು ಸಭೆ-ಸಮಾರಂಭ, ಶಾಲಾ-ಕಾಲೇಜಿಗೆ ಹೋಗಿ ಮಕ್ಕಳು ಹಾಗೂ ದೊಡ್ಡವರಿಗೂ ಮನವರಿಕೆ ಮಾಡುತ್ತಿದ್ದಾರೆ. ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಬಿಡಬೇಕೆಂದು ಮನವಿ ಮಾಡುತ್ತಿದ್ದಾರೆ.
ಸ್ವಚ್ಛ ಭಾರತ್ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ, ರೈತ ಈ ದೇಶದ ಬೆನ್ನೆಲುಬು ಎಂದು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹೊಲಗದ್ದೆ-ತೋಟಗಳಲ್ಲಿ ಮಣ್ಣಿನ ಸವಕಳಿಯನ್ನು ಹೇಗೆ ತಡೆಯುವುದು ಎಂದು ರೈತರಿಗೂ ಮಾಹಿತಿ ನೀಡುತ್ತಿದ್ದಾರೆ. ಈ ರೀತಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೂರು ವರ್ಷಗಳಿಂದ ಸೈಕಲ್ ತುಳಿಯುತ್ತಿರುವ ಮಾಜಿ ಯೋಧನ ದೇಶಪ್ರೇಮಕ್ಕೆ ಕೊಟ್ಟಿಗೆಹಾರದ ಜನ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | Amrit Mahotsav | ಹರ್ ಘರ್ ತಿರಂಗಾ ಅಭಿಯಾನ: ಉಷಾ ಮಂಗೇಶ್ಕರ್‌ಗೆ ತ್ರಿವರ್ಣ ಧ್ವಜ ನೀಡಿದ ಸಿ.ಟಿ ರವಿ